ಸ್ವಿಟ್ಜರ್ಲೆಂಡ್ : ಸ್ವಿಟ್ಜರ್ಲೆಂಡ್‌ನ ಕೇಂದ್ರೀಯ ಬ್ಯಾಂಕ್ (ಎಸ್‌ಎನ್‌ಬಿ) ಬಿಡುಗಡೆ ಮಾಡಿರುವ ವಾರ್ಷಿಕ ಅಂಕಿ-ಅಂಶಗಳ ಪ್ರಕಾರ, 2025 ರಲ್ಲಿ ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಜಮೆ ಮಾಡುತ್ತಿದ್ದ ಒಟ್ಟು ಹಣದ ಮೊತ್ತದಲ್ಲಿ ಶೇಕಡಾ 8 ಕ್ಕಿಂತ ಹೆಚ್ಚು ಇಳಿಕೆ ಕಂಡುಬಂದಿದೆ. ಇದರಿಂದಾಗಿ ಒಟ್ಟು ನಿಧಿಯ ಮೌಲ್ಯ ಪ್ರಸ್ತುತ 3.25 ಬಿಲಿಯನ್ ಸ್ವಿಸ್ ಫ್ರಾಂಕ್ (ಭಾರತೀಯ ರೂಪಾಯಿಯಲ್ಲಿ ಸುಮಾರು 36,793 ಕೋಟಿ ರೂ.) ಗೆ ತಲುಪಿದೆ. ಆದರೆ, ಈ ಒಟ್ಟಾರೆ ಜಮೆ ಮೊತ್ತವು ಕುಸಿದಿದ್ದರೂ ಸಹ, ವೈಯಕ್ತಿಕ ಮತ್ತು ಸಾಂಸ್ಥಿಕ ಗ್ರಾಹಕರ ಖಾತೆಗಳಲ್ಲಿನ ಠೇವಣಿ ಮೊತ್ತವು ಕಳೆದ ವರ್ಷ ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆ ಕಂಡು, 524 ಮಿಲಿಯನ್ ಸ್ವಿಸ್ ಫ್ರಾಂಕ್ (ಸುಮಾರು 6 ಸಾವಿರ ಕೋಟಿ ರೂ.) ಗೆ ತಲುಪಿರುವುದು ವಿಶೇಷವಾಗಿದೆ.
ಇದಕ್ಕೂ ಮುನ್ನ, ಅಂದರೆ 2024 ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರ ಒಟ್ಟು ನಿಧಿಯು ಮೂರು ಪಟ್ಟು ಹೆಚ್ಚಾಗಿ 3.5 ಬಿಲಿಯನ್ ಫ್ರಾಂಕ್ಗೆ ತಲುಪಿತ್ತು. ಇದು 2021 ರ ನಂತರದ ಗರಿಷ್ಠ ಮೊತ್ತವಾಗಿ ದಾಖಲಾಗಿತ್ತು. ಆದರೆ 2025ರ ಸಾಲಿನಲ್ಲಿ ಇದು ತೀವ್ರ ಇಳಿಕೆ ಕಂಡಿದೆ. ಸ್ವಿಸ್ ನ್ಯಾಷನಲ್ ಬ್ಯಾಂಕ್‌ಗೆ ಅಲ್ಲಿನ ಇತರೆ ಬ್ಯಾಂಕುಗಳು ನೀಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಭಾರತೀಯ ಗ್ರಾಹಕರಿಗೆ ನೀಡಬೇಕಾದ ಒಟ್ಟು 3,250.5 ಮಿಲಿಯನ್ ಫ್ರಾಂಕ್ ಮೊತ್ತದಲ್ಲಿ 524 ಮಿಲಿಯನ್ ಸಿಹೆಚ್‌ಎಫ್ ಗ್ರಾಹಕರ ಠೇವಣಿಗಳು, 2.6 ಬಿಲಿಯನ್ ಸಿಹೆಚ್‌ಎಫ್ ಇತರೆ ಬ್ಯಾಂಕುಗಳ ಮೂಲಕ ಹೊಂದಿರುವ ಹಣ, 18.6 ಮಿಲಿಯನ್ ಸಿಹೆಚ್‌ಎಫ್ ಟ್ರಸ್ಟ್‌ಗಳ ಮೂಲಕ ಹೊಂದಿರುವ ಹಣ ಹಾಗೂ ಬಾಂಡ್‌ಗಳು ಮತ್ತು ಸೆಕ್ಯೂರಿಟಿಗಳ ರೂಪದಲ್ಲಿರುವ 105.7 ಮಿಲಿಯನ್ ಸಿಹೆಚ್‌ಎಫ್ ಸೇರಿವೆ.
ಅಧಿಕೃತ ಮಾಹಿತಿಯ ಪ್ರಕಾರ ಈ ಎಲ್ಲ ನಿಧಿಯನ್ನು ವಿವಾದಿತ 'ಕಪ್ಪು ಹಣ' ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, ಈ ಅಂಕಿ-ಅಂಶಗಳು ಭಾರತೀಯರು ಅಥವಾ ಅನಿವಾಸಿ ಭಾರತೀಯರು (NRI) ಮೂರನೇ ದೇಶದ ಹೆಸರಿನಲ್ಲಿ ಇಟ್ಟಿರಬಹುದಾದ ಹಣವನ್ನೂ ಒಳಗೊಂಡಿಲ್ಲ. ತೆರಿಗೆ ವಂಚನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಸ್ವಿಸ್ ಅಧಿಕಾರಿಗಳು ಸಕ್ರಿಯ ಬೆಂಬಲ ನೀಡುತ್ತಿದ್ದು, 2018 ರಿಂದ ಉಭಯ ದೇಶಗಳ ನಡುವೆ ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ ಜಾರಿಯಲ್ಲಿದೆ. ಇನ್ನು ಸ್ವಿಸ್ ಬ್ಯಾಂಕುಗಳಲ್ಲಿ ವಿದೇಶಿ ಗ್ರಾಹಕರು ಇಟ್ಟಿರುವ ಒಟ್ಟು ಹಣದ ಪೈಕಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಮತ್ತು ಫ್ರಾನ್ಸ್ ನಂತರದ ಸ್ಥಾನಗಳಲ್ಲಿವೆ. ಜಾಗತಿಕ ಮಟ್ಟದ ಈ ಪಟ್ಟಿಯಲ್ಲಿ ಭಾರತವು 2024 ರಲ್ಲಿದ್ದ 48 ನೇ ಸ್ಥಾನದಿಂದ ಪ್ರಸ್ತುತ 46ನೇ ಸ್ಥಾನಕ್ಕೆ ತಲುಪಿದೆ.