image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಮ ಮಂದಿರ ದೇಣಿಗೆ ಹಗರಣ: ಎಂಟು ಜನರ ಬಂಧನ, ಸಿಎಂ ಯೋಗಿ ಖಡಕ್ ಎಚ್ಚರಿಕೆ

ರಾಮ ಮಂದಿರ ದೇಣಿಗೆ ಹಗರಣ: ಎಂಟು ಜನರ ಬಂಧನ, ಸಿಎಂ ಯೋಗಿ ಖಡಕ್ ಎಚ್ಚರಿಕೆ

ಅಯೋಧ್ಯಾ : ಅಯೋಧ್ಯೆ ಶ್ರೀರಾಮ ಮಂದಿರದ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಕೃಷ್ಣ ಮೋಹನ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಮಾಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ್ ಶಂಕರ್ ಯಾದವ್ ಅಲಿಯಾಸ್ ತಿನ್ನು ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕಳ್ಳತನ, ನಂಬಿಕೆ ದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜೂನ್ 13 ರಂದು ರಚನೆಯಾಗಿದ್ದ ವಿಶೇಷ ತನಿಖಾ ತಂಡ (SIT) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಮಂದಿರದ ದೇಣಿಗೆ ನಿರ್ವಹಣಾ ವ್ಯವಸ್ಥೆ, ನೌಕರರ ಹಿನ್ನೆಲೆ ಪರಿಶೀಲನೆ, ಸಿಸಿಟಿವಿ ಕಣ್ಗಾವಲು ಮತ್ತು ಬ್ಯಾಂಕ್‌ಗೆ ಹಣ ವರ್ಗಾಯಿಸುವ ಪ್ರಕ್ರಿಯೆಗಳಲ್ಲಿ ಗಂಭೀರ ಭದ್ರತಾ ಲೋಪಗಳು ಪತ್ತೆಯಾಗಿವೆ. ಖಾಸಗಿ ಏಜೆನ್ಸಿಯೊಂದರ ಮೂಲಕ ಸ್ಥಳೀಯರ ಶಿಫಾರಸಿನ ಮೇರೆಗೆ ನೇಮಕಗೊಂಡಿದ್ದ ಸಿಬ್ಬಂದಿಯೇ ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಭಕ್ತರು ಅರ್ಪಿಸಿದ ಚಿನ್ನ, ಬೆಳ್ಳಿ ಮತ್ತು ಇತರೆ ಬೆಲೆಬಾಳುವ ವಸ್ತುಗಳ ದಾಖಲೆಗಳನ್ನು ಸಹ ಎಸ್‌ಐಟಿ ಪ್ರಸ್ತುತ ಪರಿಶೀಲಿಸುತ್ತಿದೆ.

ಈ ಹಗರಣದ ಕುರಿತು ದೇವರಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸನಾತನ ಮೌಲ್ಯಗಳು ಮತ್ತು ಸಾರ್ವಜನಿಕರ ಶ್ರದ್ಧೆಯೊಂದಿಗೆ ಆಟವಾಡಲು ಯತ್ನಿಸುವವರ ವಿರುದ್ಧ ತಮ್ಮ ಸರ್ಕಾರ 'ಶೂನ್ಯ ಸಹಿಷ್ಣುತೆ' ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಯೋಧ್ಯೆಯ ಘನತೆಗೆ ಧಕ್ಕೆ ತರುವ ಯಾವುದೇ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ. ಇದೇ ವೇಳೆ ಈ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಎಂ, ಹಿಂದೆ ಕೋರ್ಟ್‌ಗಳಲ್ಲಿ ರಾಮನ ಅಸ್ತಿತ್ವವನ್ನೇ ನಿರಾಕರಿಸಿದವರು ಮತ್ತು ಜೈ ಶ್ರೀರಾಮ್ ಎಂದವರ ಮೇಲೆ ಗುಂಡು ಹಾರಿಸಿದವರು ಈಗ ಭಕ್ತರ ನಂಬಿಕೆಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸಿ ದೇಶವನ್ನು ದುರ್ಬಲಗೊಳಿಸಿತು ಎಂದು ಆರೋಪಿಸಿದ ಅವರು, ಹಿಂದೆ ರಾಮನವಮಿ, ಕೃಷ್ಣ ಜನ್ಮಾಷ್ಟಮಿ, ಕನ್ವರ್ ಯಾತ್ರೆ ಹಾಗೂ ದುರ್ಗಾಪೂಜೆಯಂತಹ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಪಡಿಸಿದವರೇ ಈಗ ಅಯೋಧ್ಯೆಯತ್ತ ಬೆರಳು ತೋರಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

Category
ಕರಾವಳಿ ತರಂಗಿಣಿ