image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪೆರಿಯಾರ್ ಸಾಮಾಜಿಕ ತತ್ವ ಒಪ್ಪುತ್ತೇವೆ, ಆದರೆ ನಾಸ್ತಿಕತೆಯನ್ನಲ್ಲ: ಸಿಎಂ ವಿಜಯ್

ಪೆರಿಯಾರ್ ಸಾಮಾಜಿಕ ತತ್ವ ಒಪ್ಪುತ್ತೇವೆ, ಆದರೆ ನಾಸ್ತಿಕತೆಯನ್ನಲ್ಲ: ಸಿಎಂ ವಿಜಯ್

ಚೆನ್ನೈ : ತಮಿಳುನಾಡು ವಿಧಾನಸಭೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ದ್ರಾವಿಡ ರಾಜಕಾರಣದ ಪಿತಾಮಹ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ವಿಶಾಲವಾದ ಸಾಮಾಜಿಕ ತತ್ವಗಳನ್ನು ತಮ್ಮ ಪಕ್ಷವು ಸಂಪೂರ್ಣವಾಗಿ ಅಳವಡಿಸಿಕೊಂಡಿದೆ. ಆದರೆ, ಅವರ ನಾಸ್ತಿಕತೆ ಮತ್ತು ಧರ್ಮ ನಿರಾಕರಣೆಯ ವಿಚಾರಗಳನ್ನು ತಾವು ಒಪ್ಪುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದು, ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ವಿಜಯ್, "ನಾವು ಪೆರಿಯಾರ್ ಅವರ ಧರ್ಮ ನಿರಾಕರಣೆಯ ನಿಲುವನ್ನು ಒಪ್ಪಿಲ್ಲ. ಆದರೆ ಅವರ ಬೋಧನೆಗಳು ಮತ್ತು ಸಾಮಾಜಿಕ ಸಿದ್ಧಾಂತಗಳನ್ನು ಸ್ವೀಕರಿಸಿದ್ದೇವೆ. ನಾವು ದೇವರನ್ನು ನಂಬುವವರಾಗಿದ್ದು, ಯಾರ ಸಿದ್ಧಾಂತಕ್ಕೂ ವಿರುದ್ಧವಾಗಿಲ್ಲ" ಎಂದು ಮುಕ್ತವಾಗಿ ಘೋಷಿಸಿದರು. ಮುಂದುವರಿದು ಮಾತನಾಡಿದ ಅವರು, ತಮ್ಮ ಸರ್ಕಾರವು ಪೆರಿಯಾರ್, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಾಜಿ ಸಿಎಂ ಕೆ. ಕಾಮರಾಜ್ ಅವರ ಆದರ್ಶಗಳ ಸಮ್ಮಿಶ್ರಣದಿಂದ ಪ್ರೇರಣೆ ಪಡೆದಿದೆ. ಡಾ. ಅಂಬೇಡ್ಕರ್ ಅವರ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದ ತತ್ವಗಳು ಹಾಗೂ ಕಾಮರಾಜ್ ಅವರ ಪ್ರಾಮಾಣಿಕ ಆಡಳಿತದ ಮಾದರಿಯೇ ತಮ್ಮ ಸರ್ಕಾರದ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ವಿವರಿಸಿದರು.

ಇದೇ ವೇಳೆ, ತಮ್ಮನ್ನು ಕೇವಲ ಒಬ್ಬ ನಟನ ನೇತೃತ್ವದ ಸಂಘಟನೆ ಎಂದು ಟೀಕಿಸುವ ವಿರೋಧಿಗಳ ವಿರುದ್ಧ ಸಿಎಂ ವಿಜಯ್ ತೀವ್ರ ವಾಗ್ದಾಳಿ ನಡೆಸಿದರು. ಹೆಚ್ಚಿನ ಜನರು ಮೊದಲು ರಾಜಕೀಯ ಪಕ್ಷವನ್ನು ಆರಂಭಿಸಿ ಆ ಬಳಿಕ ಜನರ ಬಳಿಗೆ ಹೋಗುತ್ತಾರೆ. ಆದರೆ, ನಾವು ಮೊದಲು ಜನರ ಬಳಿಗೆ ಹೋಗಿ, ಅವರ ಸಮಸ್ಯೆಗಳನ್ನು ಅರಿತು ನಂತರ ಪಕ್ಷವನ್ನು ಸ್ಥಾಪಿಸಿದ್ದೇವೆ. ಈ ಹಿಂದೆ ಅಣ್ಣಾದೊರೈ ಹಾಗೂ ಎಂ.ಜಿ. ರಾಮಚಂದ್ರನ್ ಅವರ ಅವಧಿಯಲ್ಲಿ ತಮಿಳುನಾಡಿನಲ್ಲಿ ಯಾವ ರೀತಿ ಸಾಮಾನ್ಯ ಜನರ ಸರ್ಕಾರವಿತ್ತೋ, ಅದೇ ಮಾದರಿಯಲ್ಲಿ ವಿಜಯ್ ನೇತೃತ್ವದ ಈ ಪ್ರಸ್ತುತ ಸರ್ಕಾರವು ಅತ್ಯಂತ ಸಾಮಾನ್ಯ ಜನರ ಸರ್ಕಾರವಾಗಿದೆ ಎಂದು ಅವರು ಭರವಸೆ ನೀಡಿದರು.

Category
ಕರಾವಳಿ ತರಂಗಿಣಿ