image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪರೀಕ್ಷಾ ಅಕ್ರಮದ ವಿರುದ್ಧ 22ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: ಕಳವಳಕಾರಿಯಾದ ಸೋನಮ್ ವಾಂಗ್‌ಚುಕ್ ಆರೋಗ್ಯ

ಪರೀಕ್ಷಾ ಅಕ್ರಮದ ವಿರುದ್ಧ 22ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: ಕಳವಳಕಾರಿಯಾದ ಸೋನಮ್ ವಾಂಗ್‌ಚುಕ್ ಆರೋಗ್ಯ

ನವದೆಹಲಿ: ದೇಶದಲ್ಲಿ ಇತ್ತೀಚೆಗೆ ನಡೆದ ಪರೀಕ್ಷಾ ಅಕ್ರಮಗಳು ಮತ್ತು ಪೇಪರ್ ಲೀಕ್ ದಂಧೆಯನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನೆ ಈಗ ಇಡೀ ದೇಶದ ಗಮನ ಸೆಳೆದಿದೆ. ಕಾಕ್ರೊಚ್​ ಜನತಾ ಪಕ್ಷ (CJP) ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟ ಶನಿವಾರ (ಜುಲೈ 11) ಕ್ಕೆ ಯಶಸ್ವಿಯಾಗಿ 22ನೇ ದಿನಕ್ಕೆ ಕಾಲಿಟ್ಟಿದೆ. ಈ ಆಂದೋಲನಕ್ಕೆ ಜೂನ್ 28 ರಂದು ಕೈಜೋಡಿಸಿದ ಖ್ಯಾತ ಶಿಕ್ಷಣತಜ್ಞ ಹಾಗೂ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಇದೀಗ 14ನೇ ದಿನಕ್ಕೆ ತಲುಪಿದೆ. ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹಗಲಿರುಳು ಧರಣಿ ಕುಳಿತಿರುವ ವಾಂಗ್‌ಚುಕ್ ಅವರ ಆರೋಗ್ಯದ ಸ್ಥಿತಿ ಸದ್ಯ ಕಳವಳಕಾರಿಯಾಗಿದ್ದು, ಉಪವಾಸ ಆರಂಭಿಸಿದಾಗಿನಿಂದ ಅವರು ಬರೋಬ್ಬರಿ 7.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವೀಡಿಯೊ ಸಂದೇಶವೊಂದನ್ನು ಹಂಚಿಕೊಂಡಿರುವ ಸೋನಮ್ ವಾಂಗ್‌ಚುಕ್, ತಮಗೆ ದಣಿವಾಗಿದ್ದರೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಇಂದು ನನ್ನ ಉಪವಾಸದ 13ನೇ ದಿನ. ನಿನ್ನೆಯಿದ್ದಷ್ಟು ಶಕ್ತಿ ಇವತ್ತಿಲ್ಲ, ಸ್ವಲ್ಪ ಸುಸ್ತಾಗುತ್ತಿದೆ. ಉಪವಾಸದ ದಿನಗಳಲ್ಲಿ ಇದು ಸಹಜ" ಎಂದಿದ್ದಾರೆ.

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಸಿಗುತ್ತಿರುವ ಅತಿಯಾದ ಪ್ರಶಂಸೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, "ಜನ ನನ್ನನ್ನು 21ನೇ ಶತಮಾನದ ಗಾಂಧಿ, ಆಧುನಿಕ ಗಾಂಧಿ ಅಥವಾ ಸೂಪರ್ ಹೀರೋ ತರ ನೋಡುತ್ತಿದ್ದಾರೆ. ಆದರೆ ಇಂತಹ ಕಾಮೆಂಟ್‌ಗಳು ನನಗೆ ಮುಜುಗರ ತರುತ್ತವೆ. ನಾನು ಗಾಂಧಿಯೂ ಅಲ್ಲ, ಹೀರೋ ಕೂಡ ಅಲ್ಲ. ದೇಶದ ಒಬ್ಬ ಸಾಮಾನ್ಯ ನಾಗರಿಕನಾಗಿ ನನ್ನ ಜವಾಬ್ದಾರಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದೇನೆ, ಅಷ್ಟೇ" ಎಂದು ವಿನಮ್ರವಾಗಿ ನುಡಿದಿದ್ದಾರೆ. ದೇಶದಲ್ಲಿ ನಡೆದ ಪರೀಕ್ಷಾ ಅಕ್ರಮಗಳಿಂದ ಬೇಸತ್ತು ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ವಾಂಗ್‌ಚುಕ್ ತೀವ್ರವಾಗಿ ಖಂಡಿಸಿದರು. "ಒಂದು ವೇಳೆ ಆತ್ಮಹತ್ಯೆ ಮಾಡಿಕೊಂಡ ಆ ವಿದ್ಯಾರ್ಥಿಗಳಲ್ಲಿ ನಿಮ್ಮ ಸ್ವಂತ ತಂಗಿ ಅಥವಾ ಮಗಳು ಇದ್ದಿದ್ದರೆ ನೀವು ಸುಮ್ಮನೆ ಕೂರುತ್ತಿದ್ದಿರಾ? ಇಲ್ಲ ತಾನೇ? ಅಂತಹ ಪರಿಸ್ಥಿತಿ ಬರುವವರೆಗೂ ಕಾಯಬೇಡಿ. ಅನ್ಯಾಯದ ವಿರುದ್ಧ ಈಗಲೇ ಧ್ವನಿ ಎತ್ತಿ" ಎಂದು ಜನಸಾಮಾನ್ಯರಿಗೆ ಭಾವನಾತ್ಮಕ ಕರೆ ನೀಡಿದ್ದಾರೆ. ಜುಲೈ 20 ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಅಂದು ಸಂಸತ್ತಿಗೆ ಬೃಹತ್ ಶಾಂತಿಯುತ ಮೆರವಣಿಗೆ ನಡೆಸಲು ಪ್ರತಿಭಟನಾಕಾರರು ಸಜ್ಜಾಗಿದ್ದಾರೆ. ಈ ಬಗ್ಗೆ ಮಾತನಾಡಿದ ವಾಂಗ್‌ಚುಕ್, "ನಮ್ಮ ಹಾಗೆ ನೀವು 24 ದಿನಗಳ ಕಾಲ ಉಪವಾಸ ಇರಬೇಕಾಗಿಲ್ಲ. ಚೆನ್ನಾಗಿ ಊಟ ಮಾಡಿಕೊಂಡೇ ಬನ್ನಿ! ಆದರೆ ಜುಲೈ 20 ರಂದು ನಮ್ಮೊಂದಿಗೆ ಕೈಜೋಡಿಸಿ. ಒಂದು ವೇಳೆ ನಿಮಗೆ ದೆಹಲಿಗೆ ಬರಲು ಸಾಧ್ಯವಾಗದಿದ್ದರೆ, ನೀವು ಎಲ್ಲಿದ್ದೀರೋ ಅಲ್ಲೇ ಒಂದು ದಿನ ಉಪವಾಸ ಮಾಡಿ ನಿಮ್ಮ ಬೆಂಬಲದ ಸಂದೇಶವನ್ನು ಹಂಚಿಕೊಳ್ಳಿ" ಎಂದು ದೇಶದ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ