ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿರುವ ಪರಿಣಾಮ ಭೂಕುಸಿತ ಮತ್ತು ರಸ್ತೆ ಸಂಚಾರ ಮಾರ್ಗದ ಅಡ್ಡಿಯಿಂದಾಗಿ ಸಾಮಾನ್ಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಿನ್ನೌರ್‌ನ ಬುಡಕಟ್ಟು ಜಿಲ್ಲೆ ಚೋಲಿಂಗ್‌ನಲ್ಲಿ ಇಂದು ಮುಂಜಾನೆ 4ರ ಸುಮಾರಿಗೆ ಸಂಭವಿಸಿದ ದಿಢೀರ್ ಮೇಘಸ್ಫೋಟ ಮತ್ತು ಹಠಾತ್ ಪ್ರವಾಹವು ಸ್ಥಳೀಯ ಜನರಲ್ಲಿ ಭೀತಿಯನ್ನುಂಟು ಮಾಡಿದೆ. ಬೆಟ್ಟದ ಇಳಿಜಾರಿನಲ್ಲಿ ಸುರಿದ ಸತತ ಧಾರಾಕಾರ ಮಳೆಯಿಂದಾಗಿ ಮೀರು ನಲ್ಲಾದಲ್ಲಿ ಭಾರಿ ಪ್ರಮಾಣದ ಅವಶೇಷಗಳು ಬಿದ್ದಿದ್ದು, ಕಾಜಾ, ಕಿನ್ನೌರ್ ಮತ್ತು ಶಿಮ್ಲಾವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-5 ಅನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಚೋಲಿಂಗ್ ಶಾಲೆಯ ಸಮೀಪ ರಸ್ತೆಯ ಸುಮಾರು 30 ಮೀಟರ್‌ಗಳಷ್ಟು ಭಾಗವು ಅವಶೇಷಗಳಿಂದ ಆವೃತವಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಕೆಲವು ವಾಹನಗಳು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದಲ್ಲದೆ ಕಿನ್ನೌರ್ ಜಿಲ್ಲೆಯ ರಿಬ್ಬಾ ಗ್ರಾಮದಲ್ಲೂ ಹಠಾತ್ ಪ್ರವಾಹ ಉಂಟಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ ಕೈಗೊಂಡಿವೆ. ಚೋಲಿಂಗ್ ಬಳಿ ರಸ್ತೆ ತೆರವುಗೊಳಿಸಲು ಮತ್ತು ಪ್ರವಾಹದಲ್ಲಿ ಸಿಲುಕಿರುವ ವಾಹನಗಳನ್ನು ಸುರಕ್ಷಿತವಾಗಿ ಹೊರತೆಗೆಯಲು ಭಾರಿ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ ಎಂದು ಕಿನ್ನೌರ್ ಜಿಲ್ಲಾಧಿಕಾರಿ ಡಾ. ಅಮಿತ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಆಡಳಿತದ ತಂಡವು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಆದಷ್ಟು ಬೇಗ ರಾಷ್ಟ್ರೀಯ ಹೆದ್ದಾರಿಯನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ. ಪ್ರವಾಹದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯರು ಮತ್ತು ಪ್ರವಾಸಿಗರು ನದಿಗಳು, ತೊರೆಗಳು ಹಾಗೂ ಹೆಚ್ಚಿನ ಅಪಾಯದ ಪ್ರದೇಶಗಳ ಬಳಿ ಹೋಗದಂತೆ ಕಿನ್ನೌರ್ ಆಡಳಿತ ಕಟ್ಟುನಿಟ್ಟಿನ ಮನವಿ ಮಾಡಿದೆ. ಅನಗತ್ಯ ಪ್ರಯಾಣ ಮತ್ತು ಚಾರಣದಿಂದ ದೂರವಿರಲು ಸೂಚಿಸಲಾಗಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚುವರಿ ಎಚ್ಚರಿಕೆ ವಹಿಸಲು ಆದೇಶಿಸಲಾಗಿದೆ. ಯಾವುದೇ ವಿಪತ್ತು ಸಂಭವಿಸಿದಲ್ಲಿ ತಕ್ಷಣವೇ ವಿಪತ್ತು ನಿರ್ವಹಣಾ ತಂಡಕ್ಕೆ ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.