image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನೀಟ್ ಮರು ಪರೀಕ್ಷೆ ವೇಳೆ ಮತ್ತೊಂದು ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕ: ವಿದ್ಯಾರ್ಥಿಗಳಿಗೆ 30 ಸಾವಿರಕ್ಕೆ ಆಫರ್ ನೀಡಿದ ವಂಚಕರು!

ನೀಟ್ ಮರು ಪರೀಕ್ಷೆ ವೇಳೆ ಮತ್ತೊಂದು ಪ್ರಶ್ನೆ ಪತ್ರಿಕೆ ಸೋರಿಕೆ ಆತಂಕ: ವಿದ್ಯಾರ್ಥಿಗಳಿಗೆ 30 ಸಾವಿರಕ್ಕೆ ಆಫರ್ ನೀಡಿದ ವಂಚಕರು!

ಅಜ್ಮೀರ : ಮೇ 3 ರಂದು ನಡೆದಿದ್ದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ದೇಶದಾದ್ಯಂತ ಮರು ಪರೀಕ್ಷೆ ನಡೆಯುತ್ತಿರುವ ಬೆನ್ನಲ್ಲೇ, ಮತ್ತೊಮ್ಮೆ ಪೇಪರ್ ಲೀಕ್ ಆಗಿರುವ ಶಂಕೆ ವ್ಯಕ್ತವಾಗಿದೆ. ರಾಜಸ್ಥಾನದ ಅಜ್ಮೀರದಲ್ಲಿ ವಿದ್ಯಾರ್ಥಿಯೊಬ್ಬರಿಗೆ ಫೋನ್ ಕರೆ ಮಾಡಿ 30 ಸಾವಿರ ರೂಪಾಯಿಗೆ ನೀಟ್ ಪ್ರಶ್ನೆ ಪತ್ರಿಕೆ ನೀಡುವುದಾಗಿ ಆಮಿಷ ಒಡ್ಡಿದ ಆಘಾತಕಾರಿ ಘಟನೆ ವರದಿಯಾಗಿದೆ. ಅಜ್ಮೀರದ ಡಿಎವಿ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಕೃಷ್ಣಾ ಸಿಂಗ್ ಠಾಕೂರ್ ಈ ಬಗ್ಗೆ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ಶನಿವಾರ ರಾತ್ರಿ ಹಲವು ವಿದ್ಯಾರ್ಥಿಗಳಿಗೆ ಕರೆ ಮಾಡಿದ ವಂಚಕರು, 30 ಸಾವಿರ ರೂಪಾಯಿ ನೀಡಿ ಪ್ರಶ್ನೆ ಪತ್ರಿಕೆ ಪಡೆದುಕೊಳ್ಳಿ ಎಂದು ಹೇಳಿದ್ದಲ್ಲದೆ, ಹಣ ಪಾವತಿಸಲು ವಾಟ್ಸಾಪ್ ಮೂಲಕ ಕ್ಯೂಆರ್ (QR) ಕೋಡ್ ಕಳುಹಿಸಿದ್ದಾರೆ. ಇದೊಂದು ಮೋಸದ ಜಾಲ ಎಂದು ಅರಿತ ವಿದ್ಯಾರ್ಥಿಗಳು ಹಣ ಕಳೆದುಕೊಳ್ಳುವುದರಿಂದ ಪಾರಾಗಿದ್ದಾರೆ. ಆದರೆ, ಒಂದು ವೇಳೆ ಈ ಕರೆ ನಿಜವಾಗಿದ್ದರೆ ಮತ್ತೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದೇ ಅರ್ಥವಲ್ಲವೇ ಎಂದು ವಿದ್ಯಾರ್ಥಿ ಪ್ರತಿನಿಧಿ ಠಾಕೂರ್ ತಮ್ಮ ದೂರಿನಲ್ಲಿ ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಜಂಗೀದ್ ಅವರು, ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದ್ದಾರೆ. ಕರೆ ಬಂದ ಮೊಬೈಲ್ ಸಂಖ್ಯೆ, ವಾಟ್ಸಾಪ್‌ಗೆ ಬಂದ ಕ್ಯೂಆರ್ ಕೋಡ್ ಹಾಗೂ ಅದಕ್ಕೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ಕಲೆಹಾಕಲಾಗುತ್ತಿದ್ದು, ತನಿಖೆಯ ನಂತರವಷ್ಟೇ ಇದರ ಹಿಂದಿನ ಸತ್ಯಾಸತ್ಯತೆ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ. ಪರೀಕ್ಷಾ ಸಮಯದಲ್ಲಿ ಇಂತಹ ನಕಲಿ ಕರೆಗಳು ಮತ್ತು ವಂಚನೆ ಜಾಲಗಳು ಸಕ್ರಿಯವಾಗಿರುವುದರಿಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ಕಾರಣಕ್ಕೂ ಅಪರಿಚಿತರನ್ನು ನಂಬಿ ಹಣ ನೀಡಿ ಮೋಸ ಹೋಗಬಾರದು ಎಂದು ಎಸ್‌ಪಿ ಮನವಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ