ನವದೆಹಲಿ : ದೇಶಾದ್ಯಂತ ಮನೆ ಹಾಗೂ ಫ್ಲಾಟ್ ಖರೀದಿದಾರರ ಹಿತರಕ್ಷಣೆಯ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಬಿಲ್ಡರ್‌ಗಳು ಫ್ಲಾಟ್ ನೀಡಲು ವಿಳಂಬ ಮಾಡಿದರೆ, ಗ್ರಾಹಕರು ಆ ಫ್ಲಾಟ್‌ನ ಸ್ವಾಧೀನ ಪಡೆದುಕೊಂಡ ನಂತರವೂ ವಿಳಂಬಕ್ಕೆ ತಕ್ಕ ಪರಿಹಾರವನ್ನು ಕಾನೂನುಬದ್ಧವಾಗಿ ಕೋರಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕೇವಲ ಫ್ಲಾಟ್‌ನ ಕೀ ಕೈಗೆ ಸಿಕ್ಕಾಕ್ಷಣ, ಬಿಲ್ಡರ್ ಮಾಡಿದ ವಿಳಂಬದ ವಿರುದ್ಧ ಗ್ರಾಹಕರಿಗಿರುವ ಹಕ್ಕುಗಳು ಕೊನೆಗೊಳ್ಳುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. "ಗ್ರಾಹಕರು ಯಾವುದೇ ಪ್ರತಿಭಟನೆ ಇಲ್ಲದೆ ಫ್ಲಾಟ್‌ನ ಸ್ವಾಧೀನ ಪಡೆದುಕೊಂಡಿರುವುದರಿಂದ, ಅವರು ಇನ್ನು ಮುಂದೆ ಗ್ರಾಹಕರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಅವರು ಪರಿಹಾರ ಕೋರಲು ಸಾಧ್ಯವಿಲ್ಲ" ಎಂದು 2016ರಲ್ಲಿ ರಾಷ್ಟ್ರೀಯ ಗ್ರಾಹಕರ ವಿವಾದಗಳ ಪರಿಹಾರ ಆಯೋಗ (NCDRC) ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ವಿ. ಮೋಹನಾ ಅವರಿದ್ದ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ. ಫ್ಲಾಟ್ ಸಿಗುವುದು ತಡವಾಗಿದ್ದಕ್ಕೆ ಕೇಳುವ ಪರಿಹಾರದ ಹಕ್ಕು, ಫ್ಲಾಟ್ ಹಸ್ತಾಂತರ ಆಗುವ ಮುನ್ನವೇ ಸೃಷ್ಟಿಯಾಗಿರುತ್ತದೆ. ಹೀಗಾಗಿ ನಂತರದಲ್ಲಿ ಫ್ಲಾಟ್ ಪಡೆದುಕೊಂಡ ಮಾತ್ರಕ್ಕೆ ಪರಿಹಾರ ಕೇಳುವ ಹಕ್ಕು ಇಲ್ಲದಂತಾಗುವುದಿಲ್ಲ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ಈ ಪ್ರಕರಣದಲ್ಲಿ ಹೌಸಿಂಗ್ ಸೊಸೈಟಿಯು, "ನಮ್ಮ ಮತ್ತು ಗ್ರಾಹಕರ ನಡುವಿನ ಒಪ್ಪಂದದಲ್ಲಿ ಮಧ್ಯಸ್ಥಿಕೆ ವಹಿಸುವ ಷರತ್ತಿದೆ. ಹಾಗಾಗಿ ಗ್ರಾಹಕರು ಗ್ರಾಹಕ ನ್ಯಾಯಾಲಯಕ್ಕೆ ಬರುವಂತಿಲ್ಲ" ಎಂದು ವಾದಿಸಿತ್ತು. ಆದರೆ ಈ ವಾದವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಗ್ರಾಹಕ ಸಂರಕ್ಷಣಾ ಕಾಯ್ದೆಯು ಗ್ರಾಹಕರಿಗೆ ಸರಳ ಮತ್ತು ತ್ವರಿತ ನ್ಯಾಯ ಒದಗಿಸುವ ವಿಶೇಷ ಕಾಯ್ದೆಯಾಗಿದೆ ಎಂದು ಹೇಳಿದೆ. ಒಮ್ಮೆ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಾಗಿ ಅದು ಅಂಗೀಕಾರಗೊಂಡರೆ, ಕೇವಲ ಖಾಸಗಿ ಒಪ್ಪಂದದಲ್ಲಿ ಆರ್ಬಿಟ್ರೇಷನ್ ಷರತ್ತಿದೆ ಎಂಬ ಕಾರಣಕ್ಕೆ ಗ್ರಾಹಕರನ್ನು ಅಲ್ಲಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಈ ವಿವಾದವು ಸುಮಾರು 21 ವರ್ಷ ಹಳೆಯ ಪ್ರಕರಣವಾಗಿದೆ. ದೆಹಲಿಯ ದ್ವಾರಕಾದಲ್ಲಿರುವ ಕೋ-ಆಪರೇಟಿವ್ ಗ್ರೂಪ್ ಹೌಸಿಂಗ್ ಸೊಸೈಟಿಯಲ್ಲಿ ಟಿ.ಕೆ.ಎ. ಪದ್ಮನಾಭನ್ ಎಂಬುವರು 2003ರ ಜನವರಿಯಲ್ಲಿ ಸದಸ್ಯರಾಗಿ ಫ್ಲಾಟ್ ಬುಕ್ ಮಾಡಿದ್ದರು. ಆದರೆ ಪೂರ್ಣ ಹಣ ಪಾವತಿಸಿದರೂ ಫ್ಲಾಟ್ ನೀಡಲು ಸೊಸೈಟಿ ಭಾರಿ ವಿಳಂಬ ಮಾಡಿತ್ತು. ಇದರಿಂದ ನೊಂದ ಅವರು 2005ರಲ್ಲಿ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಸುದೀರ್ಘ ಕಾನೂನು ಹೋರಾಟದ ನಂತರ ಫ್ಲಾಟ್ ಸಿಕ್ಕಿತಾದರೂ, ಜಿಲ್ಲಾ ವೇದಿಕೆ ಮತ್ತು NCDRC ಇವರ ಪರಿಹಾರದ ಅರ್ಜಿಯನ್ನು ತಾಂತ್ರಿಕ ಕಾರಣ ನೀಡಿ ರದ್ದುಗೊಳಿಸಿದ್ದವು.
ಈಗ ಸುಪ್ರೀಂ ಕೋರ್ಟ್ ಕೆಳಹಂತದ ಎಲ್ಲಾ ಆದೇಶಗಳನ್ನು ರದ್ದುಗೊಳಿಸಿದ್ದು, ದ್ವಾರಕಾದ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಈ ಪ್ರಕರಣವನ್ನು ಮರುಸ್ಥಾಪಿಸಿದೆ. ಅಲ್ಲದೆ, ಮುಂದಿನ ಒಂದು ವರ್ಷದೊಳಗೆ ಪ್ರಕರಣವನ್ನು ಮೆರಿಟ್ ಆಧಾರದ ಮೇಲೆ ಇತ್ಯರ್ಥಪಡಿಸಬೇಕು ಎಂದು ಆದೇಶಿಸಿದೆ. ಈ ತೀರ್ಪು ದೇಶಾದ್ಯಂತ ಬಿಲ್ಡರ್‌ಗಳ ವಿಳಂಬ ನೀತಿಯಿಂದ ತೊಂದರೆ ಅನುಭವಿಸುತ್ತಿರುವ ಲಕ್ಷಾಂತರ ಮನೆ ಖರೀದಿದಾರರಿಗೆ ದೊಡ್ಡ ಅಸ್ತ್ರ ನೀಡಿದಂತಾಗಿದೆ.