image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ವಿದ್ಯಾರ್ಥಿಗಳ ಹಿತಕ್ಕಾಗಿ 45 ನಿಮಿಷ ವಿಮಾನ ನಿಲ್ದಾಣದಲ್ಲೇ ಕಾಯ್ದ ಪ್ರಧಾನಿ ಮೋದಿ

ವಿದ್ಯಾರ್ಥಿಗಳ ಹಿತಕ್ಕಾಗಿ 45 ನಿಮಿಷ ವಿಮಾನ ನಿಲ್ದಾಣದಲ್ಲೇ ಕಾಯ್ದ ಪ್ರಧಾನಿ ಮೋದಿ

ನವದೆಹಲಿ : ರಾಷ್ಟ್ರದ ಪ್ರಧಾನ ಮಂತ್ರಿಗಳ ವಿವಿಐಪಿ ಬೆಂಗಾವಲು ಪಡೆ ರಸ್ತೆಗಿಳಿದರೆ ಸಾಕು, ಭದ್ರತಾ ಕಾರಣಗಳಿಗಾಗಿ ಇಡೀ ರಸ್ತೆಯ ಸಂಚಾರವನ್ನೇ ಸಂಪೂರ್ಣ ಸ್ಥಗಿತಗೊಳಿಸುವುದು ಸಾಮಾನ್ಯ ನಿಯಮ. ಆದರೆ, ಜೂನ್ 21, 2026ರ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ನಿಯಮಗಳಿಗಿಂತ ವಿದ್ಯಾರ್ಥಿಗಳ ಭವಿಷ್ಯ ಮತ್ತು ಅವರ ಹಿತವೇ ಮುಖ್ಯ ಎಂಬುದನ್ನು ತಮ್ಮ ನಡವಳಿಕೆಯ ಮೂಲಕ ಸಾಬೀತುಪಡಿಸಿದ್ದಾರೆ. ದೇಶಾದ್ಯಂತ ನಡೆದ ನೀಟ್-ಯುಜಿ ಮರು ಪರೀಕ್ಷೆಯ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳಿಗೆ ಯಾವುದೇ ಸಂಚಾರ ದಟ್ಟಣೆಯ ಅಡಚಣೆ ಉಂಟಾಗಬಾರದು ಎಂಬ ಕಾರಣಕ್ಕೆ ಪ್ರಧಾನಿಯವರು ದೆಹಲಿ ವಿಮಾನ ನಿಲ್ದಾಣದಲ್ಲೇ 45 ನಿಮಿಷಗಳ ಕಾಲ ಕಾಯ್ದು ಹಲವು ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಂತರಾಷ್ಟ್ರೀಯ ಯೋಗದಿನವನ್ನು ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಾಹ್ನ 1:15 ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನಿಯಮಗಳ ಪ್ರಕಾರ ವಿಮಾನ ನಿಲ್ದಾಣದಿಂದ ಅವರು ನೇರವಾಗಿ ತಮ್ಮ ಅಧಿಕೃತ ನಿವಾಸಕ್ಕೆ ತೆರಳಬೇಕಿತ್ತು. ಆದರೆ, ಇದೇ ದಿನ ಮಧ್ಯಾಹ್ನ ಸರಿಯಾಗಿ 2 ಗಂಟೆಗೆ ದೇಶಾದ್ಯಂತ ನೀಟ್ ಯುಜಿ ಮರುಪರೀಕ್ಷೆಗಳು ಆರಂಭವಾಗಲಿದ್ದವು. ಈ ಸಮಯದಲ್ಲಿ ದೆಹಲಿಯ ಅನೇಕ ಭಾಗಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ಧಾವಿಸುತ್ತಿದ್ದರು. ಏತನ್ಮಧ್ಯೆ, ಈ ನಿರ್ಣಾಯಕ ಸಮಯದಲ್ಲಿ ಪ್ರಧಾನಿಯವರ ಬೆಂಗಾವಲು ಪಡೆ ರಸ್ತೆಗಿಳಿದರೆ ಭದ್ರತೆಯ ಕಾರಣಗಳಿಗಾಗಿ ಮಾರ್ಗಮಧ್ಯೆ ಹಲವು ಕಡೆಗಳಲ್ಲಿ ಸಾಮಾನ್ಯ ವಾಹನ ಸಂಚಾರವನ್ನು ತಡೆಹಿಡಿಯಬೇಕಾಗುತ್ತದೆ. ಇದರಿಂದ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಉಂಟಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ವಿಳಂಬವಾಗಬಹುದು ಎಂಬುದನ್ನು ಅರಿತ ಪ್ರಧಾನಿಯವರು, ತಾವು ವಿಮಾನ ನಿಲ್ದಾಣದಲ್ಲಿಯೇ ಉಳಿಯಲು ತೀರ್ಮಾನಿಸಿದರು.

ಅದರಂತೆ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭದ್ರತಾ ಸಿಬ್ಬಂದಿಗಳಿಗೆ ರೋಡ್​ ಕ್ಲೋಸ್​ ಮಾಡದಂತೆ ಸೂಚಿಸಿದರು. ಇದರೊಂದಿಗೆ, ವಿಮಾನ ನಿಲ್ದಾಣದ ವಿಐಪಿ ಲೌಂಜ್​ನಲ್ಲೇ ಸುಮಾರು 45 ನಿಮಿಷಗಳ ಕಾಲ ಕಾಯ್ದರು. ಈ ಮೂಲಕ ಜೀರೋ ಟ್ರಾಫಿಕ್​ ಎಂದು ಮುಗಿಬೀಳುವ ರಾಜಕಾರಣಿಗಳಿಗೆ ಮಾದರಿಯಾದರು. ಕಳೆದ ತಿಂಗಳು ನಡೆದ ನೀಟ್​ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್​ ಆದ ಕಾರಣ, ಅದನ್ನು ರದ್ದು ಮಾಡಿದ ಕೇಂದ್ರ ಸರ್ಕಾರ, ಇಂದು ಭಾರತದಲ್ಲಿ 5,440 ಕೇಂದ್ರಗಳಲ್ಲಿ ಮತ್ತು ವಿದೇಶಗಳಲ್ಲಿ 14 ಕೇಂದ್ರಗಳಲ್ಲಿ ನೀಟ್-ಯುಜಿ ಮರು ಪರೀಕ್ಷೆಯನ್ನು ದೇಶಾದ್ಯಂತ ಬಿಗಿ ಭದ್ರತೆಯಲ್ಲಿ ನಡೆಸಿದೆ. ಇದರೊಂದಿಗೆ, ಸುಮಾರು 2.2 ಮಿಲಿಯನ್‌ಗಿಂತಲೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎನ್‌ಟಿಎ ನೀಟ್-ಯುಜಿಗಾಗಿ ವ್ಯಾಪಕವಾದ ಭದ್ರತಾ ಜಾಲವನ್ನು ಸ್ಥಾಪಿಸಿದೆ.

Category
ಕರಾವಳಿ ತರಂಗಿಣಿ