ಶ್ರೀನಗರ : ಪಹಲ್ಗಾಮ್ ಉಗ್ರರ ದಾಳಿಯ ಭೀತಿಯನ್ನು ಬದಿಗೊತ್ತಿ ಈ ವರ್ಷ ದೇಶದಾದ್ಯಂತ ದಾಖಲೆ ಸಂಖ್ಯೆಯಲ್ಲಿ ಭಕ್ತರು ಅಮರನಾಥ ಯಾತ್ರೆಗೆ ಹರಿದು ಬರುತ್ತಿದ್ದಾರೆ. ಆದರೆ, ಈ ಸಡಗರದ ನಡುವೆಯೇ ಯಾತ್ರಿಕರಲ್ಲಿ ಭಾರಿ ನಿರಾಶೆ ಮತ್ತು ಆತಂಕ ಮೂಡಿಸುವ ಸುದ್ದಿಯೊಂದು ಮುನ್ನೆಲೆಗೆ ಬಂದಿದೆ. ಯಾತ್ರೆ ಆರಂಭವಾದ ಕೇವಲ ಐದೇ ದಿನಗಳಲ್ಲಿ ಗುಹೆಯೊಳಗಿನ ಪವಿತ್ರ ನೈಸರ್ಗಿಕ ಹಿಮಲಿಂಗವು (ಬಾಬಾ ಬರ್ಫಾನಿ) ಶೇಕಡಾ 90 ಕ್ಕಿಂತ ಹೆಚ್ಚು ಕರಗಿಹೋಗಿದೆ! ಇನ್ನೂ 50 ಕ್ಕೂ ಹೆಚ್ಚು ದಿನಗಳ ಸುದೀರ್ಘ ಯಾತ್ರೆ ಬಾಕಿ ಇರುವಾಗಲೇ ಹಿಮಲಿಂಗವು ಸಂಪೂರ್ಣವಾಗಿ ಕಣ್ಮರೆಯಾಗುವ ಹಂತ ತಲುಪಿದೆ. ಈ ದಿಢೀರ್ ಬೆಳವಣಿಗೆಯು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕಳಕಳಿಗೆ ಕಾರಣವಾಗಿದ್ದು, ಇದಕ್ಕೆ ಜಾಗತಿಕ ತಾಪಮಾನ ಮಾತ್ರ ಕಾರಣವೇ ಅಥವಾ ಈ ಸೂಕ್ಷ್ಮ ಪರಿಸರದಲ್ಲಿ ಮಾನವ ಹಸ್ತಕ್ಷೇಪ ಹೆಚ್ಚಾಗುತ್ತಿರುವುದರ ಮುನ್ಸೂಚನೆಯೋ ಎನ್ನುವ ಚರ್ಚೆ ತೀವ್ರಗೊಂಡಿದೆ.
ಸಮುದ್ರ ಮಟ್ಟದಿಂದ ಸುಮಾರು 3,888 ಮೀಟರ್ (12,756 ಅಡಿ) ಎತ್ತರದಲ್ಲಿರುವ ಅನಂತನಾಗ್ ಜಿಲ್ಲೆಯ ಹಿಮಾಲಯದ ಲಿಡ್ಡರ್ ಕಣಿವೆಯ ಈ ಸೂಕ್ಷ್ಮ ಪರಿಸರದಲ್ಲಿ ನಡೆಯುತ್ತಿರುವ ಈ ವಿದ್ಯಮಾನದ ಸಾಕಷ್ಟು ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಹಿಮಲಿಂಗವು ವೇಗವಾಗಿ ಕರಗುತ್ತಿರುವ ಚಿತ್ರಗಳನ್ನು ಹಂಚಿಕೊಂಡಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ನಾಯಕಿ ಇಲ್ತಿಜಾ ಮುಫ್ತಿ, ಯಾತ್ರೆಯ ನಿರ್ವಹಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದಿನಕ್ಕೆ ನಿಯಮಿತ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಬೇಕೆಂಬ ನಿಯಮವಿದ್ದರೂ, ನಿಯಮ ಉಲ್ಲಂಘನೆಯಾಗುತ್ತಿದೆಯೇ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಗುಹೆಯ ಬಳಿ ಪ್ರಸ್ತಾಪಿಸಲಾಗಿರುವ ರೋಪ್‌ವೇ ಯೋಜನೆಯು ಪರಿಸರದ ಮೇಲೆ ಮತ್ತಷ್ಟು ಆಪತ್ತು ತರಬಹುದು ಎಂದು ಅವರು ಆಕ್ಷೇಪಿಸಿದ್ದಾರೆ. ಆದರೆ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸುಪ್ರೀಂ ಕೋರ್ಟ್ ಸೂಚಿಸಿರುವ ನಿಯಮಾವಳಿಗಳ ಪ್ರಕಾರವೇ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ಯಾತ್ರಿಕರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜುಲೈ 3 ರಂದು ಕಠಿಣ ಭದ್ರತೆಯ ನಡುವೆ ಯಾತ್ರೆ ಆರಂಭವಾದ ಮೊದಲ 4 ದಿನಗಳಲ್ಲೇ ಬರೋಬ್ಬರಿ 93,000 ಕ್ಕೂ ಹೆಚ್ಚು ಯಾತ್ರಿಕರು ದರ್ಶನ ಪಡೆದಿದ್ದಾರೆ. ಜುಲೈ 5 ರ ವೇಳೆಗೆ 32,000 ಕ್ಕೂ ಹೆಚ್ಚು ಭಕ್ತರು ಪ್ರಾರ್ಥನೆ ಸಲ್ಲಿಸಿದ್ದು, ಎರಡನೇ ದಿನವೊಂದರಲ್ಲೇ 20,000 ಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತಿ ಹೆಚ್ಚು ಎಂದು ಶ್ರೀ ಅಮರನಾಥ ದೇವಸ್ಥಾನ ಮಂಡಳಿ (SASB) ಮುಖ್ಯಸ್ಥರೂ ಆಗಿರುವ ಎಲ್‌ಜಿ ಮನೋಜ್ ಸಿನ್ಹಾ ತಿಳಿಸಿದ್ದಾರೆ. ಆದರೆ, ಕಡ್ಡಾಯ ಆರೋಗ್ಯ ಪ್ರಮಾಣಪತ್ರ ಅಥವಾ RFID ಕಾರ್ಡ್ ಇಲ್ಲದೆ ಸಾವಿರಾರು 'ನೋಂದಣಿ ರಹಿತ' (Unregistered) ಯಾತ್ರಿಕರು ಬರುತ್ತಿರುವುದು ಭದ್ರತೆ ಮತ್ತು ಮೂಲಸೌಕರ್ಯದ ಮೇಲೆ ಭಾರಿ ಒತ್ತಡ ಹೇರುತ್ತಿದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ವಿಜ್ಞಾನಿಗಳ ಪ್ರಕಾರ, ಜಗತ್ತಿನ ಇತರ ಪರ್ವತ ಶ್ರೇಣಿಗಳಿಗೆ ಹೋಲಿಸಿದರೆ ಹಿಮಾಲಯ ವಲಯವು ಅತ್ಯಂತ ವೇಗವಾಗಿ ಬಿಸಿಯಾಗುತ್ತಿದೆ. ಬದಲಾಗುತ್ತಿರುವ ಹಿಮಪಾತದ ಮಾದರಿ, ಗ್ಲೇಸಿಯರ್‌ಗಳ ಕರಗುವಿಕೆ ಮತ್ತು ಗುಹೆಯೊಳಗಿನ ತಾಪಮಾನ ಹಾಗೂ ಆರ್ದ್ರತೆಯ ಏರುಪೇರು ಹಿಮಲಿಂಗದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಮಧ್ಯಪ್ರದೇಶದ ಇಂದೋರ್‌ನಿಂದ ಬಂದಿದ್ದ ಭಕ್ತರೊಬ್ಬರು ಮಾತನಾಡಿ, "ಹಿಂದೆ ಬಾಬಾ 40 ರಿಂದ 45 ದಿನ ದರ್ಶನ ನೀಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು 5 ರಿಂದ 7 ದಿನಕ್ಕೆ ಇಳಿದಿದೆ. ನಾವು 4ನೇ ದಿನವೇ ಬಂದರೂ ಲಿಂಗವು ತುಂಬಾ ಚಿಕ್ಕದಾಗಿತ್ತು" ಎಂದು ಬೇಸರ ಹಂಚಿಕೊಂಡಿದ್ದಾರೆ. ಈ ಹಿಂದೆ 2018 ರಲ್ಲಿ 29 ದಿನ, 2020 ರಲ್ಲಿ 38 ದಿನ, 2022 ರಲ್ಲಿ 28 ದಿನ ಹಾಗೂ 2024 ರಲ್ಲಿ ಕೇವಲ ಒಂದು ವಾರದಲ್ಲಿ ಹಿಮಲಿಂಗ ಕರಗಿತ್ತು. ಆದರೆ ಈ ಬಾರಿ ಕೇವಲ 5 ದಿನದಲ್ಲೇ ಕರಗಿರುವುದು ಆತಂಕದ ತೀವ್ರತೆಯನ್ನು ಹೆಚ್ಚಿಸಿದೆ.
ಕಳೆದ ಎರಡು ದಶಕಗಳಲ್ಲಿ ಯಾತ್ರಾ ಮಾರ್ಗದಲ್ಲಿ ಭಾರಿ ಬದಲಾವಣೆಗಳಾಗಿವೆ. ರಸ್ತೆಗಳ ಅಗಲೀಕರಣ, ತಾತ್ಕಾಲಿಕ ತಂಗುದಾಣಗಳ ವಿಸ್ತರಣೆ, ಗುಹೆಯ ತೀರಾ ಹತ್ತಿರಕ್ಕೆ ಲಂಗರ್‌ಗಳ (ಉಚಿತ ದಾಸೋಹ) ಸ್ಥಳಾಂತರ, ಸೌರ ದೀಪಗಳು ಮತ್ತು ಹೆವಿ ಮೆಷಿನರಿಗಳ ಬಳಕೆ ಹೆಚ್ಚಾಗಿದೆ. ಇತ್ತೀಚೆಗೆ ನಿರ್ಮಿಸಲಾದ ಮಳೆ ಆಶ್ರಯ ತಾಣವು (Rain Shelter) ಸ್ಥಳೀಯ ಸೂಕ್ಷ್ಮ ಹವಾಮಾನವನ್ನು (Microclimate) ಬದಲಾಯಿಸಿ, ಹಿಮಲಿಂಗ ಕರಗಲು ಕಾರಣವಾಗುತ್ತಿದೆಯೇ ಎಂಬ ಬಗ್ಗೆ ಸ್ವತಂತ್ರ ವೈಜ್ಞಾನಿಕ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಅಶ್ವನಿ ಹಂದಾ ಒತ್ತಾಯಿಸಿದ್ದಾರೆ. ಶೇಷನಾಗ್ ಮತ್ತು ಪಂಚತರ್ಣಿ ನಡುವಿನ ಸುರಂಗ ಮಾರ್ಗದ ಪ್ರಸ್ತಾಪವೂ ಚರ್ಚೆಯಲ್ಲಿದೆ.
ಎರಡು ದಶಕಗಳ ಹಿಂದೆ ವಾರ್ಷಿಕವಾಗಿ ಕೇವಲ 1 ಲಕ್ಷದಷ್ಟಿದ್ದ ಯಾತ್ರಿಕರ ಸಂಖ್ಯೆ ನಂತರದ ವರ್ಷಗಳಲ್ಲಿ 6 ಲಕ್ಷ ದಾಟಿತ್ತು. ಕೋವಿಡ್ ನಂತರ ಈಗ ಮತ್ತೆ ಜನಪ್ರವಾಹ ಹೆಚ್ಚಾಗುತ್ತಿದೆ. ಹಿಮಲಿಂಗದ ದಿಢೀರ್ ಕರಗುವಿಕೆಗೆ ದೇವಸ್ಥಾನ ಮಂಡಳಿಯಿಂದ ಇನ್ನೂ ಯಾವುದೇ ಅಧಿಕೃತ ವೈಜ್ಞಾನಿಕ ವರದಿ ಬಂದಿಲ್ಲವಾದರೂ, ಶ್ರೀ ಅಮರನಾಥ ಬರ್ಫಾನಿ ಲಂಗರ್ ಸಂಸ್ಥೆ (SABLO) ಸೇರಿದಂತೆ ಹಲವು ಸಂಘಟನೆಗಳು ತಜ್ಞರ ಸಮಿತಿ ರಚಿಸಿ ತನಿಖೆ ನಡೆಸುವಂತೆ ಆಗ್ರಹಿಸಿವೆ. ಕೋಟ್ಯಂತರ ಹಿಂದೂಗಳ ಆರಾಧ್ಯ ದೈವದ ಪವಿತ್ರ ಹಿಮಲಿಂಗವನ್ನು ಉಳಿಸಿಕೊಳ್ಳಲು ಮತ್ತು ಹಿಮಾಲಯದ ಸೂಕ್ಷ್ಮ ಪರಿಸರವನ್ನು ರಕ್ಷಿಸಲು ಯಾತ್ರಿಕರ ಸಂಖ್ಯೆ ಹಾಗೂ ಮೂಲಸೌಕರ್ಯಗಳ ಮೇಲೆ ನಿಯಂತ್ರಣ ಹೇರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂಬುದು ತಜ್ಞರ ಸ್ಪಷ್ಟ ಅಭಿಪ್ರಾಯವಾಗಿದೆ.