image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ತಾಜ್ ಮಹಲ್ ವಿವಾದ: ಕೇಂದ್ರ ಮತ್ತು ಎಎಸ್‌ಐಗೆ ಅಲಹಾಬಾದ್ ಹೈಕೋರ್ಟ್ ನೋಟಿಸ್

ತಾಜ್ ಮಹಲ್ ವಿವಾದ: ಕೇಂದ್ರ ಮತ್ತು ಎಎಸ್‌ಐಗೆ ಅಲಹಾಬಾದ್ ಹೈಕೋರ್ಟ್ ನೋಟಿಸ್

ಆಗ್ರಾ : ವಿಶ್ವವಿಖ್ಯಾತ ತಾಜ್ ಮಹಲ್ ಮೂಲತಃ ಶಿವ ದೇವಾಲಯವಾಗಿತ್ತು ಎಂದು ವಾದಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆಗೆ (ASI) ತುರ್ತು ನೋಟಿಸ್ ಜಾರಿ ಮಾಡಿದೆ. ತಾಜ್ ಮಹಲ್ ಆವರಣದೊಳಗೆ ಭಗವಾನ್ ಶ್ರೀ ಅಗ್ರೇಶ್ವರ ಮಹಾದೇವ ನಾಗನಾಥೇಶ್ವರ ವಿರಾಜಮಾನ ತೇಜೋ ಮಹಾಲಯ ಮಂದಿರವಿದೆ ಎಂದು ಪ್ರತಿಪಾದಿಸಿ, ಅದರ ಸಂಪೂರ್ಣ ಪರಿಶೀಲನೆ, ವಿಡಿಯೋಗ್ರಫಿ ಹಾಗೂ ಛಾಯಾಗ್ರಹಣ ನಡೆಸಲು ಸ್ವತಂತ್ರ 'ಅಡ್ವೊಕೇಟ್ ಕಮಿಷನರ್' ಒಬ್ಬರನ್ನು ನೇಮಕ ಮಾಡಬೇಕು ಎಂದು ಹಿಂದೂ ಭಕ್ತರ ಪರವಾಗಿ ವಕೀಲ ಹರಿಶಂಕರ್ ಜೈನ್ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿಂದೆ ಆಗ್ರಾದ ಕೆಳ ನ್ಯಾಯಾಲಯಗಳು ಸೂಕ್ತ ಭೂ ದಾಖಲೆಗಳ ಕೊರತೆಯನ್ನು ಉಲ್ಲೇಖಿಸಿ ಈ ಬೇಡಿಕೆಯನ್ನು ಎರಡು ಬಾರಿ ತಿರಸ್ಕರಿಸಿದ್ದವು. ಕೆಳ ನ್ಯಾಯಾಲಯಗಳ ಆ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠ, ಅರ್ಜಿಗೆ ಸಂಬಂಧಿಸಿದಂತೆ ಲಿಖಿತ ಕೌಂಟರ್ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಎಎಸ್‌ಐಗೆ ಆದೇಶಿಸಿದೆ.

ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ವಿವಾದಿತ ಸ್ಥಳದ ವಾಸ್ತುಶಿಲ್ಪದ ಲಕ್ಷಣಗಳನ್ನು ಪತ್ತೆ ಹಚ್ಚಲು ಸಿವಿಲ್ ಪ್ರೊಸೀಜರ್ ಕೋಡ್ ಪ್ರಕಾರ ನ್ಯಾಯಾಲಯಗಳಿಗೆ ಪೂರ್ಣ ಅಧಿಕಾರವಿದೆ ಎಂದು ವಾದಿಸಿದ್ದಾರೆ. ತಾಜ್ ಮಹಲ್‌ನ ಮುಚ್ಚಿದ ಕೊಠಡಿಗಳು ಮತ್ತು ನೆಲಮಾಳಿಗೆಯಲ್ಲಿ ಹಿಂದೂ ಧಾರ್ಮಿಕ ಚಿಹ್ನೆಗಳಿದ್ದು, ಅವುಗಳನ್ನು ಕೇವಲ ಮೌಖಿಕ ಸಾಕ್ಷ್ಯಗಳಿಂದ ಸಾಬೀತುಪಡಿಸಲು ಸಾಧ್ಯವಿಲ್ಲದ ಕಾರಣ ವೈಜ್ಞಾನಿಕ ಪರಿಶೀಲನೆ ಅತ್ಯಗತ್ಯ ಎಂದು ಅರ್ಜಿಯಲ್ಲಿ ಕೋರಲಾಗಿದೆ. ಹೈಕೋರ್ಟ್ ಸದ್ಯಕ್ಕೆ ಯಾವುದೇ ಅಂತಿಮ ತೀರ್ಪು ನೀಡದಿದ್ದರೂ, ಕೇಂದ್ರ ಮತ್ತು ಎಎಸ್‌ಐಗೆ ನೋಟಿಸ್ ನೀಡಿರುವುದು ಈ ದಶಕಗಳ ಹಳೆಯ ವಿವಾದಕ್ಕೆ ಹೊಸ ಕಾನೂನು ತಿರುವು ನೀಡಿದೆ.

Category
ಕರಾವಳಿ ತರಂಗಿಣಿ