image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಗಾನಕೋಗಿಲೆ ಎಸ್. ಜಾನಕಿ ವಿಧಿವಶ: ಮಗನ ಅಗಲಿಕೆಯ ದುಃಖದೊಂದಿಗೆ ಇಹಲೋಕ ತ್ಯಜಿಸಿದ ಗಾಯಕಿ

ಗಾನಕೋಗಿಲೆ ಎಸ್. ಜಾನಕಿ ವಿಧಿವಶ: ಮಗನ ಅಗಲಿಕೆಯ ದುಃಖದೊಂದಿಗೆ ಇಹಲೋಕ ತ್ಯಜಿಸಿದ ಗಾಯಕಿ

ಬೆಂಗಳೂರು : ದಕ್ಷಿಣ ಭಾರತದ ಕೋಟ್ಯಂತರ ಸಂಗೀತ ಪ್ರೇಮಿಗಳನ್ನು ತಮ್ಮ ಮಾಧುರ್ಯಭರಿತ ಕಂಠದಿಂದ ರಂಜಿಸಿದ್ದ ಗಾನಕೋಗಿಲೆ ಎಸ್. ಜಾನಕಿ ಅವರು ಇಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಆರು ದಶಕಗಳ ಕಾಲ ಸಂಗೀತ ಸಾಮ್ರಾಜ್ಯದ ಮಹಾರಾಜ್ಞಿಯಾಗಿ ಮೆರೆದ ಜಾನಕಿ ಅಮ್ಮನವರ ಕೊನೆಯ ದಿನಗಳ ಬದುಕು ಮಾತ್ರ ಅತ್ಯಂತ ನೋವಿನಿಂದ ಕೂಡಿತ್ತು. ತಮ್ಮ 88ರ ಇಳಿವಯಸ್ಸಿನಲ್ಲಿ ಇದ್ದೊಬ್ಬ ಏಕೈಕ ಮಗ ಮುರಳಿ ಕೃಷ್ಣ (65) ಅವರನ್ನು ಕಳೆದುಕೊಂಡ ದುಃಖದಲ್ಲೇ ಜಾನಕಿಯವರು ಕೊನೆಯ ದಿನಗಳನ್ನು ಕಳೆದಿದ್ದರು. ಮಗನ ಹಠಾತ್ ಸಾವು ತಾಯಿಯಾಗಿ ಅವರನ್ನು ಸಂಪೂರ್ಣವಾಗಿ ಕುಗ್ಗಿಸಿಬಿಟ್ಟಿತ್ತು.

ಮೂಲತಃ ಆಂಧ್ರಪ್ರದೇಶದ ಗುಂಟೂರಿನವರಾದ ಎಸ್. ಜಾನಕಿ ಅವರು 50ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿ ಚೆನ್ನೈನಲ್ಲಿ ನೆಲೆಸಿದ್ದರು. ತಮ್ಮ ಅಸಾಧಾರಣ ಯಶಸ್ಸಿನ ಅವಧಿಯಲ್ಲೇ ರಾಮ್ ಪ್ರಸಾದ್ ಅವರನ್ನು ವಿವಾಹವಾಗಿದ್ದ ಜಾನಕಿ ಅವರಿಗೆ ಜನಿಸಿದ ಏಕೈಕ ಪುತ್ರನೇ ಮುರಳಿ ಕೃಷ್ಣ. ತಾಯಿಯಂತೆಯೇ ಕಲಾ ಜಗತ್ತಿನಲ್ಲಿ ಆಸಕ್ತಿ ಹೊಂದಿದ್ದ ಮುರಳಿ ಕೃಷ್ಣ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ ಪ್ರಸಿದ್ಧ ಭರತನಾಟ್ಯ ಕಲಾವಿದರು ಆಗಿದ್ದರು. ಇತ್ತೀಚಿನ ವರ್ಷಗಳಲ್ಲಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ತಾಯಿಗೆ ಮುರಳಿ ಕೃಷ್ಣ ಅವರೇ ಏಕೈಕ ಆಸರೆಯಾಗಿದ್ದರು. ಭರತನಾಟ್ಯ ಅಭ್ಯಾಸ ಮಾಡುವಾಗ ತಮ್ಮ ಗುರುವಾಗಿದ್ದ ಉಮಾ ಎಂಬುವವರನ್ನು ಮುರಳಿ ಕೃಷ್ಣ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ ಬಳಿಕ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಉಮಾ ಅವರಿಂದ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ನಂತರ ಹೆಣ್ಣುಮಕ್ಕಳು ತಾಯಿಯೊಂದಿಗೆ ಹೋದಾಗ, ಒಂಟಿಯಾಗಿದ್ದ ಮುರಳಿ ಕೃಷ್ಣ ತಮ್ಮ ತಾಯಿ ಎಸ್. ಜಾನಕಿ ಅವರೊಂದಿಗೆ ಉಳಿದ ದಿನಗಳನ್ನು ಕಳೆಯಲು ನಿರ್ಧರಿಸಿದ್ದರು. ತಾಯಿಯ ಯೋಗಕ್ಷೇಮವನ್ನು ಅವರೇ ಹತ್ತಿರದಿಂದ ನೋಡಿಕೊಳ್ಳುತ್ತಿದ್ದರು.

ಕಳೆದ ಜನವರಿಯಲ್ಲಿ ಮುರಳಿ ಕೃಷ್ಣ ಅವರಿಗೆ ಹಠಾತ್ ಆರೋಗ್ಯ ಏರುಪೇರಾಗಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. 88ರ ಇಳಿವಯಸ್ಸಿನಲ್ಲಿ ತನ್ನ ಕಣ್ಣೆದುರೇ ಮಗ ಶವವಾಗಿ ಬಿದ್ದಿದ್ದನ್ನು ಕಂಡು ಜಾನಕಿಯವರು  ಅಕ್ಷರಶಃ ಜೀವಚ್ಛವವಾಗಿದ್ದರು. ಹೆತ್ತ ಮಗನನ್ನು ಸ್ಮಶಾನಕ್ಕೆ ಕಳುಹಿಸುವ ದುರ್ಗತಿ ಯಾವ ತಾಯಿಗೂ ಬರಬಾರದು ಎಂದು ಅಂದು ಚಿತ್ರರಂಗ ಕಂಬನಿ ಮಿಡಿದಿತ್ತು. ಆ ಘಟನೆಯ ನಂತರ ಜಾನಕಿಯವರು ತೀವ್ರ ಮಾನಸಿಕ ಖಿನ್ನತೆ ಮತ್ತು ದೈಹಿಕ ಬಳಲಿಕೆಗೆ ಒಳಗಾಗಿದ್ದರು. ಮಗ ಸಾವು ಕಂಡ ಕೆಲವೇ ತಿಂಗಳಲ್ಲಿ ಎಸ್‌.ಜಾನಕಿ ಕೂಡ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಇಡೀ ಜೀವನದಲ್ಲಿ ಸಂಗೀತವನ್ನೇ ಆರಾಧಿಸಿದ್ದ ಎಸ್‌.ಜಾನಕಿ ಅವರಿಗೆ ಇದ್ದ ವಿಶೇಷ ಶಕ್ತಿಯೆಂದರೆ, ಅದು ಧ್ವನಿ ಬದಲಾವಣೆ. ಸಣ್ಣ ಮಗುವಿನಂತೆ ಹಾಡುತ್ತಿದ್ದ ಎಸ್‌.ಜಾನಕಿ ಏಕಾಏಕಿ ಪ್ರೌಢ ಮಹಿಳೆಯ ಕಂಠವಾಗಿ ಬದಲಾಗುತ್ತಿದ್ದರು. ಗಾಯನದಲ್ಲಿಯೇ ನಟನೆಯ ಭಾವನೆಗಳನ್ನು ತರುತ್ತಿದ್ದ ಗಾಯನದ ನಾಯಕಿ ಎನಿಸಿದ್ದ ಈ ಮಹಾನ್ ಚೇತನದ ನಿಧನಕ್ಕೆ ಇಡೀ ಕಲಾ ಲೋಕ ತೀವ್ರ ಕಂಬನಿ ಮಿಡಿದಿದೆ.

Category
ಕರಾವಳಿ ತರಂಗಿಣಿ