ಮಹಾರಾಷ್ಟ್ರ : ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕಾಂಗ್ರೆಸ್ ಮಾಜಿ ನಾಯಕ ಪವನ್‌ರಾಜೆ ನಿಂಬಾಳ್ಕರ್ ಮತ್ತು ಅವರ ಚಾಲಕ ಸಮದ್ ಕಾಜಿ ಜೋಡಿ ಕೊಲೆ ಪ್ರಕರಣದ ಎಲ್ಲಾ ಒಂಬತ್ತು ಮಂದಿ ಆರೋಪಿಗಳನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿದೆ. ಇದರೊಂದಿಗೆ ಸುಮಾರು ಎರಡು ದಶಕಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.
ಹತ್ಯೆಯ ಮುಖ್ಯ ಸಂಚುಕೋರ ಎಂದು ಸಿಬಿಐ ಆರೋಪಿಸಿದ್ದ ಎನ್‌ಸಿಪಿ ಮಾಜಿ ನಾಯಕ ಪದ್ಮಸಿಂಹ ಪಾಟೀಲ್ ಖುಲಾಸೆಗೊಂಡವರಲ್ಲಿ ಪ್ರಮುಖರಾಗಿದ್ದಾರೆ. ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಉಭಯ ನಾಯಕರ ಬೆಂಬಲಿಗರು ಮತ್ತು ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪವನ್‌ರಾಜೆ ನಿಂಬಾಳ್ಕರ್ ಅವರ ಪುತ್ರ ಹಾಗೂ ಶಿವಸೇನಾ (ಯುಬಿಟಿ) ಬಂಡಾಯ ಸಂಸದ ಓಂರಾಜೆ ನಿಂಬಾಳ್ಕರ್ ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರೆ, ಇತ್ತ ಪ್ರಮುಖ ಆರೋಪಿಯಾಗಿದ್ದ ಪದ್ಮಸಿಂಹ ಪಾಟೀಲ್ ಕೂಡ ಕೋರ್ಟ್‌ಗೆ ಹಾಜರಾಗಿದ್ದರು.
2006ರ ಜೂನ್ 3ರಂದು ಪವನ್‌ರಾಜೆ ನಿಂಬಾಳ್ಕರ್ ಮತ್ತು ಚಾಲಕ ಸಮದ್ ಕಾಜಿ ಮುಂಬೈನಿಂದ ಒಸ್ಮಾನಾಬಾದ್ (ಈಗಿನ ಧಾರಾಶಿವ್) ಗೆ ಪ್ರಯಾಣಿಸುತ್ತಿದ್ದಾಗ, ನವಿ ಮುಂಬೈನ ಕಲಂಬೋಲಿ ಬಳಿ ದುಷ್ಕರ್ಮಿಗಳು ಅವರ ವಾಹನವನ್ನು ತಡೆದು ಗುಂಡಿನ ದಾಳಿ ನಡೆಸಿದ್ದರು. ಈ ಭೀಕರ ದಾಳಿಯಲ್ಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೊಲೆಯಾಗುವ ಸಮಯದಲ್ಲಿ ನಿಂಬಾಳ್ಕರ್ ಅವರು ಹಾಲಿ ಶಾಸಕರಾಗಿದ್ದರು. ರಾಜಕೀಯ ಮತ್ತು ವಾಣಿಜ್ಯ ವೈಷಮ್ಯದ ಹಿನ್ನೆಲೆಯಲ್ಲಿ ಅವರನ್ನು ಮಟ್ಟಹಾಕಲು ಸುಮಾರು 30 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು ಎಂದು ಸಿಬಿಐ ತನಿಖೆ ವೇಳೆ ಆರೋಪಿಸಲಾಗಿತ್ತು. ಮಾಜಿ ಸಂಸದ ಪದ್ಮಸಿಂಹ ಪಾಟೀಲ್ ಅವರೊಂದಿಗೆ ಒಬ್ಬ ಉದ್ಯಮಿ, ನಿವೃತ್ತ ಅಬಕಾರಿ ಅಧಿಕಾರಿ ಹಾಗೂ ಶೂಟರ್‌ಗಳನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಆದರೆ, ಪಾಟೀಲ್ ಆರಂಭದಿಂದಲೂ ಈ ಆರೋಪಗಳನ್ನು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದ್ದರು.
20 ವರ್ಷ ಹಳೆಯದಾದ ತಂದೆಯ ಕೊಲೆ ಪ್ರಕರಣದಲ್ಲಿ ತಮಗೆ ಪೂರಕವಾದ ತೀರ್ಪು ಬರುವ ಭರವಸೆ ಸಿಕ್ಕಿದ್ದಕ್ಕೇ ಓಮ್ರಾಜೆ ಪಕ್ಷಾಂತರಕ್ಕೆ ಮುಂದಾಗಿದ್ದಾರೆ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಇತ್ತೀಚೆಗೆ ಹೇಳಿಕೆ ನೀಡುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದರು. ಈ ಕೊಲೆಯನ್ನು ಆರಂಭದಲ್ಲಿ ನವಿ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ಪೊಲೀಸರ ತನಿಖೆಯ ಪ್ರಗತಿಯ ಬಗ್ಗೆ ನಿಂಬಾಳ್ಕರ್ ಕುಟುಂಬಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದಂತೆ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸಲಾಯಿತು. ಇದಾದ ಬಳಿಕ 2009ರಲ್ಲಿ ಪದ್ಮಸಿಂಹ ಪಾಟೀಲ್ ಅವರನ್ನು ಬಂಧಿಸಲಾಯಿತಾದರೂ, ಅದೇ ವರ್ಷ ಅವರಿಗೆ ಜಾಮೀನು ಸಿಕ್ಕಿತ್ತು. ಜುಲೈ 2011 ರಲ್ಲಿ ಈ ಪ್ರಕರಣದ ನ್ಯಾಯಾಲಯದ ವಿಚಾರಣೆ ಅಧಿಕೃತವಾಗಿ ಪ್ರಾರಂಭವಾಗಿ, ಒಂದು ದಶಕಕ್ಕೂ ಹೆಚ್ಚು ಕಾಲ ಮುಂದುವರೆಯಿತು. ಈ ಸುದೀರ್ಘ ವಿಚಾರಣೆಯ ಅವಧಿಯಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಒಟ್ಟು 128 ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೂ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಕೋರ್ಟ್ ಎಲ್ಲರನ್ನೂ ಮುಕ್ತಗೊಳಿಸಿದೆ. ಇದು ಮಹಾರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ದೀರ್ಘಾವಧಿ ನಡೆದ ರಾಜಕೀಯ ಕೊಲೆ ಪ್ರಕರಣದ ವಿಚಾರಣೆಯಾಗಿದೆ.