ನವದೆಹಲಿ : ದಶಕಗಳಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಡುವೈರಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನೇ ಈಗ ಬಿಜೆಪಿ ನಾಯಕರು ಹಾಡಿ ಹೊಗಳುತ್ತಿರುವುದು ಮಧ್ಯಪ್ರದೇಶ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಷ್ಟೇ ಅಲ್ಲದೆ, ಅವರು ಬಿಜೆಪಿಗೆ ಬಂದರೆ ರಾಜರಂತೆ ನಡೆಸಿಕೊಳ್ಳುತ್ತೇವೆ ಎಂಬ ಬಹಿರಂಗ ಆಫರ್ ಕೂಡ ನೀಡುತ್ತಿದ್ದಾರೆ. ಈ ಹಠಾತ್ ಬದಲಾವಣೆಯ ಹಿಂದೆ ಕಾಂಗ್ರೆಸ್ ಮನೆಯೊಳಗಿನ ಬೆಂಕಿ ಮತ್ತು ಬಿಜೆಪಿಯ ಚಾಣಕ್ಯ ತಂತ್ರ ಅಡಗಿದೆ.
ಈ ಎಲ್ಲಾ ರಾಜಕೀಯ ಗೊಂದಲಗಳಿಗೆ ನಾಂದಿ ಹಾಡಿದ್ದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟವಾರಿ ಅವರ ಒಂದು ಆರೋಪ. ಉಜ್ಜಯಿನಿಯ ವೀರ ಭಾರತ ನ್ಯಾಸ್ ಟ್ರಸ್ಟ್‌ಗೆ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕೇವಲ 1 ರೂಪಾಯಿಗೆ ನೀಡುವ ಮೂಲಕ ಮುಖ್ಯಮಂತ್ರಿ ಮೋಹನ್ ಯಾದವ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಪಟವಾರಿ ವಾಗ್ದಾಳಿ ನಡೆಸಿದ್ದರು. ಆದರೆ, ಪಕ್ಷದ ಅಧ್ಯಕ್ಷರ ಈ ಗಂಭೀರ ಆರೋಪಕ್ಕೆ ಸ್ವತಃ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರೇ ಟಾಂಗ್ ನೀಡಿದರು.
ಆ ಜಮೀನನ್ನು ಖಾಸಗಿ ಟ್ರಸ್ಟ್‌ಗೆ ನೀಡಿಲ್ಲ, ಅದು ಸರ್ಕಾರಿ ಟ್ರಸ್ಟ್ ಆಗಿದೆ. ಸರಿಯಾದ ದಾಖಲೆಗಳಿಲ್ಲದೆ ಮಾತನಾಡುವ ದಲ್ಲಾಳಿಗಳಿಗೆ ಕೊರತೆಯಿಲ್ಲ ಎಂದು ಹೇಳುವ ಮೂಲಕ ದಿಗ್ವಿಜಯ್ ಸಿಂಗ್ ತಮ್ಮದೇ ಪಕ್ಷದ ಅಧ್ಯಕ್ಷರನ್ನು ತೀವ್ರ ಮುಜುಗರಕ್ಕೆ ಈಡುಮಾಡಿದರು. ದಿಗ್ವಿಜಯ್ ಸಿಂಗ್ ನೀಡಿದ ಈ ಹೇಳಿಕೆಯನ್ನು ಬಿಜೆಪಿ ತಕ್ಷಣವೇ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡಿತು. ಪ್ರತಿ ಬಾರಿ ಸಿಂಗ್ ಅವರನ್ನು ತೀಕ್ಷ್ಣವಾಗಿ ಟೀಕಿಸುತ್ತಿದ್ದ ಬಿಜೆಪಿ ವಕ್ತಾರರು, ಈ ಬಾರಿ ಅವರ ಪ್ರಾಮಾಣಿಕತೆ ಮತ್ತು ದಾಖಲೆಗಳನ್ನು ಪರಿಶೀಲಿಸುವ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇಷ್ಟಕ್ಕೇ ನಿಲ್ಲದ ಬಿಜೆಪಿ ಶಾಸಕ ಪ್ರೀತಂ ಲೋಧಿ ಒಂದು ಹೆಜ್ಜೆ ಮುಂದೆ ಹೋಗಿ, ದಿಗ್ವಿಜಯ್ ಸಿಂಗ್ ಒಬ್ಬ ದೊಡ್ಡ ನಾಯಕ, ಅವರನ್ನು ಕಾಂಗ್ರೆಸ್‌ನಲ್ಲಿ ಸರಿಯಾಗಿ ಗೌರವಿಸುತ್ತಿಲ್ಲ. ಅವರು ಬಿಜೆಪಿಗೆ ಬಂದರೆ ನಾವು ಅವರನ್ನು ರಾಜರಂತೆ ನಡೆಸಿಕೊಳ್ಳುತ್ತೇವೆ ಎಂದು ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿರುವ ಮತ್ತೊಂದು ಗಂಭೀರ ಆರೋಪವೆಂದರೆ, ದಿಗ್ವಿಜಯ್ ಸಿಂಗ್ ಅವರು ತಮ್ಮ ಮಗನ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಿಜೆಪಿ ಸರ್ಕಾರದ ವಿರುದ್ಧ ಮೃದು ಧೋರಣೆ ತಳೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಗಳ ವಿರುದ್ಧದ ಭ್ರಷ್ಟಾಚಾರದ ಅಭಿಯಾನವನ್ನು ದಿಗ್ವಿಜಯ್ ಸಿಂಗ್ ಅವರೇ ಹಳ್ಳ ಹಿಡಿಸುತ್ತಿದ್ದಾರೆ ಎಂದು ಕೆಲವು ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಪಕ್ಷದ ನಾಯಕರ ನಡುವಿನ ಈ ಆಂತರಿಕ ಕಲಹ ಸದ್ಯ ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ.