ನವದೆಹಲಿ : ಭಾರತೀಯ ಬ್ರ್ಯಾಂಡ್‌ಗಳ ಮೊಬೈಲ್ ಫೋನ್ ತಯಾರಿಕೆಗೆ ಉತ್ತೇಜನ ನೀಡಲು ಮತ್ತು ತಾಂತ್ರಿಕ ಸಾರ್ವಭೌಮತ್ವ ಸಾಧಿಸಲು ಕೇಂದ್ರ ಸಚಿವ ಸಂಪುಟವು 62,500 ಕೋಟಿ ರೂಪಾಯಿಗಳ ಬೃಹತ್ ಮೊಬೈಲ್ ಫೋನ್ ಉತ್ಪಾದನಾ ಯೋಜನೆಗೆ (PLI 2.0) ಅನುಮೋದನೆ ನೀಡಿದೆ. ಈ ನೂತನ ಪ್ರೋತ್ಸಾಹಧನ ಆಧಾರಿತ ಯೋಜನೆಯು 2026-27ರಿಂದ 2030-31ರವರೆಗೆ ಐದು ವರ್ಷಗಳ ಅವಧಿಗೆ ಜಾರಿಯಲ್ಲಿರಲಿದೆ. ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ಯೋಜನೆಯ ಮೂಲಕ ಸುಮಾರು 15 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಫ್ತು ಸಾಧ್ಯವಾಗಲಿದ್ದು, 60,000 ಹೊಸ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದ್ದಾರೆ.
ಈಗಾಗಲೇ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿರುವ ಭಾರತದಲ್ಲಿ, ಸ್ಮಾರ್ಟ್‌ಫೋನ್‌ಗಳು ದೇಶದ ಅತಿ ಹೆಚ್ಚು ರಫ್ತು ಆಗುವ ಸರಕಾಗಿ ಸ್ಥಾನ ಪಡೆದಿವೆ. ಡೀಸೆಲ್ ಇಂಧನ ಮತ್ತು ಕತ್ತರಿಸಿದ ವಜ್ರಗಳಂತಹ ಸಾಂಪ್ರದಾಯಿಕ ರಫ್ತು ವಸ್ತುಗಳನ್ನು ಮೀರಿಸಿ, ದೇಶವು ಬರೋಬ್ಬರಿ 2.62 ಲಕ್ಷ ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ. ಇದರಲ್ಲಿ ಆ್ಯಪಲ್ ಸಂಸ್ಥೆಯ ಕೊಡುಗೆ ಪ್ರಮುಖವಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಪಿಎಲ್‌ಐ ಯೋಜನೆಯ ಅವಧಿಯು 2026ರ ಮಾರ್ಚ್ 31ಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಈ ಎರಡನೇ ಹಂತದ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ನೂತನ ಯೋಜನೆಯ ಅವಧಿಯಲ್ಲಿ ದೇಶದ ಒಟ್ಟು ಮೊಬೈಲ್ ಉತ್ಪಾದನೆಯು 39 ಲಕ್ಷ ಕೋಟಿ ರೂಪಾಯಿ ತಲುಪುವ ನಿರೀಕ್ಷೆಯಿದ್ದು, ಇದು ಭಾರತವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವನ್ನಾಗಿ ಮತ್ತಷ್ಟು ಬಲಪಡಿಸಲಿದೆ. ಪ್ರೋತ್ಸಾಹಧನದ ಅಡಿಯಲ್ಲಿ ಮೊಬೈಲ್ ತಯಾರಿಕಾ ಮಾರಾಟದ ಮೇಲೆ ಶೇಕಡಾ 2.25 ರಿಂದ ಶೇಕಡಾ 5 ರವರೆಗೆ ವಿಭಿನ್ನ ದರಗಳಲ್ಲಿ ಬೆಂಬಲ ಸಿಗಲಿದೆ. ಪ್ರಮುಖ ಘಟಕಗಳನ್ನು ದೇಶೀಯವಾಗಿಯೇ ಖರೀದಿಸಿದರೆ ಶೇಕಡಾ 1.5 ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನ ಸಿಗಲಿದ್ದು, ಸ್ವದೇಶಿ ಬ್ರ್ಯಾಂಡ್‌ಗಳ ಅಭಿವೃದ್ಧಿ, ಉತ್ಪನ್ನ ವಿನ್ಯಾಸ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ (R&D) ಅರ್ಹ ಮಾರಾಟದ ಮೇಲೆ ಶೇಕಡಾ 3 ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ.