image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪಾಕ್ ಜೊತೆ 'ಟ್ರ್ಯಾಕ್-2' ಮಾತುಕತೆ ವರದಿ ನಿರಾಕರಿಸಿದ ಭಾರತ

ಪಾಕ್ ಜೊತೆ 'ಟ್ರ್ಯಾಕ್-2' ಮಾತುಕತೆ ವರದಿ ನಿರಾಕರಿಸಿದ ಭಾರತ

ನವದೆಹಲಿ : ಮಾಧ್ಯಮಗಳು ವರದಿ ಮಾಡಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿತೀಯ ಹಂತದ ರಾಜತಾಂತ್ರಿಕ ಮಾತುಕತೆಗಳನ್ನು (ಟ್ರ್ಯಾಕ್-2 ಡಿಪ್ಲೋಮಸಿ) ಭಾರತ ಸರ್ಕಾರ ಅಧಿಕೃತವಾಗಿ ನಿರಾಕರಿಸಿದೆ. ಶ್ರೀಲಂಕಾದ ಕೊಲಂಬೊದಲ್ಲಿ ಇತ್ತೀಚೆಗೆ ನಡೆದ ಪ್ರಾದೇಶಿಕ ಭದ್ರತಾ ಸಮ್ಮೇಳನದ ವೇಳೆ ಉಭಯ ದೇಶಗಳ ನಿವೃತ್ತ ಮಿಲಿಟರಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ತೆರೆಮರೆಯ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಸ್ಪಷ್ಟನೆ ನೀಡಿದ್ದಾರೆ. ಸೀಶೆಲ್ಸ್‌ ದೇಶದ ರಾಜಧಾನಿ ವಿಕ್ಟೋರಿಯಾದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ವಿಕ್ರಮ್ ಮಿಶ್ರಿ, ನಿವೃತ್ತ ಅಧಿಕಾರಿಗಳು ನಡೆಸುವ ಇಂತಹ ಸಂವಾದಗಳಿಗೂ ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಇಂತಹ ಚರ್ಚೆಗಳು ದೇಶದ ನೈಜ ಭಾವನೆಗಳು ಅಥವಾ ಅಧಿಕೃತ ದೃಷ್ಟಿಕೋನವನ್ನು ಹೊಂದಿರುವುದಿಲ್ಲ. ಸರ್ಕಾರವು ಇಂತಹ ಮಾತುಕತೆಗಳಿಗಾಗಿ ಯಾರನ್ನೂ ನೇಮಿಸಿಲ್ಲ ಎಂದು ಅವರು ತಿಳಿಸಿದರು.

ದೇಶ-ವಿದೇಶಗಳಲ್ಲಿ ಆಗಾಗ್ಗೆ ನಡೆಯುವ ಇಂತಹ ಸಂವಾದಗಳು ಕೇವಲ ಖಾಸಗಿ ವ್ಯಕ್ತಿಗಳು ನಡೆಸುವ ಖಾಸಗಿ ಕಾರ್ಯಕ್ರಮಗಳಷ್ಟೆ. ಇದರಲ್ಲಿ ಯಾವುದೇ ದೇಶದ ಅಧಿಕೃತ ಪ್ರತಿನಿಧಿಗಳು ಭಾಗವಹಿಸುವುದಿಲ್ಲ. ಸರ್ಕಾರದ ಪರವಾಗಿ ಯಾರೇ ಚರ್ಚೆ ನಡೆಸಿದರೂ ಅದು ಅವರ ವೈಯಕ್ತಿಕ ದೃಷ್ಟಿಕೋನವಾಗಿರುತ್ತದೆ. ಹೀಗಾಗಿ, ಇಂತಹ ಸಭೆಗಳನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಇವುಗಳಿಗೆ ಯಾವುದೇ ಅಧಿಕೃತ ಮೌಲ್ಯ ಇರುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿಗಳು ಸ್ಪಷ್ಟಪಡಿಸುವ ಮೂಲಕ ತೆರೆಮರೆಯ ಮಾತುಕತೆಯ ವರದಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.

Category
ಕರಾವಳಿ ತರಂಗಿಣಿ