image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಗರ್ಭಿಣಿ ನಿಧಾ ಖಾನ್ ಗೆ ಜಾಮೀನು : ಶ್ರೀಕೃಷ್ಣನಂತೆ ಯಾವುದೇ ಮಗು ಜೈಲಿನಲ್ಲಿ ಜನಿಸಬಾರದು ಎಂದ ನ್ಯಾಯಾಲಯ

ಗರ್ಭಿಣಿ ನಿಧಾ ಖಾನ್ ಗೆ ಜಾಮೀನು : ಶ್ರೀಕೃಷ್ಣನಂತೆ ಯಾವುದೇ ಮಗು ಜೈಲಿನಲ್ಲಿ ಜನಿಸಬಾರದು ಎಂದ ನ್ಯಾಯಾಲಯ

ನಾಸಿಕ್‌ : ಟಿಸಿಎಸ್ ಧಾರ್ಮಿಕ ಮತಾಂತರ ಆರೋಪ ಪ್ರಕರಣದ ಆರೋಪಿ ನಿಧಾ ಖಾನ್‌ಗೆ ನಾಸಿಕ್ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಐದು ತಿಂಗಳ ಗರ್ಭಿಣಿಯಾಗಿರುವ ನಿಧಾ ಖಾನ್ ಅವರನ್ನು ಬಂಧಿಸಿದ ಎರಡು ತಿಂಗಳ ಬಳಿಕ ಸೋಮವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶ ನೀಡಿದ್ದು, ಅದರ ವಿವರವಾದ ಆದೇಶ ಗುರುವಾರ ಲಭ್ಯವಾಗಿದೆ. ಗರ್ಭದಲ್ಲಿರುವ ಮಗುವಿನ ಹಿತದೃಷ್ಟಿಯಿಂದ ನ್ಯಾಯಾಂಗದ ವಿವೇಚನಾಧಿಕಾರವನ್ನು ಬಳಸುವುದು ನ್ಯಾಯೋಚಿತ ಎಂದು ವಿಶೇಷ ನ್ಯಾಯಾಧೀಶ ಕೆ.ಜಿ. ಜೋಶಿ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಶ್ರೀಕೃಷ್ಣನಂತೆ ಜೈಲಿನಲ್ಲಿ ಜನಿಸುವ ನೋವು ಅಥವಾ ಅದಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಯಾವುದೇ ಮಗು ಅನುಭವಿಸಬಾರದು ಮತ್ತು ನವಜಾತ ಶಿಶುವಿನ ಉತ್ತಮ ಭವಿಷ್ಯ ಹಾಗೂ ಕ್ಷೇಮಕ್ಕಾಗಿ ಅರ್ಜಿದಾರೆ ಪರವಾಗಿ ನ್ಯಾಯಾಂಗದ ವಿವೇಚನಾಧಿಕಾರ ಬಳಸುವುದು ಸೂಕ್ತ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ನಾಸಿಕ್‌ನ ಟಿಸಿಎಸ್ ಬಿಪಿಒ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಧಾರ್ಮಿಕ ಮತಾಂತರಕ್ಕೆ ಒತ್ತಾಯ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಮಾನಸಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದಡಿ ಮಾರ್ಚ್ 26ರಿಂದ ಏಪ್ರಿಲ್ 3ರವರೆಗೆ ಒಟ್ಟು ಒಂಬತ್ತು ಎಫ್‌ಐಆರ್‌ಗಳು ದಾಖಲಾಗಿದ್ದವು. ಈ ಪ್ರಕರಣದ ಒಟ್ಟು ಎಂಟು ಮಂದಿ ಆರೋಪಿಗಳಲ್ಲಿ ನಿಧಾ ಖಾನ್ ಏಕೈಕ ಮಹಿಳಾ ಆರೋಪಿಯಾಗಿದ್ದು, ದೇವಲಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಮಾತ್ರ ಅವರ ಹೆಸರಿದೆ. ಸಹೋದ್ಯೋಗಿಗೆ ಬುರ್ಖಾ, ಇಸ್ಲಾಂ ಧರ್ಮದ ಪುಸ್ತಕಗಳನ್ನು ನೀಡುವುದು, ಮೊಬೈಲ್‌ನಲ್ಲಿ ಧಾರ್ಮಿಕ ಆಯಪ್‌ಗಳನ್ನು ಇನ್‌ಸ್ಟಾಲ್ ಮಾಡುವುದು ಹಾಗೂ ಇಸ್ಲಾಮಿಕ್ ಆಚರಣೆಗಳನ್ನು ಪಾಲಿಸುವಂತೆ ಪ್ರಭಾವ ಬೀರಿದ ಆರೋಪ ಅವರ ಮೇಲಿದೆ. ಮುಂಗಡ ಜಾಮೀನು ಅರ್ಜಿ ತಿರಸ್ಕೃತವಾದ ಬಳಿಕ ಮೇ 7ರಂದು ಅವರನ್ನು ಛತ್ರಪತಿ ಸಂಭಾಜಿನಗರದಲ್ಲಿ ಬಂಧಿಸಲಾಗಿತ್ತು.

ನ್ಯಾಯಾಲಯವು ನಿಧಾ ಖಾನ್‌ಗೆ ಕೆಲವು ಕಠಿಣ ಷರತ್ತುಗಳನ್ನು ವಿಧಿಸಿದ್ದು, ದೂರುದಾರರ ಕೆಲಸದ ಸ್ಥಳ ಅಥವಾ ನಿವಾಸದ ಸಮೀಪ ಹೋಗಬಾರದು, ದೂರುದಾರರು, ಸಾಕ್ಷಿದಾರರು ಅಥವಾ ಪ್ರಕರಣಕ್ಕೆ ಸಂಬಂಧಿಸಿದವರನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಬಾರದು ಹಾಗೂ ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರಬಾರದು ಎಂದು ಸೂಚಿಸಿದೆ. ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ತೊರೆಯಬಾರದು ಮತ್ತು ತಮ್ಮ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ತನಿಖಾಧಿಕಾರಿಗಳಿಗೆ ತಿಳಿಸಬೇಕು ಎಂದು ಆದೇಶಿಸಿದ್ದು, ಈ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದಾಗುತ್ತದೆ ಎಂದು ಎಚ್ಚರಿಸಿದೆ.

ವಿಚಾರಣೆ ವೇಳೆ ನಿಧಾ ಖಾನ್ ಪರ ವಕೀಲ ರಾಹುಲ್ ಕಾಸ್ಲಿವಾಲ್ ಅವರು, ಪ್ರಕರಣದ ಚಾರ್ಜ್‌ಶೀಟ್ ಈಗಾಗಲೇ ಸಲ್ಲಿಕೆಯಾಗಿರುವುದರಿಂದ ಅವರನ್ನು ಇನ್ನಷ್ಟು ದಿನ ಬಂಧನದಲ್ಲಿಡುವ ಅಗತ್ಯವಿಲ್ಲ ಮತ್ತು ಇತರ ಎಫ್‌ಐಆರ್‌ಗಳಲ್ಲಿ ಅವರ ಹೆಸರಿಲ್ಲ ಎಂದು ವಾದಿಸಿದರು. ಸಹಆರೋಪಿಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳಿಗೂ ಅವರಿಗೂ ಸಂಬಂಧವಿಲ್ಲ ಹಾಗೂ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಅವರು ಸಿದ್ಧರಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇತ್ತ ಸರ್ಕಾರದ ಪರ ವಕೀಲರು ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಬುರ್ಖಾ, ಇಸ್ಲಾಂ ಧರ್ಮದ ಪುಸ್ತಕ ಹಾಗೂ ಧಾರ್ಮಿಕ ಆಯಪ್‌ಗಳ ಮೂಲಕ ದೂರುದಾರೆಯ 'ಮೈಂಡ್ ವಾಶ್' ಮಾಡಲು ಯತ್ನಿಸಿದ್ದು, ಇದು ದೊಡ್ಡ ಸಂಚಿನ ಭಾಗವಾಗಿದೆ ಎಂದು ವಾದಿಸಿದರು. ಆದರೆ ಈ ಆರೋಪವನ್ನು ನಿಧಾ ಖಾನ್ ತಳ್ಳಿಹಾಕಿದ್ದಾರೆ.

ಸಹಆರೋಪಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳಿದ್ದರೆ, ನಿಧಾ ಖಾನ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಗಳಿವೆ ಎಂದು ನ್ಯಾಯಾಲಯ ಹೇಳಿದೆ. ಪ್ರಾಥಮಿಕ ಸಾಕ್ಷ್ಯಗಳಿದ್ದರೂ ಜಾಮೀನು ಅರ್ಜಿ ವಿಚಾರಣೆ ವೇಳೆ ಸಾಕ್ಷ್ಯಗಳ ಸಂಪೂರ್ಣ ಪರಿಶೀಲನೆ ನಡೆಸುವುದು ಸೂಕ್ತವಲ್ಲ ಎಂದು ತಿಳಿಸಿರುವ ನ್ಯಾಯಾಲಯ, ತನಿಖೆ ಪೂರ್ಣಗೊಂಡಿದ್ದು ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ ಎಂಬ ಕಾರಣದಿಂದ ಜಾಮೀನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

Category
ಕರಾವಳಿ ತರಂಗಿಣಿ