image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ದಿಗ್ವಿಜಯ್ ಸಿಂಗ್ ದೇವರಿಗೆ ಕೊಟ್ಟ ದೇಣಿಗೆ ವಾಪಸ್ ಕೇಳಿದ್ದಕ್ಕೆ 1.10 ಲಕ್ಷ ರೂ. ಚೆಕ್ ರೆಡಿ ಮಾಡಿ ಮನೆಗೆ ತಲುಪಿಸುವುದಾಗಿ ರೈತನ ಬಹಿರಂಗ ಸವಾಲು

ದಿಗ್ವಿಜಯ್ ಸಿಂಗ್ ದೇವರಿಗೆ ಕೊಟ್ಟ ದೇಣಿಗೆ ವಾಪಸ್ ಕೇಳಿದ್ದಕ್ಕೆ 1.10 ಲಕ್ಷ ರೂ. ಚೆಕ್ ರೆಡಿ ಮಾಡಿ ಮನೆಗೆ ತಲುಪಿಸುವುದಾಗಿ ರೈತನ ಬಹಿರಂಗ ಸವಾಲು

ಅಯೋಧ್ಯೆ : ಅಯೋಧ್ಯೆಯ ಭವ್ಯ ರಾಮ ಮಂದಿರದ ದೇಣಿಗೆ ವಿಷಯದಲ್ಲಿ ಈಗ ರಾಜಕೀಯ ಮತ್ತು ಭಕ್ತಿಯ ಸಂಘರ್ಷ ತಾರಕಕ್ಕೇರಿದೆ. ಅಯೋಧ್ಯೆಯಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರ ಅಥವಾ ಕಳ್ಳತನದ ಆರೋಪ ಮುಂದಿಟ್ಟುಕೊಂಡು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ನೀಡಿದ್ದ ಹೇಳಿಕೆ ಈಗ ಅವರಿಗೆ ದೊಡ್ಡ ಮಟ್ಟದ ತಿರುಗುಬಾಣವಾಗಿದೆ. ತಾವು ನೀಡಿದ ದೇಣಿಗೆ ವಾಪಸ್ ಪಡೆಯಲು ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದಿದ್ದ ನಾಯಕನಿಗೆ ರಾಮಭಕ್ತನೊಬ್ಬ ಬಹಿರಂಗ ಸವಾಲು ಹಾಕಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ 1.10 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದರು. ಆದರೆ ಇತ್ತೀಚೆಗೆ ಮಂದಿರದ ನಿಧಿಯಲ್ಲಿ ಅಕ್ರಮ ನಡೆದಿದೆ ಎಂಬ ಸುದ್ದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಕಾರಣಕ್ಕಾಗಿ ತಾವು ನೀಡಿದ ಹಣವನ್ನು ಮರಳಿ ಪಡೆಯಲು ಅಯೋಧ್ಯೆಯ ನ್ಯಾಯಾಲಯದಲ್ಲಿ ಕಾನೂನು ಸಮರ ಸಾರುವುದಾಗಿ ಘೋಷಿಸಿದ್ದರು. ರಾಮ ಮಂದಿರದ ಹೆಸರಿನಲ್ಲಿ ಭಕ್ತರ ಹಣ ಪೋಲಾಗುತ್ತಿದೆ ಎಂಬುದು ಅವರ ಗಂಭೀರ ಆರೋಪವಾಗಿತ್ತು.

ದಿಗ್ವಿಜಯ್ ಸಿಂಗ್ ಅವರ ಈ ನಡೆಯನ್ನು ಕಂಡು ಇಂದೋರ್ ಜಿಲ್ಲೆಯ ದೇಪಾಲಪುರದ ರಾಮ್ ಸಿಂಗ್ ಮಕ್ವಾನಾ ಎಂಬ ರೈತ ಮತ್ತು ರಾಮಭಕ್ತ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಡಿಯೋವೊಂದರ ಮೂಲಕ ಮಾತನಾಡಿರುವ ಅವರು, ದೇವರಿಗೆ ನೀಡಿದ ಹಣವನ್ನು ವಾಪಸ್ ಕೇಳುವುದು ಶೋಭೆಯಲ್ಲ. ನಿಮಗೇನಾದರೂ ಆ ಹಣದ ಅವಶ್ಯಕತೆ ಇದ್ದರೆ ಅಥವಾ ನ್ಯಾಯಾಲಯದ ಅಲೆದಾಟ ಬೇಡವೆಂದಿದ್ದರೆ, ನೀವು ಕೋರ್ಟ್‌ಗೆ ಹೋಗುವ ಶ್ರಮ ಪಡುವುದು ಬೇಡ. ನಿಮ್ಮ ಹೆಸರಿಗೆ ನಾನು ಈಗಾಗಲೇ 1.10 ಲಕ್ಷ ರೂಪಾಯಿಗಳ ಚೆಕ್ ಸಿದ್ಧಪಡಿಸಿಟ್ಟಿದ್ದೇನೆ ಎಂದು ಘೋಷಿಸಿದ್ದಾರೆ. ರಾಮ್ ಸಿಂಗ್ ಮಕ್ವಾನಾ ಅವರು ಕೇವಲ ಚೆಕ್ ಸಿದ್ಧಪಡಿಸಿದ್ದಷ್ಟೇ ಅಲ್ಲದೆ, ಪ್ರಬಲ ಸವಾಲೊಂದನ್ನು ಹಾಕಿದ್ದಾರೆ. ನ್ಯಾಯಾಲಯದ ಪ್ರಕ್ರಿಯೆಗಳು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತವೆ. ಅಷ್ಟೊಂದು ಕಾಯುವ ತಾಳ್ಮೆ ನಿಮಗಿಲ್ಲದಿದ್ದರೆ, ನೀವು ಎಂದಾದರೂ ಇಂದೋರ್ ಕಡೆ ಬಂದಾಗ ನಾನೇ ಆ ಚೆಕ್ ಹಸ್ತಾಂತರಿಸುತ್ತೇನೆ. ಇಲ್ಲವೇ ನಿಮ್ಮ ಮನೆಗೇ ಬಂದು ಹಣ ನೀಡಿ ಬರುತ್ತೇನೆ. ದೇಶದಲ್ಲಿ ರಾಮಭಕ್ತರು ಬದುಕಿರುವವರೆಗೂ ರಾಮನ ಹೆಸರಿಗೆ ನೀಡಿದ ದೇಣಿಗೆಯನ್ನು ವಾಪಸ್ ಕೇಳುವ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.

ಈ ಬೆಳವಣಿಗೆಯಿಂದಾಗಿ ಅಯೋಧ್ಯೆ ರಾಮ ಮಂದಿರದ ಸುತ್ತಲಿನ ರಾಜಕೀಯ ಮತ್ತಷ್ಟು ಕಾವೇರಿದೆ. ಹಣ ವಾಪಸ್ ಪಡೆಯಲು ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದ ದಿಗ್ವಿಜಯ್ ಸಿಂಗ್ ಅವರಿಗೆ ಈ ರೈತನ ಸವಾಲು ಈಗ ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ನಾಯಕರು ಈ ರೀತಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರುತ್ತಿದ್ದರೆ, ರಾಮಭಕ್ತರ ಈ ಆಕ್ರೋಶದ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Category
ಕರಾವಳಿ ತರಂಗಿಣಿ