ಹೈದರಾಬಾದ್ : ಇಲ್ಲಿನ ಸಯೀದಾಬಾದ್‌ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ 2ನೇ ತರಗತಿಯ ಹಿಂದೂ ವಿದ್ಯಾರ್ಥಿಯೊಬ್ಬನಿಗೆ ಇಸ್ಲಾಂ ಧರ್ಮದ 'ಕಲ್ಮಾ' ಮತ್ತು 'ಸುರಾ ಅಲ್-ಫಾತಿಹಾ' ಓದಿ ಬಾಯಿಪಾಠ ಮಾಡುವಂತೆ ಹೋಮ್‌ವರ್ಕ್ ನೀಡಿದ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಆರೋಪ ಎದುರಿಸುತ್ತಿದ್ದ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿದೆ. ಸಯೀದಾಬಾದ್‌ನ 'ಸಕ್ಸಸ್ ಸ್ಕೂಲ್'ನಲ್ಲಿ ಶೇಖ್ ಆಯಿಷಾ ಪರ್ವೀನ್ ಎಂಬ ಶಿಕ್ಷಕಿ ವಿದ್ಯಾರ್ಥಿಯ ಡೈರಿಯಲ್ಲಿ ಈ ಹೋಮ್‌ವರ್ಕ್ ಬರೆದಿದ್ದರು. ಮಗುವನ್ನು ಕರೆದೊಯ್ಯಲು ಶಾಲೆಗೆ ಬಂದಿದ್ದ ಸಂಬಂಧಿ ಸುಪ್ರಿಯಾ ಗೌಡ್ ಅವರು ಡೈರಿಯನ್ನು ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ತರಗತಿಯಲ್ಲಿದ್ದ 25 ವಿದ್ಯಾರ್ಥಿಗಳಲ್ಲಿ 24 ಮಂದಿ ಮುಸ್ಲಿಂ ಸಮುದಾಯದವರಾಗಿದ್ದು, ಈ ಮಗು ಒಬ್ಬನೇ ಹಿಂದೂ ವಿದ್ಯಾರ್ಥಿಯಾಗಿದ್ದನು. ಮುಸ್ಲಿಂ ವಿದ್ಯಾರ್ಥಿಗಳಿಗೆ ಇರುವ 'ದೀನಿಯಾತ್' (ಇಸ್ಲಾಂ ಧರ್ಮ ಶಿಕ್ಷಣ) ವಿಷಯದ ಹೋಮ್‌ವರ್ಕ್ ಅನ್ನು ಶಿಕ್ಷಕಿ ಈ ಮಗುವಿಗೂ ನೀಡಿದ್ದರು ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಪೋಷಕರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು. ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೇ ಹೊರತು ಧರ್ಮವನ್ನು ಹೇರಬಾರದು. ಒಂದು ವೇಳೆ ಧರ್ಮವನ್ನು ಕಲಿಸುವುದೇ ಆದಲ್ಲಿ ಭಗವದ್ಗೀತೆ ಮತ್ತು ಬೈಬಲ್‌ಗೂ ಸಮಾನ ಮಹತ್ವ ನೀಡಬೇಕು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಎಚ್ಚೆತ್ತ ಶಾಲಾ ಆಡಳಿತ ಮಂಡಳಿಯು ಇದು ಅಚಾತುರ್ಯದಿಂದ ನಡೆದ ತಪ್ಪು ಎಂದು ಒಪ್ಪಿಕೊಂಡಿದ್ದು, ತಕ್ಷಣವೇ ಶಿಕ್ಷಕಿ ಶೇಖ್ ಆಯಿಷಾ ಪರ್ವೀನ್ ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಅಲ್ಲದೆ, ಭವಿಷ್ಯದಲ್ಲಿ ತಮ್ಮ ಯಾವುದೇ ಸಂಸ್ಥೆಗಳಲ್ಲಿ ಅವರಿಗೆ ಉದ್ಯೋಗ ನೀಡದಂತೆ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಸದ್ಯ ಶಾಲೆಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.