image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಎಂಜಿನ್‌ಗೆ ಹಾನಿಯಿಲ್ಲ: ಮೈಲೇಜ್ ಕುಸಿತ ಒಪ್ಪಿಕೊಂಡ ಕೇಂದ್ರ

ಎಥನಾಲ್ ಮಿಶ್ರಿತ ಪೆಟ್ರೋಲ್‌ನಿಂದ ಎಂಜಿನ್‌ಗೆ ಹಾನಿಯಿಲ್ಲ: ಮೈಲೇಜ್ ಕುಸಿತ ಒಪ್ಪಿಕೊಂಡ ಕೇಂದ್ರ

ನವದೆಹಲಿ : ಕೇಂದ್ರ ಸರ್ಕಾರವು ದೇಶಾದ್ಯಂತ ಪೆಟ್ರೋಲ್‌ಗೆ ಶೇ.20ರಷ್ಟು ಎಥನಾಲ್ ಮಿಶ್ರಣ ಮಾಡುವ (ಇ20) ಯೋಜನೆಯನ್ನು ಜಾರಿಗೆ ತರುತ್ತಿರುವ ಬೆನ್ನಲ್ಲೇ, ಇದರಿಂದ ವಾಹನಗಳ ಮೈಲೇಜ್ ಕುಸಿಯುತ್ತದೆ ಮತ್ತು ಎಂಜಿನ್‌ಗೆ ಹಾನಿಯಾಗುತ್ತದೆ ಎಂಬ ಸಾರ್ವಜನಿಕ ವಲಯದ ಆತಂಕಕ್ಕೆ ತೈಲ ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದೆ. ಈ ಕುರಿತು 12 ಅಂಶಗಳ ಪ್ರಶ್ನೋತ್ತರ ಸರಣಿಯನ್ನು ಬಿಡುಗಡೆ ಮಾಡಿರುವ ಸರ್ಕಾರ, ಎಥನಾಲ್ ಮಿಶ್ರಣದಿಂದ ವಾಹನಗಳ ಎಂಜಿನ್‌ಗೆ ಯಾವುದೇ ಹಾನಿಯಾಗುವುದಿಲ್ಲ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿ ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದೆ. ಆದಾಗ್ಯೂ, ಇ20 ಇಂಧನ ಬಳಕೆಯಿಂದ ಕೆಲವು ವಾಹನಗಳ ಮೈಲೇಜ್‌ನಲ್ಲಿ ಶೇ.5ರಷ್ಟು ಕುಸಿತವಾಗಬಹುದು ಎಂಬ ಅಂಶವನ್ನು ಸಚಿವಾಲಯ ಒಪ್ಪಿಕೊಂಡಿದೆ. ಆದರೆ, ಇದರಿಂದ ವಾಹನದ ಪಿಕಪ್ ಉತ್ತಮಗೊಳ್ಳಲಿದ್ದು, ಎಂಜಿನ್ ಕಾರ್ಯಕ್ಷಮತೆ ಸುಧಾರಿಸಲಿದೆ ಎಂದು ಸಮರ್ಥಿಸಿಕೊಂಡಿದೆ.

ಇದೇ ವೇಳೆ, ಗ್ರಾಹಕರ ಅನುಕೂಲಕ್ಕಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಇ20, ಇ10 ಮತ್ತು ಶುದ್ಧ ಪೆಟ್ರೋಲ್ ಎಂಬ ಮೂರು ಪ್ರತ್ಯೇಕ ವರ್ಗಗಳ ಇಂಧನ ಪೂರೈಕೆಗೆ ಸಾರ್ವಜನಿಕರು ಮಾಡಿದ್ದ ಆಗ್ರಹವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ದೇಶದ 1 ಲಕ್ಷಕ್ಕೂ ಅಧಿಕ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ ರೀತಿ ಪ್ರತ್ಯೇಕ ವಿತರಣಾ ವ್ಯವಸ್ಥೆ ಮಾಡುವುದರಿಂದ ಇಂಧನ ಪೂರೈಕೆ ವೆಚ್ಚ ವಿಪರೀತ ಹೆಚ್ಚಾಗಲಿದ್ದು, ವಿತರಣಾ ಜಾಲ ಮತ್ತಷ್ಟು ಜಟಿಲಗೊಳ್ಳುತ್ತದೆ ಎಂದು ಸಚಿವಾಲಯ ವಿವರಿಸಿದೆ. ಇದರೊಂದಿಗೆ ಇ20 ಪೆಟ್ರೋಲ್ ಬೆಲೆಯನ್ನು ಕಡಿತಗೊಳಿಸುವ ಬೇಡಿಕೆಯನ್ನೂ ಸರ್ಕಾರ ತಳ್ಳಿಹಾಕಿದ್ದು, ರೈತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಎಥನಾಲ್ ಖರೀದಿ ಬೆಲೆಯನ್ನು ಲಾಭದಾಯಕವಾಗಿ ನಿಗದಿಪಡಿಸಲಾಗಿದೆ. ಹೀಗಾಗಿ ಈ ಇಂಧನವು ಸಾಂಪ್ರದಾಯಿಕ ಪೆಟ್ರೋಲ್‌ಗಿಂತ ಅಗ್ಗವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತದ ಎಥನಾಲ್ ಮಿಶ್ರಣ ಯೋಜನೆಯು 2001ರಲ್ಲೇ ಪ್ರಾಯೋಗಿಕವಾಗಿ ಆರಂಭವಾಗಿದ್ದು, ಸುದೀರ್ಘ 10 ವರ್ಷಗಳ ವೈಜ್ಞಾನಿಕ ಪರೀಕ್ಷೆಗಳು ಮತ್ತು ಮಾರುತಿ ಸುಜುಕಿ, ಹೀರೋ ಮೋಟೋಕಾರ್ಪ್‌ನಂತಹ ಪ್ರಮುಖ ವಾಹನ ತಯಾರಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಇ20 ಇಂಧನವನ್ನು ಪೂರ್ಣ ಪ್ರಮಾಣದಲ್ಲಿ ಹೊರತರಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ದೇಶಕ್ಕೆ ಬರೋಬ್ಬರಿ 1.97 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ವಿದೇಶಿ ವಿನಿಮಯ ಉಳಿತಾಯವಾಗಿದೆ. ಅಲ್ಲದೆ ಸುಮಾರು 316 ಲಕ್ಷ ಟನ್ ಕಚ್ಚಾ ತೈಲ ಆಮದು ಕಡಿಮೆಯಾಗಿದ್ದು, 952 ಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಗಟ್ಟಲಾಗಿದೆ. ಆಮದು ಅವಲಂಬನೆ ತಗ್ಗಿಸಿ, ದೇಶದ ಇಂಧನ ಭದ್ರತೆ ಬಲಪಡಿಸುವುದು ಮತ್ತು ರೈತರಿಗೆ ಆರ್ಥಿಕ ಶಕ್ತಿ ನೀಡುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದು ತೈಲ ಸಚಿವಾಲಯ ತಿಳಿಸಿದೆ.

Category
ಕರಾವಳಿ ತರಂಗಿಣಿ