ನವದೆಹಲಿ : ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು 2027ರ ಹೊಸ ಹಜ್ ನೀತಿಯನ್ನು ಪ್ರಕಟಿಸಿದ್ದು, ನಿರೀಕ್ಷಿತ ಯಾತ್ರಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಅರ್ಹ ಯಾತ್ರಿಕರು ಹಜ್ ಸಮಿತಿಯ ಅಧಿಕೃತ ಪೋರ್ಟಲ್ (hajcommittee.gov.in) ಅಥವಾ 'ಹಜ್ ಸುವಿಧಾ' ಮೊಬೈಲ್ ಆ್ಯಪ್ ಮೂಲಕ ಜೂನ್ 22ರಿಂದ ಜುಲೈ 20ರ ರಾತ್ರಿ 11.59ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಬಾರಿಯೂ ಹಜ್ ಸಮಿತಿ ಮತ್ತು ಖಾಸಗಿ ವಲಯದ ನಡುವಿನ ಕೋಟಾ ಹಂಚಿಕೆಯನ್ನು 70:30 ಅನುಪಾತದಲ್ಲಿ ಮುಂದುವರಿಸಲಾಗಿದ್ದು, ಸಮಿತಿಗೆ 1,22,518 ಸೀಟು ಹಾಗೂ ಖಾಸಗಿ ವಲಯಕ್ಕೆ 52,507 ಸೀಟುಗಳನ್ನು ನಿಗದಿಪಡಿಸಲಾಗಿದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಈ ಬಾರಿ ಮಿನಾದಲ್ಲಿ ಸೋಫಾ-ಕಮ್-ಬೆಡ್‌ಗಳು, ಮೆಕ್ಕಾ-ಮದೀನಾ ನಡುವೆ ಹೈಸ್ಪೀಡ್ ರೈಲು ಪ್ರಯಾಣ, ಹೋಟೆಲ್ ಮಾದರಿಯ ವಸತಿ ಹಾಗೂ ಜನಪ್ರಿಯ 20 ದಿನಗಳ ಶಾರ್ಟ್ ಹಜ್ ಪ್ಯಾಕೇಜ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜೊತೆಗೆ ಕೋಲ್ಕತ್ತಾವನ್ನು ಹೊಸ ಎಂಬಾರ್ಕೇಶನ್ ಪಾಯಿಂಟ್ ಆಗಿ ಸೇರಿಸಲಾಗಿದೆ.
ಯಾತ್ರಿಕರ ಆನ್-ಗ್ರೌಂಡ್ ನೆರವನ್ನು ಸುಧಾರಿಸಲು ಪ್ರತಿ 135 ಜನರಿಗೆ ಒಬ್ಬರಂತೆ ರಾಜ್ಯ ಹಜ್ ಇನ್ಸ್‌ಪೆಕ್ಟರ್‌ಗಳ ಅನುಪಾತವನ್ನು ಪರಿಷ್ಕರಿಸಲಾಗಿದೆ. ಕಾಯುವಿಕೆ ಪಟ್ಟಿಯ ಸಮಸ್ಯೆ ನಿವಾರಿಸಲು ಕಳೆದ ವರ್ಷದ ವೇಯ್ಟ್‌ಲಿಸ್ಟ್‌ನಲ್ಲಿದ್ದ ಶೇ. 20ರಷ್ಟು ಜನರಿಗೆ ಈ ಬಾರಿ ಆದ್ಯತೆ ನೀಡಲಾಗುತ್ತದೆ. ಸೌದಿ ಮಾರ್ಗಸೂಚಿಯಂತೆ ಕಟ್ಟುನಿಟ್ಟಿನ ವೈದ್ಯಕೀಯ ತಪಾಸಣೆ ಇರಲಿದ್ದು, ದೀರ್ಘಕಾಲದ ಕಾಯಿಲೆ ಇರುವವರಿಗೆ ಪ್ರಯಾಣಕ್ಕೆ ಅನುಮತಿ ಇರುವುದಿಲ್ಲ. ಇಡೀ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ದಾಖಲೆ ಪರಿಶೀಲನೆ, ವಿಮಾನ ಹಂಚಿಕೆ ಮತ್ತು ನೈಜ-ಸಮಯದ ದೂರು ನಿರ್ವಹಣೆಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅಲ್ಲದೆ ಪ್ರಾದೇಶಿಕ ಭಾಷೆಗಳು ಸೇರಿದಂತೆ ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ಎಐ ಸಂವಾದಾತ್ಮಕ ಸಹಾಯವಾಣಿಯನ್ನು ಸಜ್ಜುಗೊಳಿಸಲಾಗಿದೆ.