image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ನೂತನ ಸುರಂಗ ಕುಸಿತ : ಹೆದ್ದಾರಿ ಬಂದ್, ಪ್ರಯಾಣಿಕರ ಪರದಾಟ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ನೂತನ ಸುರಂಗ ಕುಸಿತ : ಹೆದ್ದಾರಿ ಬಂದ್, ಪ್ರಯಾಣಿಕರ ಪರದಾಟ

ಮುಂಬೈ : ಭಾರೀ ಮಳೆಯ ಅಬ್ಬರಕ್ಕೆ ಮುಂಬೈ ನಗರ ತತ್ತರಗೊಂಡಿದ್ದು, ಮಳೆ ಸಂಬಂಧಿತ ಅವಾಂತರಗಳಿಗೆ ಹತ್ತಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಅತ್ಯಂತ ಜನನಿಬಿಡ ಹೆದ್ದಾರಿಯಾದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ 7,000 ಕೋಟಿ ರೂಪಾಯಿ ವೆಚ್ಚದ 'ಮಿಸ್ಸಿಂಗ್ ಲಿಂಕ್' ಸುರಂಗ ಮಾರ್ಗದ ಪ್ರವೇಶ ದ್ವಾರದ ಒಂದು ಭಾಗ ಸೋಮವಾರ ಕುಸಿದು ಬಿದ್ದಿದೆ. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಸಾವಿರಾರು ಪ್ರಯಾಣಿಕರು ಆಹಾರ ಮತ್ತು ನೀರಿಲ್ಲದೆ ರಸ್ತೆಯಲ್ಲೇ ಗಂಟೆಗಳ ಕಾಲ ಪರದಾಡುವಂತಾಯಿತು. ಸುರಂಗ ಕುಸಿತದ ಬೆನ್ನಲ್ಲೇ ಮಳೆನೀರು ರಸ್ತೆಗೆ ನುಗ್ಗಿದ್ದರಿಂದ ವಾಹನಗಳು ನಿಯಂತ್ರಣ ಕಳೆದುಕೊಳ್ಳುವ ಅಪಾಯವೂ ಎದುರಾಗಿತ್ತು.

ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು 20 ರಿಂದ 25 ನಿಮಿಷಗಳಷ್ಟು ಕಡಿಮೆ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು (MSRDC) ಈ 19 ಕಿಲೋಮೀಟರ್ ಉದ್ದದ ಮಿಸ್ಸಿಂಗ್ ಲಿಂಕ್ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಒಟ್ಟು 13.3 ಕಿ.ಮೀ ವಿಸ್ತೀರ್ಣದ ಈ ಯೋಜನೆಯು 1.6 ಕಿ.ಮೀ ಮತ್ತು 8.9 ಕಿ.ಮೀ ಉದ್ದದ ಎರಡು ಅವಳಿ ಸುರಂಗಗಳು, ಎರಡು ಹೈ-ಸ್ಪೀಡ್ ವಯಾಡಕ್ಟ್‌ಗಳು ಹಾಗೂ ಟೈಗರ್ ಕಣಿವೆಯ ಮೇಲೆ ದೇಶದಲ್ಲೇ ಅತಿ ಎತ್ತರದ ಎನ್ನಲಾದ 183 ಮೀಟರ್‌ನ ಕೇಬಲ್-ಸ್ಟೇಡ್ ಸೇತುವೆಯನ್ನು ಒಳಗೊಂಡಿದೆ. 2017ರಲ್ಲಿ ಅನುಮೋದನೆ ಪಡೆದು 2019ರಲ್ಲಿ ಕಾಮಗಾರಿ ಆರಂಭಿಸಿದ್ದ ಈ ಯೋಜನೆಗೆ ಕೋವಿಡ್-19 ಸಾಂಕ್ರಾಮಿಕ, ಕಠಿಣ ಭೌಗೋಳಿಕ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟಗಳ ಸವಾಲುಗಳು ಅಡ್ಡಿಯಾಗಿದ್ದವು. ಇತ್ತೀಚೆಗಷ್ಟೇ ಮೇ 1 ರಂದು ಉದ್ಘಾಟನೆಗೊಂಡಿದ್ದ ಈ ಮಾರ್ಗವನ್ನು ಮಹಾರಾಷ್ಟ್ರದ ಹೊಸ ಸಂಪರ್ಕ ಕೊಂಡಿ ಎಂದು ಬಣ್ಣಿಸಲಾಗಿತ್ತು.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅತಿಯಾದ ಮಳೆಯಿಂದಾಗಿ ಸುರಂಗದ ಭಾಗದಲ್ಲಿ ಭೂಕುಸಿತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಹೆದ್ದಾರಿಯ ಈ ನಿರ್ದಿಷ್ಟ ಪ್ರದೇಶದಲ್ಲಿ ಮೊದಲ ಬಾರಿಗೆ ಇಂತಹ ಭೂಕುಸಿತವಾಗಿದ್ದು, ಸುಮಾರು 100 ಟನ್‌ಗಳಿಗೂ ಹೆಚ್ಚು ಅವಶೇಷಗಳು ರಸ್ತೆಯ ಮೇಲೆ ಬಿದ್ದಿದ್ದವು. ಪ್ರಕೃತಿಯ ವಿಕೋಪದಿಂದಾಗಿ ನಮ್ಮ ನಿಯಂತ್ರಣ ಮೀರಿ ಈ ಘಟನೆ ನಡೆದಿದೆ ಎಂದ ಅವರು, ಅಗ್ನಿಶಾಮಕ ದಳ ಮತ್ತು ಸರ್ಕಾರಿ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆ ನಡೆಸಿ ರಸ್ತೆಯಲ್ಲಿದ್ದ ಅವಶೇಷಗಳನ್ನು ತೆರವುಗೊಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ