ಮುಂಬೈ : ನಟ ಮತ್ತು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರಿಗೆ ಎರಡೂ ಭುಜಗಳಲ್ಲಿ ತೀವ್ರವಾದ ರೋಟೇಟರ್ ಕಫ್ ಗಾಯಗಳು ಉಂಟಾಗಿದ್ದು, ವೈದ್ಯರ ತಂಡವು ಅವರ ಬಲ ಭುಜಕ್ಕೆ ಮೂರೂವರೆ ಗಂಟೆಗಳ ಕಾಲ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪವನ್ ಕಲ್ಯಾಣ್, 'ಇದು ಅಭಿಮಾನಿಗಳು ಪ್ರೀತಿಯಿಂದ ಕೊಟ್ಟ ಗಾಯ' ಎಂದು ತಮಾಷೆಯಾಗಿ ಹೇಳಿಕೊಂಡಿದ್ದರು. ಇದೀಗ ಗಾಯದ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪವನ್ ಕಲ್ಯಾಣ್ ಅವರನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ನೇವಾ ಸಹ ಜೊತೆಯಲ್ಲಿದ್ದರು. ಮುಖ್ಯಮಂತ್ರಿಗಳ ಭೇಟಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನ್ನಾ, ಪವನ್ ಕಲ್ಯಾಣ್ ಅವರ ಧೀಮಂತ ವ್ಯಕ್ತಿತ್ವದ ಬಗ್ಗೆ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. 'ಪವನ್ ಅವರು ತಮ್ಮ ನೋವನ್ನು ಎಂದಿಗೂ ತೋರಿಕೊಳ್ಳುವವರಲ್ಲ ಅಥವಾ ಯಾರಿಂದಲೂ ಅನುಕಂಪ ಬಯಸುವವರಲ್ಲ. ಅವರ ಬದುಕಿನ ಜವಾಬ್ದಾರಿಯ ಹೊರೆ ಯಾವಾಗಲೂ ಅವರ ದೈಹಿಕ ನೋವಿಗಿಂತ ಹೆಚ್ಚಾಗಿಯೇ ಇರುತ್ತದೆ. ಅವರು ಬಹಳ ಅಪರೂಪಕ್ಕೆ ದೂರು ಹೇಳುತ್ತಾರೆ, ನೋವು ತೀರಾ ಮಿತಿ ಮೀರಿದಾಗ ಮಾತ್ರ ಅದನ್ನು ಹೊರಹಾಕುತ್ತಾರೆ' ಎಂದು ತಿಳಿಸಿದ್ದಾರೆ. ಅಲ್ಲದೆ, ಸದ್ಯಕ್ಕೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮತ್ತು ಅವರು ಸುರಕ್ಷಿತ ಕೈಗಳಲ್ಲಿದ್ದಾರೆ ಎಂದು ಅರಿವಾಗುವಂತೆ ಮಾಡುವುದು ನನ್ನ ಜವಾಬ್ದಾರಿಯಾಗಿದ್ದು, ಅವರು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅನ್ನಾ ಭರವಸೆ ವ್ಯಕ್ತಪಡಿಸಿದ್ದಾರೆ.
ಪವನ್ ಕಲ್ಯಾಣ್ ಅವರನ್ನು ಭೇಟಿಯಾದ ಬಳಿಕ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, 'ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜನಸೇನಾ ಪಕ್ಷದ ಅಧಿಕೃತ ಹೇಳಿಕೆಯ ಪ್ರಕಾರ, ವೈದ್ಯರು ಮೊದಲೇ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಿದ್ದರೂ, ಪವನ್ ಕಲ್ಯಾಣ್ ಅವರು ತಮ್ಮ ಅಧಿಕೃತ ಕರ್ತವ್ಯಗಳು ಮತ್ತು ಪ್ರಜಾಸೇವೆಯನ್ನು ಮುಂದುವರಿಸಲು ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದರು. ಚೇತರಿಕೆಯ ದೃಷ್ಟಿಯಿಂದ ಈ ಬಾರಿ ಕೇವಲ ಬಲ ಭುಜಕ್ಕೆ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಎಡ ಭುಜದ ಶಸ್ತ್ರಚಿಕಿತ್ಸೆಯನ್ನು ಸುಮಾರು ಎರಡು ತಿಂಗಳ ನಂತರ ನಡೆಸಲು ನಿರ್ಧರಿಸಲಾಗಿದೆ. ವೈದ್ಯಕೀಯ ತಪಾಸಣೆಯ ಸಮಯದಲ್ಲಿ ಅವರ ಬಲ ಭುಜದಲ್ಲಿ 'ಅವಲ್ಶನ್ ಫ್ರಾಕ್ಚರ್' (ಮೂಳೆ ಮುರಿತ) ಇರುವುದು ಪತ್ತೆಯಾಗಿದ್ದು, ಇದು ಮೊದಲೇ ತಿಳಿದಿರದ ಕಾರಣ ಶಸ್ತ್ರಚಿಕಿತ್ಸೆಗೆ ನಿರೀಕ್ಷಿತ ಸಮಯಕ್ಕಿಂತ ಹೆಚ್ಚು ಸಮಯ ಹಿಡಿದಿದೆ. ಸದ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಪವನ್ ಕಲ್ಯಾಣ್ ಅವರು ವೈದ್ಯರ ಸೂಕ್ತ ನಿಗಾದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜನಸೇನಾ ಪಕ್ಷದ ಪ್ರಮುಖರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.