ನವದೆಹಲಿ : ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಅಡಿಯಲ್ಲಿ ಜಾರಿಗೆ ತರಲಾಗಿರುವ ಮೂರು-ಭಾಷಾ ನೀತಿಯ ಅನುಷ್ಠಾನವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 'ಇಂಗ್ಲಿಷ್ ಅನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ?' ಎಂಬ ಮಹತ್ವದ ಪ್ರಶ್ನೆಯನ್ನು ಎತ್ತಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೆ. ಜೋಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠವು, ನೀತಿಯಲ್ಲಿ ಬಳಸಲಾಗಿರುವ “ಸ್ಥಳೀಯ ಭಾರತೀಯ ಭಾಷೆ (Native Indian Language)” ಎಂಬ ಪದಪ್ರಯೋಗವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣೆಯ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು ಮಾತನಾಡಿ, "ಸಂವಿಧಾನದ ಮೂಲ ಉದ್ದೇಶ ಭಾರತೀಯ ಭಾಷೆಗಳಿಗೆ ಉತ್ತೇಜನ ನೀಡುವುದಾಗಿದೆ. ಆದರೆ ‘ಸ್ಥಳೀಯ ಭಾರತೀಯ ಭಾಷೆ’ ಎಂಬ ಪದಬಳಕೆಯನ್ನು ನಾವು ಮರುಪರಿಶೀಲಿಸಬೇಕಾಗಬಹುದು. ಭಾರತದಲ್ಲಿ ಇಂಗ್ಲಿಷ್ ಅನ್ನು ಸ್ಥಳೀಯ ಭಾಷೆ ಎಂದು ಪರಿಗಣಿಸಲು ಸಾಧ್ಯವೇ?" ಎಂದು ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ ಅವರು, ಒಂದು ಕಾಲದಲ್ಲಿ ಭಾರತದ ನ್ಯಾಯಾಲಯಗಳಲ್ಲಿ ಪರ್ಷಿಯನ್ ಭಾಷೆಯನ್ನು ಅಧಿಕೃತ ಭಾಷೆಯಾಗಿ ಬಳಸಲಾಗುತ್ತಿತ್ತು ಎಂಬುದನ್ನು ನೆನಪಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, ಭಾಷೆಗಳ ಆಯ್ಕೆಯನ್ನು ರಾಜ್ಯಗಳಿಗೆ ಬಿಡಲಾಗಿದ್ದರೂ, ಪ್ರಾಯೋಗಿಕವಾಗಿ ಹಲವು ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ ಎಂದು ಕೋರ್ಟ್ ಗಮನಕ್ಕೆ ತಂದರು. ಎನ್‌ಸಿಇಆರ್‌ಟಿ ವೆಬ್‌ಸೈಟ್‌ನಲ್ಲಿ ಪ್ರಸ್ತುತ ಕೇವಲ ಮೂರು ಭಾಷೆಗಳ ಪಠ್ಯಪುಸ್ತಕಗಳು ಮಾತ್ರ ಲಭ್ಯವಿದ್ದು, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಉಳಿದ 22 ಭಾಷೆಗಳ ಪಠ್ಯಪುಸ್ತಕಗಳು ಇನ್ನೂ ಲಭ್ಯವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಇಂಗ್ಲಿಷ್ ಹಾಗೂ ಇತರ ವಿದೇಶಿ ಭಾಷೆಗಳನ್ನು ಬಿಟ್ಟು ಸ್ಥಳೀಯ ಭಾಷೆಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, "ಯಾವುದೇ ಭಾಷೆಯನ್ನು ಕಲಿಯುವುದು ಎಂದಿಗೂ ವ್ಯರ್ಥವಾಗುವುದಿಲ್ಲ" ಎಂದು ಮಾರ್ಮಿಕವಾಗಿ ನುಡಿದರು. ಆದಾಗ್ಯೂ, 2026ರ ಜೂನ್ 29ರಂದು ಸಿಬಿಎಸ್‌ಇ ಹೊರಡಿಸಿದ ಸ್ಪಷ್ಟೀಕರಣದ ನಂತರವೂ ಅರ್ಜಿದಾರರು ಎತ್ತಿರುವ ಮೂಲಭೂತ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ ಎಂದು ಪೀಠವು ಒಪ್ಪಿಕೊಂಡಿತು. ಅಲ್ಲದೆ, ಜುಲೈ 1 ರೊಳಗೆ ಎಲ್ಲಾ 22 ಭಾಷೆಗಳ ಪಠ್ಯಪುಸ್ತಕಗಳು ಸಿದ್ಧವಾಗುತ್ತವೆ ಎಂದು ಹೇಳಲಾಗಿದ್ದರೂ, ಅಷ್ಟೊಂದು ಭಾಷೆಗಳಲ್ಲಿ ಬೋಧನೆ ಮಾಡಲು ಅಗತ್ಯವಿರುವ ತರಬೇತಿ ಹೊಂದಿದ ಶಿಕ್ಷಕರು ಮತ್ತು ಸಂಪನ್ಮೂಲಗಳ ಕೊರತೆ ದೇಶದಲ್ಲಿದೆ ಎಂದು ಹಿರಿಯ ವಕೀಲ ಶ್ಯಾಮ್ ದಿವಾನ್ ವಾದಿಸಿದರು.
ಈ ಕಠಿಣ ನೀತಿಯು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆಯೂ ಅತ್ಯಂತ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಲಿಖಿತ ಉತ್ತರ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಿದರು. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಕೇವಲ 10 ದಿನಗಳ ಒಳಗಾಗಿ ಸೂಕ್ತ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.