ವಯನಾಡ್ : ಸಂಸದೆ ಪ್ರಿಯಾಂಕಾ ಗಾಂಧಿ ಅವರ ಕಚೇರಿ ಸಿಬ್ಬಂದಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಕೇರಳದ ಎಲ್ಲತ್ತೂರು ಶಾಸಕಿ ವಿದ್ಯಾ ಬಾಲಕೃಷ್ಣನ್ ಅವರಿಗೆ ಕರೆ ಮಾಡಿ ₹3 ಕೋಟಿ ನೀಡಿದರೆ ಸಚಿವ ಸ್ಥಾನ ಕೊಡಿಸುವುದಾಗಿ ವಂಚಿಸಲು ಯತ್ನಿಸಿದ್ದು, ಆರೋಪಿಯನ್ನು ಪತ್ತೆಹಚ್ಚಲು ಕೋಯಿಕ್ಕೋಡ್ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜುಲೈ 6 ರಂದು ಶಾಸಕಿ ವಿದ್ಯಾ ಬಾಲಕೃಷ್ಣನ್ ಅವರಿಗೆ ವಾಟ್ಸ್‌ಆಯಪ್ ಮೂಲಕ ಕರೆ ಮಾಡಿರುವ ಆರೋಪಿ, ತನ್ನನ್ನು ರಾಜ್ ಕುಮಾರ್ ಎಂದು ಪರಿಚಯಿಸಿಕೊಂಡು ತಾವು ಪ್ರಿಯಾಂಕಾ ಗಾಂಧಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಾನೆ. ಕೇರಳದಲ್ಲಿ ಶೀಘ್ರದಲ್ಲೇ ಸಂಪುಟ ಪುನರ್‌ರಚನೆಯಾಗಲಿದ್ದು, ₹3 ಕೋಟಿ ನೀಡಿದರೆ ಸಚಿವ ಸ್ಥಾನ ಕೊಡಿಸುವುದಾಗಿ ಆಮಿಷ ಒಡ್ಡಿದ್ದಾನೆ. ಅಲ್ಲದೇ, ಕೋಯಿಕ್ಕೋಡ್ ಜಿಲ್ಲೆಯ ಸಂಸದರೊಬ್ಬರಿಂದ ಶಾಸಕರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾನೆ.
ಆರೋಪಿಯ ಮಾತಿನಿಂದ ತಕ್ಷಣವೇ ಎಚ್ಚೆತ್ತ ವಿದ್ಯಾ ಅವರು ಸಂಸದರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ಸಂಸದರು, 'ತಮಗೆ ಎಐಸಿಸಿ ಪ್ರಧಾನ ಕಚೇರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರಿಂದ ಕರೆ ಬಂದಿದ್ದರಿಂದ, ಇಬ್ಬರು ಶಾಸಕರ ದೂರವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದಾಗಿ' ಸ್ಪಷ್ಟಪಡಿಸಿದ್ದಾರೆ. ಬಳಿಕ ವಿದ್ಯಾ ಅವರು ಈ ಬಗ್ಗೆ ಎಐಸಿಸಿ ಕಚೇರಿಯನ್ನು ಸಂಪರ್ಕಿಸಿದಾಗ, ಅದು ಸಂಪೂರ್ಣ ನಕಲಿ ಕರೆ ಮತ್ತು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಆ ಹೆಸರಿನ ಯಾರೂ ಇಲ್ಲ ಎಂಬುದು ದೃಢಪಟ್ಟಿದೆ. ಸದ್ಯ ಶಾಸಕಿ ನೀಡಿದ ದೂರಿನ ಮೇರೆಗೆ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.