ರಾಯಗಡ : ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪನ್ವೇಲ್ ತಾಲ್ಲೂಕಿನ ಎಂಐಡಿಸಿ ಚವಾಣೆ ಪ್ರದೇಶದಲ್ಲಿರುವ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಘಟಕ ಜಲಾವೃತಗೊಂಡಿದೆ. ಘಟಕದ ರಕ್ಷಣಾ ಗೋಡೆ ಕುಸಿದು ಪ್ರವಾಹದ ನೀರು ಒಳನುಗ್ಗಿದ ಪರಿಣಾಮವಾಗಿ, ಅಲ್ಲಿ ಶೇಖರಿಸಿಡಲಾಗಿದ್ದ ಸುಮಾರು 3,000 ತುಂಬಿದ ಹಾಗೂ ಖಾಲಿ ಎಲ್‌ಪಿಜಿ ಸಿಲಿಂಡರ್‌ಗಳು ನೀರಿನ ರಭಸಕ್ಕೆ ಪಾತಾಳಗಂಗಾ ನದಿಗೆ ಕೊಚ್ಚಿಹೋಗಿವೆ. ನದಿಯ ನೀರಿನಲ್ಲಿ ನೂರಾರು ಕೆಂಪು ಸಿಲಿಂಡರ್‌ಗಳು ತೇಲಿಕೊಂಡು ಹೋಗುತ್ತಿರುವ ಅಪರೂಪದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸ್ಥಳೀಯರು ಹಾಗೂ ದಾರಿಹೋಕರು ಈ ಸಿಲಿಂಡರ್‌ಗಳನ್ನು ನದಿಯಿಂದ ಎತ್ತಿಕೊಳ್ಳಲು ಮುಗಿಬೀಳುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಯಗಡ ಜಿಲ್ಲಾಧಿಕಾರಿ ಕಿಶನ್ ಜಾವಳೆ ಅವರು ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. "ನದಿ ದಡದಲ್ಲಿ ಅಥವಾ ಕೆಳಭಾಗದಲ್ಲಿ ಸಿಲಿಂಡರ್‌ಗಳು ಕಂಡುಬಂದರೆ ಯಾವುದೇ ಕಾರಣಕ್ಕೂ ಸಾರ್ವಜನಿಕರು ಅವುಗಳನ್ನು ಮುಟ್ಟಬಾರದು, ತೆರೆಯಲು ಯತ್ನಿಸಬಾರದು ಅಥವಾ ಮನೆಗೆ ತೆಗೆದುಕೊಂಡು ಹೋಗಬಾರದು" ಎಂದು ಅವರು ಕಡಕ್ ಸೂಚನೆ ನೀಡಿದ್ದಾರೆ. ಪ್ರವಾಹದಲ್ಲಿ ಕೊಚ್ಚಿಹೋಗಿರುವ ಸಿಲಿಂಡರ್‌ಗಳು ಸುರಕ್ಷಿತ ಸ್ಥಿತಿಯಲ್ಲಿವೆಯೇ ಅಥವಾ ಅವುಗಳಲ್ಲಿ ಅನಿಲ ಸೋರಿಕೆಯಾಗುತ್ತಿದೆಯೇ ಎಂಬುದು ಖಚಿತವಿಲ್ಲದ ಕಾರಣ, ಕುತೂಹಲದಿಂದ ಅವುಗಳನ್ನು ಮುಟ್ಟುವುದು ಭೀಕರ ಅನಾಹುತ ಹಾಗೂ ಸ್ಫೋಟಕ್ಕೆ ದಾರಿ ಮಾಡಿಕೊಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ನದಿಯ ಸುತ್ತಮುತ್ತ ಎಲ್ಲೇ ಸಿಲಿಂಡರ್‌ಗಳು ಕಂಡುಬಂದರೂ ತಕ್ಷಣವೇ ಸ್ಥಳೀಯ ಆಡಳಿತ, ಪೊಲೀಸರು ಅಥವಾ ಹತ್ತಿರದ ಎಚ್‌ಸಿಎಲ್ ವಿತರಕರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಡಳಿತ ಕೋರಿದೆ. ಸದ್ಯ ಅಧಿಕಾರಿಗಳ ತಂಡವು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಯ ಮೌಲ್ಯಮಾಪನ ನಡೆಸುತ್ತಿದ್ದು, ನದಿಯಲ್ಲಿ ತೇಲಿಹೋಗಿರುವ ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.