image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಮಮಂದಿರ ದೇಣಿಗೆ ಹಗರಣಕ್ಕೆ ಕರ್ನಾಟಕದ ನಂಟು: ಅಖಿಲೇಶ್ ಯಾದವ್ ಗಂಭೀರ ಆರೋಪ

ರಾಮಮಂದಿರ ದೇಣಿಗೆ ಹಗರಣಕ್ಕೆ ಕರ್ನಾಟಕದ ನಂಟು: ಅಖಿಲೇಶ್ ಯಾದವ್ ಗಂಭೀರ ಆರೋಪ

ಅಯೋಧ್ಯಾ : ಅಯೋಧ್ಯೆ ರಾಮಮಂದಿರದ ಕಾಣಿಕೆ ಹಣ ಮತ್ತು ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂದು ಮೊದಲು ಆರೋಪಿಸಿದ್ದವರಲ್ಲಿ ಒಬ್ಬರಾದ ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್‌, ಆಡಳಿತಾರೂಢ ಬಿಜೆಪಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮಮಂದಿರ ದೇಣಿಗೆ ಕಳ್ಳತನದ ನಂಟು ಕರ್ನಾಟಕದವರೆಗೂ ವಿಸ್ತರಿಸಿದೆ ಎಂದು ಅಯೋಧ್ಯೆಯ ಜನರೇ ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಪಿತೂರಿಗಳಲ್ಲಿ ಕರ್ನಾಟಕದ 'ಭೂಗತ' (ಅಂಡರ್‌ಗ್ರೌಂಡ್‌) ಮತ್ತು 'ನೋಂದಾಯಿಸಲ್ಪಡದ' (ಅನ್‌ರಿಜಿಸ್ಟರ್ಡ್‌) ವ್ಯಕ್ತಿಗಳು ಭಾಗಿಯಾಗಿದ್ದಾರೆ. ಅವರ ಚಟುವಟಿಕೆಗಳು ಈಗ ಬಹಿರಂಗಗೊಂಡಿವೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಆದರೆ, ಕರ್ನಾಟಕದ ಆ ನೋಂದಾಯಿತವಲ್ಲದ ವ್ಯಕ್ತಿಗಳು ಯಾರು ಎಂಬುದನ್ನು ಮಾತ್ರ ಅವರು ಸ್ಪಷ್ಟಪಡಿಸಿಲ್ಲ.

ಇದೇ ವೇಳೆ ಬಿಜೆಪಿಯ ಧೋರಣೆಯನ್ನು ತೀವ್ರವಾಗಿ ಖಂಡಿಸಿದ ಅವರು, "ಚೋರ್-ಚೋರ್ ಸೌತೆಲೇ ಭಾಯಿ, ಜಿನ್ಹೋನೆ ಚುರಾಯಿ ಭಗವಾನ್ ರಾಮ್ ಕಿ ಪೈ" (ಕಳ್ಳರು ಭಗವಾನ್ ರಾಮನ ಕಾಣಿಕೆಗಳನ್ನು ಸಹ ಕದ್ದ ಮಲಸಹೋದರರಂತೆ) ಎಂದು ಲೇವಡಿ ಮಾಡಿದ್ದಾರೆ. ಈ ಹಗರಣದಲ್ಲಿ ಕೇವಲ 'ಸಣ್ಣ ಮೀನುಗಳನ್ನು' ಮಾತ್ರ ಬಂಧಿಸಿ, 'ದೊಡ್ಡ ಮೀನುಗಳನ್ನು' ರಕ್ಷಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಆಡಳಿತಾರೂಢ ಬಿಜೆಪಿಗೆ ದೇಶಕ್ಕಿಂತ ದೇಣಿಗೆಯೇ ದೊಡ್ಡದಾಗಿದೆ ಮತ್ತು ಪಕ್ಷವು ಸಾರ್ವಜನಿಕರ ನಂಬಿಕೆಗೆ ದೊಡ್ಡ ದ್ರೋಹ ಬಗೆದಿದೆ. ಬಿಜೆಪಿ ಸರ್ಕಾರದ ಅಡಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಲೂಟಿ ನಡೆಯುತ್ತಿದೆ. ಅವರ ಗಮನ ರಾಷ್ಟ್ರದ ಮೇಲಲ್ಲ, ಕೇವಲ ದೇಣಿಗೆಗಳ ಮೇಲಿದೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಭಗವಾನ್ ರಾಮನಿಗೆ ದ್ರೋಹ ಮಾಡಿರುವುದರಿಂದ, ನಿಜವಾದ ಸನಾತನಿಗಳು ಯಾರೂ ಬಿಜೆಪಿಗೆ ಮತ ಹಾಕಬಾರದು ಅಥವಾ ಆ ಪಕ್ಷದಿಂದ ಚುನಾವಣಾ ಟಿಕೆಟ್ ಪಡೆಯಬಾರದು ಎಂದು ಅಖಿಲೇಶ್ ಯಾದವ್ ಕರೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ