ವಯನಾಡು: ಕೇರಳದ ವಯನಾಡು ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿಯಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಇಡೀ ಪ್ರಾಂತ್ಯವೇ ಕಣ್ಣೀರಿನಲ್ಲಿ ಮುಳುಗಿದೆ. ವಯನಾಡು ಮತ್ತು ಮಲಪ್ಪುರಂ ಜಿಲ್ಲೆಗಳನ್ನು ಸಂಪರ್ಕಿಸುವ ಅತ್ಯಂತ ಮಹತ್ವಾಕಾಂಕ್ಷೆಯ ಅನಾಕಂಪೋಯಿಲ್-ಮೇಪ್ಪಾಡಿ ಅವಳಿ ಸುರಂಗ ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಪ್ರದೇಶದ ಮೀನಾಕ್ಷಿ ಸೇತುವೆ ಬಳಿ ಈ ದುರಂತ ಜರುಗಿದೆ. ಧೋ ಎಂದು ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ಹಠಾತ್ತಾಗಿ ಗುಡ್ಡ ಕುಸಿದು ಭಾರಿ ಪ್ರಮಾಣದ ಮಣ್ಣು, ಕಲ್ಲು ಮತ್ತು ಮರಗಳ ರಾಶಿ ನಿರ್ಮಾಣ ಹಂತದ ಸುರಂಗ ಪ್ರದೇಶಕ್ಕೆ ನುಗ್ಗಿದೆ. ಈ ವೇಳೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಭಾರಿ ಪ್ರಮಾಣದ ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಜೀವಂತ ಸಮಾಧಿಯಾಗಿದ್ದಾರೆ.
ದುರಂತದ ತೀವ್ರತೆ ಎಷ್ಟಿತ್ತೆಂದರೆ, ಸ್ಥಳದಲ್ಲಿದ್ದ ನಿರ್ಮಾಣ ಕಂಪನಿಯ ತಾತ್ಕಾಲಿಕ ಕಚೇರಿ ಕಂಟೈನರ್‌ಗಳು, ಕಾರ್ಮಿಕರ ಬಸ್, ಕಾರುಗಳು ಮತ್ತು ಜೆಸಿಬಿ ಸೇರಿದಂತೆ ಭಾರಿ ಯಂತ್ರೋಪಕರಣಗಳು ಸಂಪೂರ್ಣವಾಗಿ ಮಣ್ಣಿನ ಅಡಿಯಲ್ಲಿ ಹೂತುಹೋಗಿವೆ. ಸುರಂಗ ಮಾರ್ಗ ಕಾಮಗಾರಿಯಲ್ಲಿ ನಿರತರಾಗಿದ್ದ 30ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಕೆಲವು ಸ್ಥಳೀಯ ನಿವಾಸಿಗಳು ನಾಪತ್ತೆಯಾಗಿದ್ದು, ಅವರೆಲ್ಲರೂ ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯ ಬೆನ್ನಲ್ಲೇ ಸ್ಥಳೀಯ ನಿವಾಸಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಮೂವರನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಲ್ಲಿ ಒಬ್ಬರ ಕಾಲು ತೀವ್ರವಾಗಿ ಕತ್ತರಿಸಲ್ಪಟ್ಟಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಸ್ತುತ ಘಟನಾ ಸ್ಥಳದಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿರುವುದು ಹಾಗೂ ಮೀನಾಕ್ಷಿ ಸೇತುವೆ ಸಮೀಪದ ಸಣ್ಣ ನದಿಯೊಂದು ಉಕ್ಕಿ ಹರಿಯುತ್ತಿರುವುದು ರಕ್ಷಣಾ ಕಾರ್ಯಾಚರಣೆಗೆ ಭಾರಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಸ್ತೆಯ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಮಣ್ಣು ಸರಿಸಲು ಕಷ್ಟಸಾಧ್ಯವಾಗುತ್ತಿದೆ. ಆದಾಗ್ಯೂ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತದ ಜಂಟಿ ತಂಡಗಳು ಜೆಸಿಬಿ ಯಂತ್ರಗಳ ಸಹಾಯದಿಂದ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ.
ಈ ದುರಂತದ ಹಿನ್ನೆಲೆಯಲ್ಲಿ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಉನ್ನತ ಮಟ್ಟದ ತುರ್ತು ಸಭೆ ನಡೆಸಿದ್ದು, ತಕ್ಷಣವೇ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಸಚಿವರಾದ ಎ.ಪಿ. ಅನಿಲ್ ಕುಮಾರ್ ಮತ್ತು ಟಿ. ಸಿದ್ದಿಕ್ ಅವರಿಗೆ ತಕ್ಷಣವೇ ವಯನಾಡಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಗಾಯಾಳುಗಳಿಗೆ ಗರಿಷ್ಠ ವೈದ್ಯಕೀಯ ನೆರವು ನೀಡಲು ಸ್ಥಳೀಯ ಆಸ್ಪತ್ರೆಗಳನ್ನು ಸಂಪೂರ್ಣ ಹೈ-ಅಲರ್ಟ್‌ನಲ್ಲಿ ಇಡಲಾಗಿದೆ. ಇದು ಪ್ರವಾಸೋದ್ಯಮ ವಲಯವೂ ಆಗಿರುವುದರಿಂದ ಮಣ್ಣಿನಡಿ ಯಾರಾದರೂ ಪ್ರವಾಸಿಗರು ಸಿಲುಕಿದ್ದಾರೆಯೇ ಎಂಬ ನಿಟ್ಟಿನಲ್ಲೂ ಆಡಳಿತ ಮಂಡಳಿ ತನಿಖೆ ನಡೆಸುತ್ತಿದೆ.