ನವದೆಹಲಿ : ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ಹೊಸ ತ್ರಿಭಾಷಾ ನೀತಿಯಡಿ ಉತ್ತೀರ್ಣರಾಗಲು ಮೂರನೇ ಭಾಷೆಯ (R3) ಮೌಲ್ಯಮಾಪನದಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕಿದೆ ಎಂದು ತಿಳಿಸಿದೆ. ಆದರೆ, ಈ ಮೂರನೇ ಭಾಷೆಯು 2027-28ನೇ ಸಾಲಿನ ಮಕ್ಕಳ ಬೋರ್ಡ್ ಪರೀಕ್ಷೆಯ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಜುಲೈ 10 ರಂದು ಅಧಿಕೃತ ಸುತ್ತೋಲೆ ಹೊರಡಿಸಲಾಗಿದ್ದು, 10ನೇ ತರಗತಿಯಲ್ಲಿ R3 ಭಾಷಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟವಾಗುವ ಮೊದಲು ಮತ್ತೊಮ್ಮೆ ಮರು ಮೌಲ್ಯಮಾಪನದ ಅವಕಾಶ ನೀಡಲಾಗುವುದು ಎಂದು ಮಂಡಳಿ ಹೇಳಿದೆ. 8ನೇ ತರಗತಿಯಲ್ಲಿದ್ದ ಅದೇ ಮೂರು ಭಾಷೆಗಳ ಸಂಯೋಜನೆ 9ನೇ ತರಗತಿಯಲ್ಲೂ ಮುಂದುವರಿಯಲಿದ್ದು, ಇವುಗಳಲ್ಲಿ ಒಂದನ್ನು R3 ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎನ್ಸಿಇಆರ್ಟಿ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳಿಗಾಗಿ R3 ಭಾಷಾ ಕಲಿಕಾ ಸಂಪನ್ಮೂಲಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ.
ಹೊಸ ನಿಯಮದ ಪ್ರಕಾರ ಪ್ರತಿ ವಿದ್ಯಾರ್ಥಿಯೂ ಕಡ್ಡಾಯವಾಗಿ ಮೂರು ಭಾಷೆಗಳನ್ನು ಕಲಿಯಬೇಕು. ವಿನಾಯಿತಿಗಳನ್ನು ಹೊರತುಪಡಿಸಿ ಈ ಮೂರರಲ್ಲಿ ಕನಿಷ್ಠ ಎರಡು ಭಾರತೀಯ ಭಾಷೆಗಳಾಗಿರಬೇಕು (ಉದಾಹರಣೆಗೆ ಕನ್ನಡ, ಹಿಂದಿ, ಸಂಸ್ಕೃತ, ತಮಿಳು, ತೆಲುಗು ಇತ್ಯಾದಿ). ಇಂಗ್ಲಿಷ್, ಫ್ರೆಂಚ್ ಹಾಗೂ ಜರ್ಮನ್ ಭಾಷೆಗಳನ್ನು ಸ್ಥಳೀಯವಲ್ಲದ ಭಾಷೆಗಳೆಂದು ಪರಿಗಣಿಸಲಾಗುತ್ತದೆ. ಆದರೆ, 2026-27ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಳೆಯ ಪದ್ಧತಿಯೇ ಮುಂದುವರಿಯಲಿದ್ದು, ಅವರು ಕೇವಲ ಎರಡು ಭಾಷೆಗಳನ್ನು ಮಾತ್ರ ಕಲಿಯಲಿದ್ದಾರೆ. ಇವರಿಗೆ ಯಾವುದೇ ಮೂರನೇ ಭಾಷೆಯ ಅಗತ್ಯವಿರುವುದಿಲ್ಲ ಎಂದು ಸಿಬಿಎಸ್ಇ ಸ್ಪಷ್ಟಪಡಿಸಿದೆ.
ಮೂರನೇ ಭಾಷೆಯನ್ನು (R3) ಕೇವಲ ಶಾಲಾ ಮಟ್ಟದ ಆಂತರಿಕ ಮೌಲ್ಯಮಾಪನದ ಮೂಲಕ ಮಾತ್ರ ಮೌಲ್ಯೀಕರಿಸಲಾಗುತ್ತದೆ. ಈ ಬ್ಯಾಚ್ಗಳ ವಿದ್ಯಾರ್ಥಿಗಳು 10ನೇ ತರಗತಿಗೆ ಬಂದಾಗ ಮೂರನೇ ಭಾಷೆಗೆ ಯಾವುದೇ ಸಿಬಿಎಸ್ಇ ಬೋರ್ಡ್ ಪರೀಕ್ಷೆ ಇರುವುದಿಲ್ಲ ಎಂದು ಮಂಡಳಿ ತಿಳಿಸಿದೆ.