ಬಿಹಾರ : ಬಿಹಾರದ ರಾಜಧಾನಿ 'ಪಾಟ್ನಾ' ನಗರದ ಹೆಸರನ್ನು ಬದಲಾಯಿಸಿ, ಮಗಧ ಸಾಮ್ರಾಜ್ಯದ ಕಾಲದ ಐತಿಹಾಸಿಕ ಹೆಸರಾದ 'ಪಾಟಲಿಪುತ್ರ' ಎಂದು ಮರುನಾಮಕರಣ ಮಾಡುವುದಾಗಿ ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಪ್ರಕಟಿಸಿದ್ದಾರೆ. ಪಾಟ್ನಾದ ನದಿಯಾವನ್ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಗರದ ಪ್ರಾಚೀನ ವೈಭವ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮರಳಿ ತರುವ ನಿಟ್ಟಿನಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಗಂಗಾ ನದಿಯ ದಕ್ಷಿಣ ದಂಡೆಯ ಮೇಲೆ ನೆಲೆಸಿರುವ ಇಂದಿನ ಪಾಟ್ನಾ ನಗರವನ್ನು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಪಾಟಲಿಪುತ್ರ ಎಂದೇ ಕರೆಯಲಾಗುತ್ತಿತ್ತು. ಕ್ರಿ.ಪೂ 490 ರಲ್ಲಿ ಮಗಧ ಸಾಮ್ರಾಜ್ಯದ ಪ್ರಸಿದ್ಧ ದೊರೆ ಅಜಾತಶತ್ರು ಈ ನಗರವನ್ನು ಸ್ಥಾಪಿಸಿದ್ದರು. ಪ್ರಾಚೀನ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ನಗರವಾಗಿದ್ದ ಇದು, ಕ್ರಿ.ಪೂ 600 ರಿಂದ ನಂದ, ಮೌರ್ಯ, ಶುಂಗ ಮತ್ತು ಗುಪ್ತ ರಾಜವಂಶಗಳು ಸೇರಿದಂತೆ ಭಾರತವನ್ನು ಆಳಿದ ಪ್ರಭಾವಶಾಲಿ ಸಾಮ್ರಾಜ್ಯಗಳ ಆಡಳಿತ ಕೇಂದ್ರ ಹಾಗೂ ರಾಜಧಾನಿಯಾಗಿ ಕಾರ್ಯನಿರ್ವಹಿಸಿತ್ತು.
ಮಹಾನ್ ಚಕ್ರವರ್ತಿಗಳಾದ ಚಂದ್ರಗುಪ್ತ ಮೌರ್ಯ ಮತ್ತು ಅಶೋಕನ ಆಳ್ವಿಕೆಯ ಅವಧಿಯಲ್ಲಿ ಪಾಟಲಿಪುತ್ರವು ಜಗತ್ತಿನ ಅತಿ ದೊಡ್ಡ ಮತ್ತು ಭವ್ಯ ಮಹಾನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು. ಅಂದಿನ ಕಾಲದ ಗ್ರೀಕ್ ರಾಯಭಾರಿ ಮೆಗಾಸ್ತನೀಸ್ ಭಾರತಕ್ಕೆ ಭೇಟಿ ನೀಡಿದ್ದಾಗ, ಇಲ್ಲಿನ ಭವ್ಯತೆ, ಮರದ ಅರಮನೆಗಳು ಮತ್ತು ಬೃಹತ್ ರಕ್ಷಣಾತ್ಮಕ ಗೋಡೆಗಳ ಬಗ್ಗೆ ಮಾರುಹೋಗಿ ತಮ್ಮ ಪ್ರಸಿದ್ಧ 'ಇಂಡಿಕಾ' ಪುಸ್ತಕದಲ್ಲಿ ಈ ನಗರದ ಅದ್ಭುತಗಳ ಕುರಿತು ವಿವರವಾಗಿ ಬರೆದಿದ್ದಾರೆ. ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ಜ್ಞಾನ ಮತ್ತು ವಿಜ್ಞಾನದ ಮಹಾ ಕೇಂದ್ರವಾಗಿಯೂ ಪಾಟಲಿಪುತ್ರ ಪ್ರಸಿದ್ಧಿ ಪಡೆದಿತ್ತು. ಗುಪ್ತ ಸಾಮ್ರಾಜ್ಯದ ಸುವರ್ಣ ಯುಗದಲ್ಲಿ ಜಗತ್ಪ್ರಸಿದ್ಧ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ ಆರ್ಯಭಟರು ಇದೇ ನಗರದಲ್ಲಿ ನೆಲೆಸಿದ್ದರು. ಆದರೆ ಕಾಲಾನಂತರದಲ್ಲಿ ನಡೆದ ಆಡಳಿತ ಬದಲಾವಣೆಗಳಿಂದಾಗಿ ಇದರ ರಾಜಕೀಯ ಪ್ರಾಮುಖ್ಯತೆ ಕುಂಠಿತಗೊಂಡಿತು. ತದನಂತರ ಮಧ್ಯಕಾಲೀನ ಭಾರತದಲ್ಲಿ ಆಡಳಿತ ನಡೆಸಿದ ಶೇರ್ ಶಾ ಸೂರಿ ಈ ಪ್ರದೇಶದ ಆಯಕಟ್ಟಿನ ಮಹತ್ವವನ್ನು ಅರಿತು, 'ಪಾಟ್ನಾ' ಎಂಬ ಹೆಸರಿನಲ್ಲಿ ನಗರವನ್ನು ಪುನಃ ಸ್ಥಾಪಿಸಿದರು.
ಪ್ರಸ್ತುತ ಬಿಹಾರ ಸರ್ಕಾರವು ಆಧುನಿಕತೆಯೊಂದಿಗೆ ಪ್ರಾಚೀನ ಪರಂಪರೆಯನ್ನು ಬೆಸೆಯಲು ಮುಂದಾಗಿದೆ. ಮೌರ್ಯರ ಕಾಲದ ಭವ್ಯ ಇತಿಹಾಸವನ್ನು ಸಾರುವ ಮರದ ಅರಮನೆಯ ಅವಶೇಷಗಳನ್ನು ಇಂದಿಗೂ ಪಾಟ್ನಾದ ಕುಮ್ರಾರ್ ಮತ್ತು ಬುಲಂಡಿ ಬಾಗ್‌ನಂತಹ ಉತ್ಖನನ ಪ್ರದೇಶಗಳಲ್ಲಿ ಕಾಣಬಹುದು. ಇದೀಗ ಬಿಹಾರ ಸರ್ಕಾರವು ಬೃಹತ್ ಸ್ಯಾಟಲೈಟ್ ಟೌನ್‌ಶಿಪ್ ಅಭಿವೃದ್ಧಿಪಡಿಸುತ್ತಿದ್ದು, ಇಡೀ ನಗರಕ್ಕೆ 'ಪಾಟಲಿಪುತ್ರ' ಎಂಬ ಐತಿಹಾಸಿಕ ಹೆಸರನ್ನು ಮರುನಾಮಕರಣ ಮಾಡುವ ಮೂಲಕ ನಗರದ ಪ್ರಾಚೀನ ವೈಭವಕ್ಕೆ ಹೊಸ ಕಳೆ ನೀಡಲು ಸಿಎಂ ಉತ್ಸುಕರಾಗಿದ್ದಾರೆ.