image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಒಡಿಶಾದಲ್ಲಿ 15 ಮಿಲಿಯನ್ ವರ್ಷಗಳ ಹಿಂದಿನ ಶಾರ್ಕ್ ಹಲ್ಲು, ಸಮುದ್ರ ಪ್ರಾಣಿಗಳ ಪಳೆಯುಳಿಕೆ ಪತ್ತೆ!

ಒಡಿಶಾದಲ್ಲಿ 15 ಮಿಲಿಯನ್ ವರ್ಷಗಳ ಹಿಂದಿನ ಶಾರ್ಕ್ ಹಲ್ಲು, ಸಮುದ್ರ ಪ್ರಾಣಿಗಳ ಪಳೆಯುಳಿಕೆ ಪತ್ತೆ!

ಒಡಿಶಾ : ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಸುಮಾರು 15 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಅಪರೂಪದ ಪಳೆಯುಳಿಕೆಗಳು ಪತ್ತೆಯಾಗಿದ್ದು, ಇವು ಮಯೋಸೀನ್ ಯುಗಕ್ಕೆ ಸೇರಿದವಾಗಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಜಿಲ್ಲೆಯ ಮಹುಲಿಯಾ ಗ್ರಾಮದ ಬಳಿ ಹರಿಯುವ 'ಅಸುರ್ ಹಾದ್' ನದಿಪಾತ್ರದಲ್ಲಿ ಈ ಜೈವಿಕ ಅವಶೇಷಗಳು ಪತ್ತೆಯಾಗಿವೆ. ನದಿಯಲ್ಲಿ ಅಪಾರ ಪ್ರಮಾಣದ ಮೂಳೆಯಂತಹ ನಿಗೂಢ ವಸ್ತುಗಳು ಬಿದ್ದಿರುವುದನ್ನು ಕಂಡು, ಅವುಗಳ ಮೂಲ ತಿಳಿಯದ ಸ್ಥಳೀಯರು ಈ ಜಾಗವನ್ನು 'ಅಸುರ ಹಾದ್' (ಅಸುರನ ಮೂಳೆಗಳು) ಎಂದು ಕರೆಯುತ್ತಿದ್ದರು. ಆದರೆ ಇತ್ತೀಚೆಗೆ ಉತ್ತರ ಒಡಿಶಾ ವಿಶ್ವವಿದ್ಯಾಲಯದ ಪಿಜಿ ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದೇಬ್ರಬ್ರತ್ ನಂದಿ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಅಧ್ಯಯನ ನಡೆಸಿದಾಗ, ಇವು ಕೋಟ್ಯಂತರ ವರ್ಷಗಳ ಹಿಂದಿನ ಪಳೆಯುಳಿಕೆಗಳು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

​ಐದು ವರ್ಷಗಳ ಹಿಂದೆಯೇ ಡಾ. ನಂದಿ ಅವರು ಈ ಜಾಗದಲ್ಲಿ ಪಳೆಯುಳಿಕೆಗಳಿರುವುದನ್ನು ಗುರುತಿಸಿದ್ದರು. ಈಗ ಅದೇ ಸ್ಥಳದಲ್ಲಿ ಮತ್ತಷ್ಟು ಆಳವಾದ ಸಂಶೋಧನೆ ನಡೆಸಿದಾಗ ಸೂಕ್ಷ್ಮ ಪಳೆಯುಳಿಕೆಗಳ ಜೊತೆಗೆ ಪುರಾತನ ಶಾರ್ಕ್ ಮೀನಿನ ಹಲ್ಲುಗಳು ಹಾಗೂ ಅದರ ಕವಚಗಳು ಸಿಕ್ಕಿವೆ. ಪ್ರಸ್ತುತ ಬರಿಪಾದದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಸಮುದ್ರವು, ಪ್ರಾಗೈತಿಹಾಸಿಕ ಕಾಲದಲ್ಲಿ ಈ ಪ್ರದೇಶದವರೆಗೂ ವಿಸ್ತರಿಸಿ ಆಳ ಸಮುದ್ರದಲ್ಲಿ ಮುಳುಗಿತ್ತು ಎಂಬುದಕ್ಕೆ ಈ ಸಮುದ್ರ ಪ್ರಾಣಿಗಳ ಪಳೆಯುಳಿಕೆಗಳೇ ಸಾಕ್ಷಿಯಾಗಿವೆ. ಸಮುದ್ರದ ಪ್ರವಾಹ ಹಾಗೂ ಬದಲಾವಣೆಗಳಿಂದಾಗಿ ಇವು ಇಲ್ಲಿ ಶೇಖರಣೆಯಾಗಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

​ಈ ಪಳೆಯುಳಿಕೆ ಹಾಸಿಗೆಯು ಕುಲಿಯಾನಾ ಬ್ಲಾಕ್‌ನ ಡೇರಾದಿಂದ ಹಿಡಿದು ಬಡಸಾಹಿ ಬ್ಲಾಕ್‌ನ ಪ್ರತಾಪ್ಪುರದವರೆಗೆ ವಿಸ್ತರಿಸಿದ್ದು, ಒಡಿಶಾದಲ್ಲೇ ಮಯೋಸೀನ್ ಯುಗದ ಅವಶೇಷಗಳು ಸಿಕ್ಕಿರುವ ಏಕೈಕ ತಾಣವಾಗಿದೆ. ಈ ಅಪರೂಪದ ಪಳೆಯುಳಿಕೆಗಳ ಕುರಿತು ಹೆಚ್ಚಿನ ಪ್ಯಾಲಿಯಂಟಾಲಜಿಕಲ್ ಸಂಸ್ಥೆಗಳೊಂದಿಗೆ ಸಂವಹನ ನಡೆಸಲಾಗುತ್ತಿದ್ದು, ಸಂಪೂರ್ಣ ಗುರುತಿನ ಪ್ರಕ್ರಿಯೆ ಮುಗಿದ ಬಳಿಕ ಮಯೂರ್ಭಂಜ್ ಜಿಲ್ಲೆಯನ್ನು ಅಧಿಕೃತ 'ಭೂವೈಜ್ಞಾನಿಕ ಪರಂಪರೆಯ ತಾಣ'ವನ್ನಾಗಿ ಘೋಷಿಸುವ ಸಾಧ್ಯತೆ ಇದೆ. ಈ ಪ್ರದೇಶವನ್ನು ಅತ್ಯುತ್ತಮ ಭೂ-ಐತಿಹಾಸಿಕ ಅಥವಾ ಭೂ-ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಮತ್ತು ಈ ಪಳೆಯುಳಿಕೆಗಳನ್ನು ಸಂರಕ್ಷಿಸಲು ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಾ. ದೇಬ್ರಬ್ರತ್ ನಂದಿ ಮನವಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ