image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನಕಲಿ ಆಧಾರ್ ಕಾರ್ಡ್‌ಗಳೊಂದಿಗೆ ದಕ್ಷಿಣ ಭಾರತದತ್ತ ಹರಿಯುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರ ಮಹಾಪೂರ

ನಕಲಿ ಆಧಾರ್ ಕಾರ್ಡ್‌ಗಳೊಂದಿಗೆ ದಕ್ಷಿಣ ಭಾರತದತ್ತ ಹರಿಯುತ್ತಿರುವ ಅಕ್ರಮ ಬಾಂಗ್ಲಾ ವಲಸಿಗರ ಮಹಾಪೂರ

ಬೆಂಗಳೂರು : ಪಶ್ಚಿಮ ಬಂಗಾಳದ ಗಡಿಭಾಗದ ಮೂಲಕ ತಲಾ 10 ಸಾವಿರ ರೂಪಾಯಿ ನೀಡಿ ಏಜೆಂಟರ ಸಹಾಯದಿಂದ ಭಾರತದೊಳಗೆ ನುಸುಳುತ್ತಿರುವ ಅಕ್ರಮ ಬಾಂಗ್ಲಾದೇಶಿ ನಿವಾಸಿಗಳ ಜಾಲ ದೇಶದ ಭದ್ರತೆಗೆ ದೊಡ್ಡ ಆತಂಕ ಮೂಡಿಸಿದೆ. ಬಾಂಗ್ಲಾದೇಶದ ರಾಜ್‌ಸಾಹಿ ಹಾಗೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಗಡಿ ಜಿಲ್ಲೆಗಳಾಗಿದ್ದು, ಇಲ್ಲಿ ಬಿಎಸ್‌ಎಫ್ ಕಾವಲಿದ್ದರೂ ಏಜೆಂಟರು ಗಡಿ ಸಿಬ್ಬಂದಿಯೊಂದಿಗೆ ಒಪ್ಪಂದ ಮಾಡಿಕೊಂಡು ತಲಾ 10 ಸಾವಿರ ರೂ. ಪಡೆದು ಅಕ್ರಮವಾಗಿ ಜನರನ್ನು ಗಡಿ ದಾಟಿಸುತ್ತಿದ್ದಾರೆ. ಭಾರತದಿಂದ ಮರಳಿ ಬಾಂಗ್ಲಾಕ್ಕೆ ಹೋಗಬೇಕಾದರೂ ಇದೇ ರೀತಿ 10 ಸಾವಿರ ರೂ. ನೀಡಬೇಕಾಗುತ್ತದೆ ಎಂಬ ಅಸಲಿ ಸತ್ಯವನ್ನು ವಲಸಿಗರು ಬಿಚ್ಚಿಟ್ಟಿದ್ದಾರೆ. ಭಾರತಕ್ಕೆ ಪ್ರವೇಶಿಸಿದ ತಕ್ಷಣ ಏಜೆಂಟರು ಸ್ಥಳೀಯ ನಿವಾಸಿಯೊಬ್ಬರಿಗೆ ಹಣ ನೀಡಿ ಅವರ ಒರಿಜಿನಲ್ ಆಧಾರ್ ಕಾರ್ಡ್ ಪಡೆದು ಸ್ಕ್ಯಾನ್ ಮಾಡುತ್ತಾರೆ. ನಂತರ ಅದಕ್ಕೆ ಬಾಂಗ್ಲಾ ವಲಸಿಗನ ಫೋಟೋವನ್ನು ಅದಲು-ಬದಲು ಮಾಡಿ ಕಲರ್ ಪ್ರಿಂಟ್ ಪಡೆದು ಲ್ಯಾಮಿನೇಷನ್ ಮಾಡಿಕೊಡುತ್ತಾರೆ. ಈ ನಕಲಿ ಆಧಾರ್ ಕಾರ್ಡ್‌ಗಳು ಮೇಲ್ನೋಟಕ್ಕೆ ಅಸಲಿಯಂತೆಯೇ ಕಾಣುವುದರಿಂದ, ಇವುಗಳನ್ನು ಬಳಸಿಕೊಂಡು ವಲಸಿಗರು ದೇಶದ ವಿವಿಧೆಡೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ.  

​ಪ್ರಸ್ತುತ ದಕ್ಷಿಣ ಭಾರತದಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ಕಟ್ಟಡ ಕಾಮಗಾರಿ, ರಸ್ತೆ ನಿರ್ಮಾಣ, ಮೀನುಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಇವರಿಗೆ ಸುಲಭವಾಗಿ ಉದ್ಯೋಗ ಸಿಗುತ್ತಿದೆ. ಉತ್ತರ ಭಾರತದ ಕಾರ್ಮಿಕರ ತಂಡಗಳ ಜೊತೆ ಸೇರಿಕೊಂಡು ರೈಲುಗಳ ಮೂಲಕ ಇವರು ದಕ್ಷಿಣದ ರಾಜ್ಯಗಳಿಗೆ ತಲುಪುತ್ತಿದ್ದಾರೆ. ಗುತ್ತಿಗೆದಾರರು ಯಾವುದೇ ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ ಕೆಲಸ ನೀಡುತ್ತಿರುವುದು ಇವರಿಗೆ ವರವಾಗಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ವಲಸಿಗರ ವಿರುದ್ಧ ಬಿಗು ತಪಾಸಣೆ ಮತ್ತು ಗಡೀಪಾರು ಪ್ರಕ್ರಿಯೆ ತೀವ್ರಗೊಂಡಿರುವುದರಿಂದ, ಕಳೆದ ಎರಡು ತಿಂಗಳುಗಳಿಂದ ಅಕ್ರಮ ವಲಸಿಗರು ದಕ್ಷಿಣದ ಸುರಕ್ಷಿತ ರಾಜ್ಯಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡುತ್ತಿದ್ದಾರೆ. ಇಲ್ಲಿನ ಸ್ಥಳೀಯ ಯುವತಿಯರನ್ನು ಮದುವೆಯಾಗಿ ಪೌರತ್ವ ಪಡೆಯುವ ಪ್ರಯತ್ನಗಳೂ ನಡೆಯುತ್ತಿವೆ.  

​ಕರ್ನಾಟಕದಲ್ಲಿ ಸದ್ಯ 13,675 ಅಕ್ರಮ ವಿದೇಶಿ ವಲಸಿಗರನ್ನು ಪತ್ತೆಹಚ್ಚಲಾಗಿದ್ದು, ಇವರಲ್ಲಿ ಶೇಕಡಾ 80 ರಷ್ಟು ಮಂದಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಇವರ ಗಡೀಪಾರು ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವ ನಡುವೆಯೇ, ಮಂಗಳೂರಿನ ಸುರತ್ಕಲ್ ಬಳಿಯ ಮುಕ್ಕಾದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರ ಮೇಲೆ ನಡೆದ ದಾಳಿಯಲ್ಲಿ 8 ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, "ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನ ಗುತ್ತಿಗೆದಾರರು ಕಡ್ಡಾಯವಾಗಿ ನೈಜ ದಾಖಲೆಗಳನ್ನು ಪರಿಶೀಲಿಸಬೇಕು. ದಾಖಲೆಗಳಲ್ಲಿರುವ ಅವರ ಊರುಗಳ ಬಗ್ಗೆ ಸಾಮಾನ್ಯ ಪ್ರಶ್ನೆಗಳನ್ನು ಕೇಳುವ ಮೂಲಕವೂ ಅವರ ನೈಜತೆಯನ್ನು ಪತ್ತೆಹಚ್ಚಬಹುದು," ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಾಗೂ ಪೊಲೀಸರು ವಲಸೆ ಏಜೆನ್ಸಿಗಳು ಮತ್ತು ಗುತ್ತಿಗೆದಾರರ ದಾಖಲೆಗಳ ಮೇಲೆ ತೀವ್ರ ನಿಗಾವಹಿಸುವ ಅಗತ್ಯವಿದೆ.

Category
ಕರಾವಳಿ ತರಂಗಿಣಿ