image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ದೇಶದಲ್ಲಿ ನೀಟ್-ಯುಜಿ ಮರುಪರೀಕ್ಷೆ ಯಶಸ್ವಿ

ದೇಶದಲ್ಲಿ ನೀಟ್-ಯುಜಿ ಮರುಪರೀಕ್ಷೆ ಯಶಸ್ವಿ

ನವದೆಹಲಿ : ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಬಹುನಿರೀಕ್ಷಿತ ನೀಟ್-ಯುಜಿ ಮರುಪರೀಕ್ಷೆಯು ಕಟ್ಟುನಿಟ್ಟಿನ ಭದ್ರತೆ ಹಾಗೂ ಪಾರದರ್ಶಕತೆಯೊಂದಿಗೆ ಯಶಸ್ವಿಯಾಗಿ ಜರುಗಿದೆ. ಕಳೆದ ಮೇ 3ರಂದು ನಡೆದಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡು, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೂ ಒತ್ತಾಯ ಕೇಳಿಬಂದಿತ್ತು. ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರವು ಪರೀಕ್ಷೆಯನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರುಪರೀಕ್ಷೆ ನಡೆಸುವ ಮಹತ್ವದ ನಿರ್ಧಾರ ಕೈಗೊಂಡಿತ್ತು.

ಈ ಬಾರಿ ದೇಶದ 551 ನಗರಗಳು ಹಾಗೂ ವಿದೇಶದ 14 ನಗರಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:15ರವರೆಗೆ ಪರೀಕ್ಷೆ ನಡೆದಿದ್ದು, ಒಟ್ಟು 22 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂಗವಿಕಲ ಅಭ್ಯರ್ಥಿಗಳಿಗೆ ಸಂಜೆ 6:20ರವರೆಗೆ ಬರೆಯಲು ವಿಶೇಷ ಅವಕಾಶ ಕಲ್ಪಿಸಲಾಗಿತ್ತು. ಇಂಗ್ಲಿಷ್ ಸೇರಿದಂತೆ ಒಟ್ಟು 12 ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಯಿತು. ಪರೀಕ್ಷಾ ಕೇಂದ್ರದೊಳಗೆ ಪಾರದರ್ಶಕ ನೀರಿನ ಬಾಟಲಿ ಹಾಗೂ ಮಧುಮೇಹ ಸಮಸ್ಯೆ ಇರುವ ಅಭ್ಯರ್ಥಿಗಳಿಗೆ ಮಾತ್ರೆಗಳು ಮತ್ತು ಹಣ್ಣುಗಳನ್ನು ಕೊಂಡೊಯ್ಯಲು ಅನುಮತಿ ನೀಡಲಾಗಿತ್ತು.

ನಕಲು ಹಾಗೂ ಅಕ್ರಮಗಳನ್ನು ತಡೆಗಟ್ಟಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಅಭೂತಪೂರ್ವ ತಾಂತ್ರಿಕ ಕಣ್ಗಾವಲು ವ್ಯವಸ್ಥೆ ಮಾಡಿತ್ತು. ಒಟ್ಟು 95,000 ಪರೀಕ್ಷಾ ಕೊಠಡಿಗಳಲ್ಲಿ 1,38,560 ಸಿಸಿಟಿವಿ ಕ್ಯಾಮೆರಾಗಳ ಮೂಲಕ ನೇರ ನಿಗಾ ಇರಿಸಲಾಗಿತ್ತು ಹಾಗೂ 51,311 ಜ್ಯಾಮರ್‌ಗಳನ್ನು ಅಳವಡಿಸಲಾಗಿತ್ತು. ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಪ್ರತಿ ಕೇಂದ್ರದಲ್ಲೂ 40 ರಿಂದ 50 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಬೃಹತ್ ಪ್ರಕ್ರಿಯೆಗೆ ಜಿಲ್ಲಾಡಳಿತ, ಪೊಲೀಸ್, ಅರೆಸೇನಾ ಪಡೆ, ಭಾರತೀಯ ವಾಯುಪಡೆ ಹಾಗೂ ಅಂಚೆ ಇಲಾಖೆಯು ಪೂರ್ಣ ಸಹಯೋಗ ನೀಡಿದ್ದಾಗಿ ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.

Category
ಕರಾವಳಿ ತರಂಗಿಣಿ