ಅಜ್ಮೀರ್ : ರಾಜಸ್ಥಾನದ ಅಜ್ಮೀರ್‌ನಲ್ಲಿ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರಿಗೆ ಬುರ್ಖಾ ಧರಿಸಿದ್ದ ಕಾರಣಕ್ಕಾಗಿ ಪರೀಕ್ಷಾ ಕೇಂದ್ರದ ಸಿಬ್ಬಂದಿ ಆರಂಭದಲ್ಲಿ ಪ್ರವೇಶ ನಿರಾಕರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 18 ವರ್ಷದ ಕುಲ್ಸುಮ್ ಬಾನೋ ಎಂಬ ವಿದ್ಯಾರ್ಥಿನಿ ಬುರ್ಖಾ ಮತ್ತು ದುಪಟ್ಟಾ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾಗ ಅಲ್ಲಿನ ಭದ್ರತಾ ಸಿಬ್ಬಂದಿ ಹಾಗೂ ತಪಾಸಣಾ ಮಂಡಳಿಯವರು ಆಕೆಯನ್ನು ತಡೆದಿದ್ದಾರೆ. ಇದರಿಂದ ತೀವ್ರ ಮನನೊಂದ ವಿದ್ಯಾರ್ಥಿನಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಧಾರ್ಮಿಕ ಉಡುಪುಗಳನ್ನು ಧರಿಸಲು ಅಧಿಕೃತವಾಗಿ ಅನುಮತಿ ನೀಡಿದ್ದರೂ ತನಗೆ ಅವಕಾಶ ನಿರಾಕರಿಸಲಾಗಿದೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಮೇ 3ರಂದು ನಡೆದಿದ್ದ ಪರೀಕ್ಷೆಯಲ್ಲೂ ತಾನು ಇದೇ ರೀತಿ ಬುರ್ಖಾ ಧರಿಸಿ ಭಾಗವಹಿಸಿದ್ದಾಗ ಯಾರೂ ತಡೆಯಲಿಲ್ಲ, ಆದರೆ ಈಗ ಹಠಾತ್ ಆಗಿ ನಿರಾಕರಿಸಿರುವುದು ತನಗೆ ತೀವ್ರ ದುಃಖ ತಂದಿದೆ ಎಂದು ಕುಲ್ಸುಮ್ ತಿಳಿಸಿದ್ದಾರೆ.
ಮುಸ್ಲಿಂ ಉಡುಪಿನಿಂದಲೇ ತಮ್ಮ ಗುರುತು ಎಂದು ಪ್ರತಿಪಾದಿಸಿರುವ ಕುಲ್ಸುಮ್ ಬಾನೋ, ಈ ಸಾಂಪ್ರದಾಯಿಕ ಉಡುಪನ್ನು ತ್ಯಜಿಸಿ ಪರೀಕ್ಷೆ ಬರೆಯುವುದಕ್ಕಿಂತ ಪರೀಕ್ಷೆಯನ್ನೇ ಕೈಬಿಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಈ ಉಡುಪಿನಲ್ಲಿ ತನಗೆ ಪರೀಕ್ಷೆ ಬರೆಯಲು ಬಿಡದಿದ್ದರೆ ತಾನು ಪರೀಕ್ಷೆಯನ್ನೇ ಬರೆಯುವುದಿಲ್ಲ ಎಂದು ಹೇಳಿರುವ ಕುಲ್ಸುಮ್, 18 ವರ್ಷದ ಹುಡುಗಿಯ ಜೊತೆ ಈ ರೀತಿ ನಡೆದುಕೊಳ್ಳುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಮತ್ತು ನನಗೆ ಪರೀಕ್ಷೆಗಿಂತ ಬುರ್ಖಾವೇ ಹೆಚ್ಚು ಮುಖ್ಯ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಪರೀಕ್ಷಾ ಕೇಂದ್ರದ ಮುಂಭಾಗದಲ್ಲಿ ಈ ದೊಡ್ಡ ವಿವಾದ ಸೃಷ್ಟಿಯಾದ ನಂತರ ಎಚ್ಚೆತ್ತ ಅಧಿಕಾರಿಗಳು ಅಂತಿಮವಾಗಿ ಆ ವಿದ್ಯಾರ್ಥಿನಿಗೆ ಬುರ್ಖಾ ಧರಿಸಿಯೇ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದಾರೆ.
ವಿದ್ಯಾರ್ಥಿನಿಯ ತಂದೆ ಮೊಹಮ್ಮದ್ ಅಲೀಮ್ ಅವರು ಈ ಬಗ್ಗೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಬುರ್ಖಾ ಧರಿಸಲು ಅನುಮತಿ ನೀಡಿದೆ ಮತ್ತು ನಿಯಮ 18ರ ಪ್ರಕಾರ ಧಾರ್ಮಿಕ ಉಡುಪುಗಳನ್ನು ಧರಿಸಿ ಪರೀಕ್ಷೆಗೆ ಹಾಜರಾಗಬಹುದು, ಹೀಗಾಗಿ ನನ್ನ ಮಗಳು ಬುರ್ಖಾ ಇಲ್ಲದೆ ಪರೀಕ್ಷೆ ಬರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಕೆ ಕಳೆದ ಮೂರು ವರ್ಷಗಳಿಂದ ಈ ಪರೀಕ್ಷೆಗಾಗಿ ಕಠಿಣ ಸಿದ್ಧತೆ ನಡೆಸುತ್ತಿದ್ದು, ಮೇ 3ರಂದು ನಡೆದಿದ್ದ ಪರೀಕ್ಷೆಯಲ್ಲೂ ಬುರ್ಖಾ ಧರಿಸಿಯೇ ಪರೀಕ್ಷೆ ಬರೆದಿದ್ದಳು ಎಂದು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಪರೀಕ್ಷಾ ಕೇಂದ್ರದಲ್ಲಿ ಮಹಿಳಾ ಸಿಬ್ಬಂದಿಯನ್ನು ಕರೆಸಿ, ಪ್ರತ್ಯೇಕ ಪರದೆಯ ಮರೆಯಲ್ಲಿ ಆಕೆಯನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿ ಬುರ್ಖಾ ತೆಗೆಸಿ ಪರಿಶೀಲಿಸುವಂತೆ ತಾವು ವಿನಂತಿಸಿಕೊಂಡರೂ ಅಲ್ಲಿನ ಸಿಬ್ಬಂದಿ ಆರಂಭದಲ್ಲಿ ಅದಕ್ಕೆ ನಿರಾಕರಿಸಿದರು ಎಂದು ಅಲೀಮ್ ಆರೋಪಿಸಿದ್ದಾರೆ.
ನೀಟ್ (NEET) ಪರೀಕ್ಷೆಯಲ್ಲಿ ಧಾರ್ಮಿಕ ಉಡುಪುಗಳ ಕುರಿತಾದ ವಿವಾದಗಳು ಹೊಸದೇನಲ್ಲ ಎಂಬುದು ಇಲ್ಲಿ ಗಮನಾರ್ಹ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಅಧಿಕೃತ ಮಾರ್ಗಸೂಚಿಗಳ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಸಂಪ್ರದಾಯಗಳಿಗೆ ಅನುಗುಣವಾಗಿ ನಿರ್ದಿಷ್ಟ ಉಡುಪುಗಳನ್ನು (ಬುರ್ಖಾ, ಹಿಜಾಬ್, ಕಿರ್ಪಾನ್ ಅಥವಾ ಪಾಗ್ರಿಯಂತಹ) ಧರಿಸಿ ಪರೀಕ್ಷೆಗೆ ಹಾಜರಾಗಲು ಸಂಪೂರ್ಣ ಅವಕಾಶವಿದೆ. ಆದರೆ, ಇಂತಹ ಸಾಂಪ್ರದಾಯಿಕ ಉಡುಪು ಧರಿಸುವ ವಿದ್ಯಾರ್ಥಿಗಳನ್ನು ಯಾವುದೇ ಅಕ್ರಮ ನಡೆಯದಂತೆ ಸಂಪೂರ್ಣವಾಗಿ ತಪಾಸಣೆ ನಡೆಸಲು ಅನುಕೂಲವಾಗುವಂತೆ, ಅವರು ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಸುಮಾರು ಒಂದರಿಂದ ಒಂದೂವರೆ ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕಾಗುತ್ತದೆ. ಸದ್ಯದ ವಿವಾದವು ಪರೀಕ್ಷಾ ಕೇಂದ್ರದಲ್ಲಿದ್ದ ಸ್ಥಳೀಯ ಸಿಬ್ಬಂದಿ ಮತ್ತು ನಿಯಮಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಉಂಟಾಗಿರುವಂತೆ ತೋರುತ್ತದೆ ಎಂದು ವಿಶ್ಲೇಷಿಸಲಾಗಿದೆ.