ನವದೆಹಲಿ : ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮತ್ತು ಸಚಿವ ಆಧವ್ ಅರ್ಜುನ ಸೇರಿದಂತೆ ಇತರ ಆರೋಪಿಗಳು ಕರೂರ್ ಕಾಲ್ತುಳಿತ ಪ್ರಕರಣದ ಸಿಬಿಐ ತನಿಖೆ ಕುರಿತು ಸಾರ್ವಜನಿಕ ಹೇಳಿಕೆಗಳನ್ನು ನೀಡುವುದನ್ನು ಹಾಗೂ ಸಂತ್ರಸ್ತರ ಕುಟುಂಬಗಳೊಂದಿಗೆ ಮಾತನಾಡುವುದನ್ನು ತಡೆಯುವಂತೆ ಕೋರಿ ಡಿಎಂಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರು ಈ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದಾರೆ.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದು, 142 ಜನರು ಗಾಯಗೊಂಡಿದ್ದರು. ಈ ಘಟನೆಯ ತನಿಖೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ಸಿಬಿಐಗೆ ಒಪ್ಪಿಸಿದ್ದು, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಸಮಿತಿಯು ಇದರ ಉಸ್ತುವಾರಿ ವಹಿಸಿಕೊಂಡಿದೆ. ಪ್ರಸ್ತುತ ಪ್ರಕರಣದ ಆರೋಪಿಗಳೇ ತಮಿಳುನಾಡಿನಲ್ಲಿ ಅಧಿಕಾರ ಹಿಡಿದಿರುವುದರಿಂದ, ಅವರು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ.
ಜುಲೈ 2ರಂದು ಸಚಿವ ಆಧವ್ ಅರ್ಜುನ ಅವರು ನೀಡಿದ ಸಾರ್ವಜನಿಕ ಹೇಳಿಕೆಯು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯಗಳನ್ನು ತಿರುಚುವ ಉದ್ದೇಶವನ್ನು ಹೊಂದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲು ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಡಿಎಂಕೆ ಒತ್ತಾಯಿಸಿದೆ. ಅಲ್ಲದೆ, ಜುಲೈ 10 ರಂದು ಮುಖ್ಯಮಂತ್ರಿ ವಿಜಯ್ ಅವರು ಕರೂರ್ ಪ್ರವಾಸ ಕೈಗೊಂಡು ಸಂತ್ರಸ್ತರ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಹಾಗೂ ಕಲ್ಯಾಣ ಸೌಲಭ್ಯಗಳನ್ನು ವಿತರಿಸಲು ಯೋಜಿಸಿದ್ದಾರೆ. ಈ ಸಂತ್ರಸ್ತರ ಕುಟುಂಬಗಳು ಸಿಬಿಐ ತನಿಖೆಯ ಪ್ರಮುಖ ಸಾಕ್ಷಿಗಳಾಗಿದ್ದು, ಆರೋಪಿಗಳ ಸ್ಥಾನದಲ್ಲಿರುವವರು ಇವರನ್ನು ನೇರವಾಗಿ ಭೇಟಿಯಾಗುವುದರಿಂದ ಮುಕ್ತ ತನಿಖೆಗೆ ಧಕ್ಕೆಯಾಗಬಹುದು ಎಂದು ಡಿಎಂಕೆ ಆತಂಕ ವ್ಯಕ್ತಪಡಿಸಿದೆ.
ನ್ಯಾಯಾಲಯ ನಿಗದಿಪಡಿಸಿದ ಸುರಕ್ಷತಾ ಕ್ರಮಗಳ ಅಡಿಯಲ್ಲಿ ಮತ್ತು ಯೋಜನೆಯನ್ನು ಸಿಬಿಐ ಮುಂದೆ ಇಟ್ಟ ನಂತರವಷ್ಟೇ ಸಂತ್ರಸ್ತರಿಗೆ ಪರಿಹಾರ ಮತ್ತು ಉದ್ಯೋಗ ಸೌಲಭ್ಯಗಳನ್ನು ನೀಡಲು ಅನುಮತಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಮುಖ್ಯಮಂತ್ರಿ ವಿಜಯ್, ಸಚಿವ ಆಧವ್ ಅರ್ಜುನ, ಬುಸ್ಸಿ ಆನಂದ್ ಹಾಗೂ ಸಿ.ಟಿ. ನಿರ್ಮಲ್ ಕುಮಾರ್ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳು ರಾಜಕೀಯ ವಿರೋಧಿಗಳನ್ನು ಬೆದರಿಸುವ ಅಥವಾ ನ್ಯಾಯಯುತ ತನಿಖೆಗೆ ಅಡ್ಡಿಪಡಿಸುವ ರೀತಿಯಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ಕಟ್ಟುನಿಟ್ಟಿನ ನಿಷೇಧ ಹೇರಬೇಕು ಎಂದು ಡಿಎಂಕೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.