ಪುಣೆ : ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರು ಕ್ಷಮಾದಾನ ಕೋರಿ ಆಗಿನ ಬ್ರಿಟಿಷ್ ಸರ್ಕಾರಕ್ಕೆ 10 ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಅವರು ಪುಣೆ ನ್ಯಾಯಾಲಯವೊಂದಕ್ಕೆ ತಿಳಿಸಿದ್ದಾರೆ. ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಮೋಲ್ ಶಿಂದೆ ಅವರ ಮುಂದೆ ಹಾಜರಾಗಿದ್ದ ಅವರು, ಪಾಟಿ ಸವಾಲು ವೇಳೆ ಈ ಹೇಳಿಕೆ ನೀಡಿದ್ದಾರೆ. ಸಾತ್ಯಕಿ ಅವರ ಈ ಹೇಳಿಕೆಯು, ಸಾವರ್ಕರ್ ಅವರು ಕ್ಷಮದಾನ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಬಹಳ ವರ್ಷಗಳಿಂದ ನಡೆಯುತ್ತಿರುವ ರಾಜಕೀಯ ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧದ ಸೈದ್ಧಾಂತಿಕ ಹೋರಾಟಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಸ್ತ್ರವೂ ಸಿಕ್ಕಂತಾಗಿದೆ. ಸೆರೆವಾಸದಲ್ಲಿದ್ದ ಸಂದರ್ಭದಲ್ಲಿ ವಿ.ಡಿ.ಸಾವರ್ಕರ್ ಅವರು ಕ್ಷಮಾದಾನ ಕೋರಿ ಬ್ರಿಟಿಷರಿಗೆ ಅರ್ಜಿ ಸಲ್ಲಿಸಿದ್ದರು ಎಂದು ಪದೇಪದೇ ಟೀಕೆ ಮಾಡಿದ್ದ ಲೋಕಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಸಾತ್ಯಕಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಮೊಕದ್ದಮೆ ವಿಚಾರಣೆ ಭಾಗವಾಗಿ ನಡೆದ ಪಾಟಿ ಸವಾಲಿನ ವೇಳೆ, ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ಅವರು ಸಾತ್ಯಕಿ ಅವರಿಗೆ ಈ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದರು. ಸಾವರ್ಕರ್ ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಜೈಲಿನಲ್ಲಿ 1911 ಮತ್ತು 1921ರ ನಡುವೆ ಕೂಡಿ ಹಾಕಲಾಗಿತ್ತು. ತಮಗೆ ಜೈಲು ಶಿಕ್ಷೆ ವಿಧಿಸಿದ ತಿಂಗಳಲ್ಲಿ ಅವರು ಕ್ಷಮಾದಾನ ಕೋರಿ ಮೊದಲ ಅರ್ಜಿ ಸಲ್ಲಿಸಿದ್ದರು ಎಂದು ಸಾತ್ಯಕಿ ಹೇಳಿಕೆ ದಾಖಲಿಸಿದ್ದಾರೆ.
ಸಾವರ್ಕರ್ ಮಾತ್ರವಲ್ಲ, ಭಗತ್ ಸಿಂಗ್, ರಾಜಗುರು, ಬಟುಕೇಶ್ವರ್ ದತ್ತ, ಅಷ್ಫಾಕುಲ್ಲಾ خان ಸೇರಿದಂತೆ ಅನೇಕ ಕ್ರಾಂತಿಕಾರಿಗಳು ಆಗ ಇಂತಹ ಅರ್ಜಿ ಸಲ್ಲಿಸಿದ್ದರು ಎಂದೂ ಹೇಳಿದ್ದಾರೆ. ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಬ್ರಿಟಿಷರ ಆಳ್ವಿಕೆಯ ವೇಳೆ ಮಾನ್ಯವಾಗಿದ್ದ ಕಾನೂನು ಪ್ರಕ್ರಿಯೆಯಾಗಿತ್ತು. ತಮಗೆ ವಿಧಿಸಿದ್ದ ಶಿಕ್ಷೆಯನ್ನು ಕಡಿಮೆ ಮಾಡಿಕೊಳ್ಳಲು ಇಲ್ಲವೇ ಅವಧಿಪೂರ್ವ ಬಿಡುಗಡೆ ಬಯಸಿ ಕೈದಿಗಳು ಕಾಯ್ದೆಯಲ್ಲಿ ಇಂತಹ ಅವಕಾಶವನ್ನು ಬಳಸಿಕೊಳ್ಳುತ್ತಿದ್ದರು ಎಂದೂ ಸಾತ್ಯಕಿ ಹೇಳಿದ್ದಾರೆ. ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸುವುದು ಅಪವಾದವಾಗಿರಲಿಲ್ಲ ಹಾಗೂ ಕಾನೂನುಬಾಹಿರವೂ ಆಗಿರಲಿಲ್ಲ ಎಂದು ನ್ಯಾಯಾಧೀಶರಿಗೆ ತಿಳಿಸಿದ ಅವರು, ಸಾವರ್ಕರ್ ಅವರು ತಮ್ಮ ಅರ್ಜಿಗಳಲ್ಲಿ ಬಳಸಿದ್ದ ಭಾಷೆಯು ಬ್ರಿಟಿಷ್ ಸರ್ಕಾರ ಕುರಿತು ಅವರಲ್ಲಿದ್ದ ವಿಧೇಯತೆಯನ್ನು ತೋರುತ್ತಿತ್ತು ಎಂಬುದನ್ನು ತಳ್ಳಿಹಾಕಿದರು. ಸಾವರ್ಕರ್ ಅವರನ್ನು ಅಂಡಮಾನ್ ಮತ್ತು ನಿಕೋಬಾರ್ ಜೈಲಿಗೆ ಕಳುಹಿಸುವುದಕ್ಕೂ ಮೊದಲೇ ಅವರನ್ನು 'ವೀರ' ಎಂದು ಕರೆಯಲಾಗುತ್ತಿತ್ತು. ಈ ಕುರಿತು ಅನೇಕ ದಾಖಲೆಗಳು ಇವೆ ಎಂದೂ ಹೇಳಿದ್ದಾರೆ.