ನವದೆಹಲಿ : ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಹೆಣ್ಣುಮಕ್ಕಳ ಮದುವೆ ತಡವಾಗುತ್ತಿರುವುದೇ ಪ್ರಮುಖ ಕಾರಣ ಎಂದು ಮುಸ್ಲಿಂ ಧರ್ಮಗುರು ಮೌಲಾನಾ ಮೊಹಮ್ಮದ್ ಸಾಜಿದ್ ರಶೀದಿ ನೀಡಿರುವ ಹೇಳಿಕೆ ಈಗ ದೇಶಾದ್ಯಂತ ಭಾರಿ ಸಂಚಲನ ಮತ್ತು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೋಷಕರು ತಮ್ಮ ಹೆಣ್ಣುಮಕ್ಕಳ ಸುರಕ್ಷತೆಯನ್ನು ಬಯಸುವುದಾದರೆ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಮತ್ತು ಭಾರತದಲ್ಲಿ ಇಸ್ಲಾಮಿಕ್ ಶರಿಯಾ ಕಾನೂನನ್ನು ಜಾರಿಗೆ ತಂದರೆ ಮಾತ್ರ ಇಂತಹ ಲೈಂಗಿಕ ಅಪರಾಧಗಳನ್ನು ತಡೆಯಲು ಸಾಧ್ಯ ಎಂದು ಅವರು ತಮ್ಮ ವಿಲಕ್ಷಣ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ವಿವಾಹಗಳು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಅಪರಾಧ ಎಂದು ಇತ್ತೀಚೆಗಷ್ಟೇ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ತೀವ್ರವಾಗಿ ಟೀಕಿಸಿರುವ ಅವರು, ಕೋರ್ಟ್‌ನ ಈ ನಿಲುವು ತಪ್ಪು ಮತ್ತು ಅಸಂವಿಧಾನಿಕ ಎಂದು ಆಕ್ಷೇಪಿಸಿದ್ದಾರೆ.
ಮುಸ್ಲಿಮರಿಗೆ ತಮ್ಮ ಧಾರ್ಮಿಕ ಪದ್ಧತಿಯ ಪ್ರಕಾರ ನಿಕಾಹ್ ಮತ್ತು ತಲಾಖ್ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸಂವಿಧಾನ ಮತ್ತು ಶರಿಯಾ ಕಾನೂನು ಎರಡೂ ನೀಡಿರುವುದರಿಂದ ಕೋರ್ಟ್ ಇದರಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ ಎನ್ನುವುದು ಅವರ ವಾದವಾಗಿದೆ. ಪ್ರಸ್ತುತ ಭಾರತದ ಕಾನೂನು ವ್ಯವಸ್ಥೆಯು ಅಪರಾಧಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಗಂಭೀರ ಆರೋಪ ಮಾಡಿರುವ ರಶೀದಿ, ಇಂದಿನ ದಿನಗಳಲ್ಲಿ 15 ವರ್ಷದ ಹುಡುಗಿಯರು ಸಂಬಂಧಗಳಲ್ಲಿದ್ದು ರಾತ್ರಿ ಇಡೀ ಮನೆಗಳಿಂದ ಹೊರಗೆ ಕಳೆಯುತ್ತಿದ್ದರೂ ಅವರು ಅಪ್ರಾಪ್ತರು ಎಂಬ ಕಾರಣಕ್ಕೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇಂತಹ ದುರ್ಬಲ ಕಾನೂನಿನ ಬದಲಿಗೆ ಶರಿಯಾ ಆಧಾರಿತ ಕಠಿಣ ಕಾನೂನು ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತಮ್ಮ ಈ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಮೌಲಾನಾ, ತಾವು ಸಂವಿಧಾನದ ವಿರುದ್ಧವಾಗಿ ಏನನ್ನೂ ಹೇಳಿಲ್ಲ ಮತ್ತು ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯದ ಚೌಕಟ್ಟಿನಲ್ಲೇ ಶರಿಯಾ ಕಾನೂನಿನ ಬೇಡಿಕೆಯನ್ನು ಇಟ್ಟಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.