ನವದೆಹಲಿ : ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಜಾರಿಯಲ್ಲಿರುವ ಮಹಿಳಾ ಕೇಂದ್ರೀಯ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಕುಟುಂಬಗಳಲ್ಲಿ ಉಳಿತಾಯ ಮತ್ತು ಬಳಕೆ ಎರಡನ್ನೂ ಹೆಚ್ಚಿಸಿವೆ ಎಂದು ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯು ತನ್ನ ಇತ್ತೀಚಿನ ಕಾರ್ಯಪತ್ರದಲ್ಲಿ ತಿಳಿಸಿದೆ. ಕರ್ನಾಟಕ ಸರ್ಕಾರದ 'ಗೃಹಲಕ್ಷ್ಮಿ' ಯೋಜನೆಯಂತೆ ಮಹಿಳೆಯರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಈ ಕ್ರಮಗಳು, ದೇಶದ ಒಟ್ಟು 12 ಕೋಟಿ ಮಹಿಳೆಯರನ್ನು ತಲುಪುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಇದಕ್ಕಾಗಿ 1.7 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದೆ ಎಂದು ವರದಿ ಹೇಳಿದೆ. 2023 ರಿಂದ 2026ರ ನಡುವೆ ಈ ಯೋಜನೆಗಳ ವ್ಯಾಪ್ತಿ ಐದು ಪಟ್ಟು ಹೆಚ್ಚಾಗಿದ್ದು, ಇದು ಅಭಿವೃದ್ಧಿ ಮತ್ತು ರಾಜಕೀಯ ಆರ್ಥಿಕತೆಯ ಸಮ್ಮಿಲನಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
ಮಹಿಳೆಯರ ಕೈಗೆ ನೇರವಾಗಿ ಹಣ ನೀಡುವುದು ಕುಟುಂಬದ ಕಲ್ಯಾಣ ಹಾಗೂ ಲಿಂಗಾಧಾರಿತ ಆರ್ಥಿಕ ಒಳಗೊಳ್ಳುವಿಕೆಗೆ ಅತ್ಯಂತ ಕಡಿಮೆ ವೆಚ್ಚದ ಮತ್ತು ಪರಿಣಾಮಕಾರಿ ಸಾಧನ ಎಂಬುದು ಸಾಬೀತಾಗಿದೆ. ವರದಿಯ ಪ್ರಕಾರ, ಈ ಯೋಜನೆಗಳ ಅನುಷ್ಠಾನದ ನಂತರ ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಕುಟುಂಬಗಳ ವೆಚ್ಚದಲ್ಲಿ ಕ್ರಮವಾಗಿ ಶೇಕಡಾ 46 ಮತ್ತು ಶೇಕಡಾ 28 ರಷ್ಟು ಏರಿಕೆ ಕಂಡುಬಂದಿದೆ. ಇದು ಕುಟುಂಬಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ, ಬಾಹ್ಯ ಪಾವತಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ.
ವಿಶೇಷವಾಗಿ ಕರ್ನಾಟಕ ಸರ್ಕಾರವು ತನ್ನ ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ 28,600 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದ್ದು, ದೀರ್ಘಕಾಲದಿಂದ ಯೋಜನೆ ಜಾರಿಯಲ್ಲಿರುವ ರಾಜ್ಯಗಳ ಪೈಕಿ ಮಹಿಳೆಯರಿಗೆ ಹಣ ವಿತರಿಸುವಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸರ್ಕಾರವು ವಾರ್ಷಿಕ 36,000 ಕೋಟಿ ರೂಪಾಯಿ ನಿಗದಿಪಡಿಸಿರುವುದನ್ನು ಹೊರತುಪಡಿಸಿದರೆ, ಕರ್ನಾಟಕದ ಪಾತ್ರ ದೊಡ್ಡದಾಗಿದೆ.
ಆದರೆ, ದಿನೇ ದಿನೇ ಹೆಚ್ಚುತ್ತಿರುವ ಮಾರುಕಟ್ಟೆ ವೆಚ್ಚ ಮತ್ತು ಹಣದುಬ್ಬರಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಮಹಿಳೆಯರಿಗೆ ನೀಡುವ ಈ ಮಾಸಿಕ ಧನಸಹಾಯದ ಮೊತ್ತವನ್ನು ಸರ್ಕಾರಗಳು ಪರಿಷ್ಕರಿಸಬೇಕು ಎಂದು ಸಮಿತಿ ಸಲಹೆ ನೀಡಿದೆ. ಇದರೊಂದಿಗೆ, ಈ ಯೋಜನೆಗಳನ್ನು ಕೇವಲ ನಗದು ವಿತರಣೆಗೆ ಸೀಮಿತಗೊಳಿಸದೆ, ಕುಟುಂಬಗಳ ಸಾಮರ್ಥ್ಯ ವೃದ್ಧಿ, ಡಿಜಿಟಲ್ ಸಾಕ್ಷರತೆ ಮತ್ತು ಮಹಿಳಾ ಸ್ವಸಹಾಯ ಸಂಘಗಳ (SHGs) ಜೊತೆಗೆ ಜೋಡಿಸಿದಾಗ ಮಾತ್ರ ಸಮಾಜದಲ್ಲಿ ಇನ್ನಷ್ಟು ಧನಾತ್ಮಕ ಬದಲಾವಣೆ ತರಲು ಸಾಧ್ಯ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ವರದಿಯಲ್ಲಿ ಪ್ರತಿಪಾದಿಸಿದೆ.