ಚೆನ್ನೈ : ಹಿಂದೂ ಧರ್ಮದ ಹಿಂದುಳಿದ ವರ್ಗಗಳು (BC), ಅತ್ಯಂತ ಹಿಂದುಳಿದ ವರ್ಗಗಳು (MBC) ಹಾಗೂ ಪರಿಶಿಷ್ಟ ಜಾತಿ (SC) ಸೇರಿದಂತೆ ವಿವಿಧ ಸಮುದಾಯಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರು ಹಿಂದುಳಿದ ವರ್ಗಗಳ ಮುಸ್ಲಿಂ (BCM) ವಿಭಾಗದ ಅಡಿಯಲ್ಲಿ ಮೀಸಲಾತಿ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸಬಹುದು ಎಂಬ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ. ಸರ್ಕಾರದ ಈ ಆದೇಶವು ಸಂಪೂರ್ಣವಾಗಿ ಅಸಂವಿಧಾನಿಕ ಎಂದು ತೀರ್ಪು ನೀಡಿರುವ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಪಿ.ಬಿ. ಬಾಲಾಜಿ ಅವರಿದ್ದ ವಿಭಾಗೀಯ ಪೀಠವು, ಮತಾಂತರಗೊಂಡ ವ್ಯಕ್ತಿಯು ಕೇವಲ ಮುಸ್ಲಿಂ ಆಗುತ್ತಾನೆಯೇ ಹೊರತು ರಾಜ್ಯ ಸರ್ಕಾರ ಗುರುತಿಸಿರುವ ಯಾವುದೇ ನಿರ್ದಿಷ್ಟ ಮುಸ್ಲಿಂ ಸಮುದಾಯಕ್ಕೆ ಸೇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಕಳೆದ 2024 ರ ಮಾರ್ಚ್ 9 ರಂದು ಅಂದಿನ ಡಿಎಂಕೆ (DMK) ಸರ್ಕಾರವು ಹೊರಡಿಸಿದ್ದ ಈ ಕಾರ್ಯನಿರ್ವಾಹಕ ಆದೇಶವು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳ ಹಳೆಯ ತೀರ್ಪುಗಳನ್ನು ಮೀರಿ ನಿಲ್ಲಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ತಮಿಳುನಾಡಿನಲ್ಲಿ ಅನ್ಸಾರ್, ಡೆಕ್ಕನಿ ಮುಸ್ಲಿಂ, ಬೇಕೂಲ, ಲಬ್ಬೈ (ರೌಥರ್ ಮತ್ತು ಮರಕಾಯರ್ ಸೇರಿದಂತೆ), ಮಾಪಿಳ್ಳೆ, ಶೇಖ್ ಮತ್ತು ಸೈಯದ್ ಎಂಬ ಏಳು ಸಮುದಾಯಗಳನ್ನು ಮಾತ್ರ ಹಿಂದುಳಿದ ವರ್ಗಗಳ ಮುಸ್ಲಿಂ (BCM) ಎಂದು ಗುರುತಿಸಲಾಗಿದೆ. ಈ ಸಮುದಾಯಗಳು ಹುಟ್ಟಿನಿಂದ ನಿರ್ಧಾರವಾಗುತ್ತವೆಯೇ ಹೊರತು ಮತಾಂತರದಿಂದ ಅಲ್ಲ. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ತಕ್ಷಣ ವ್ಯಕ್ತಿಯೊಬ್ಬ ತಾನಾಗಿಯೇ ಈ ಏಳು ಸಮುದಾಯಗಳ ಪೈಕಿ ಒಂದಕ್ಕೆ ಸೇರ್ಪಡೆಯಾಗುತ್ತಾನೆ ಎಂದು ಭಾವಿಸುವುದು ಮತ್ತು ಅವರಿಗೆ ಆ ಜಾತಿಯ ಪ್ರಮಾಣಪತ್ರ ನೀಡುವುದು ಕಾನೂನುಬದ್ಧವಾಗಿ ಮತ್ತು ಸೈದ್ಧಾಂತಿಕವಾಗಿ ಸಮರ್ಥನೀಯವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯವು ಈ ಸಂದರ್ಭದಲ್ಲಿ 1951 ರ ಮದ್ರಾಸ್ ಹೈಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಉಲ್ಲೇಖಿಸಿದ್ದು, ಸುಮಾರು 75 ವರ್ಷಗಳ ಹಿಂದೆಯೇ ಕೋರ್ಟ್ ಇಸ್ಲಾಂಗೆ ಮತಾಂತರಗೊಂಡವರನ್ನು 'ಕೇವಲ ಮುಸ್ಲಿಂ' (Just a Mussalman) ಎಂದು ಕರೆದಿತ್ತು. ಇಸ್ಲಾಂ ಧರ್ಮವು ಸಮಾಜದಲ್ಲಿ ಸಮಾನತೆಯನ್ನು ಪ್ರತಿಪಾದಿಸುತ್ತದೆ ಮತ್ತು ದೇವರ ಕಣ್ಣಿನಲ್ಲಿ ಎಲ್ಲರೂ ಸಮಾನರು ಎನ್ನುತ್ತದೆ. ಆದಾಗ್ಯೂ ಚಾರಿತ್ರಿಕ ಕಾರಣಗಳಿಂದಾಗಿ ಮುಸ್ಲಿಂ ಸಮಾಜದಲ್ಲೂ ವಿವಿಧ ಸಮುದಾಯಗಳ ವಿಂಗಡಣೆ ಇದೆ. ಹಿಂದೂ ಧರ್ಮದಲ್ಲಿ ಜಾತಿ ಹೇಗೆ ಹುಟ್ಟಿನಿಂದ ನಿರ್ಧಾರವಾಗುತ್ತದೆಯೋ, ಹಾಗೆಯೇ ಮುಸ್ಲಿಂ ಧರ್ಮದಲ್ಲೂ ಒಬ್ಬ ವ್ಯಕ್ತಿ ರೌಥರ್ ಅಥವಾ ಸೈಯದ್ ಆಗುವುದು ಹುಟ್ಟಿನಿಂದಲೇ ಹೊರತು ಮತಾಂತರದಿಂದ ಅಲ್ಲ. ಒಬ್ಬ ವ್ಯಕ್ತಿ ಮತಾಂತರದ ಮೂಲಕ 'ರೌಥರ್ ಮುಸ್ಲಿಂ' ಆಗಬಹುದು ಎಂದು ವಾದಿಸುವುದು ಹಾಸ್ಯಾಸ್ಪದ ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿದೆ.
ಹಿಂದುಸ್ಥಾನದಲ್ಲಿ ಜನಿಸಿ 2015 ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನಗೆ 'ಮುಸ್ಲಿಂ ಲಬ್ಬೈ' ಸಮುದಾಯದ ಪ್ರಮಾಣಪತ್ರ ನೀಡಬೇಕೆಂದು ಕೋರಿ ಸಮೀರ್ ಅಹಮದ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವಾಗ ಈ ತೀರ್ಪು ಹೊರಬಿದ್ದಿದೆ. ಈ ಹಿಂದೆ 2022 ರಲ್ಲಿ ಸ್ಥಳೀಯ ತಹಶೀಲ್ದಾರ್ ಅವರು ಸಮೀರ್ ಅರ್ಜಿ ತಿರಸ್ಕರಿಸಿ, ಆತ ಧರ್ಮಕ್ಕೆ ಮತಾಂತರಗೊಂಡಿದ್ದಾನೆಯೇ ಹೊರತು ಜಾತಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದನ್ನು ಪ್ರಶ್ನಿಸಿ ಸಮೀರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ಬಾಕಿ ಇರುವಾಗಲೇ ತಮಿಳುನಾಡು ಸರ್ಕಾರ 2024 ರಲ್ಲಿ ಮತಾಂತರಿತರಿಗೆ ಮೀಸಲಾತಿ ನೀಡುವ ಆದೇಶ ಹೊರಡಿಸಿತ್ತು. ಈ ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಕೂಲಂಕಷವಾಗಿ ಪರಿಶೀಲಿಸಿದ ಮದ್ರಾಸ್ ಹೈಕೋರ್ಟ್, ಸರ್ಕಾರದ ನಡೆ ಕಾನೂನುಬಾಹಿರ ಎಂದು ಆದೇಶವನ್ನು ರದ್ದುಗೊಳಿಸಿದೆ ಹಾಗೂ ಸಮೀರ್ ಅಹಮದ್ ಅವರ ಅರ್ಜಿಯನ್ನೂ ವಜಾಗೊಳಿಸಿದೆ.