image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಓವೈಸಿ ತೀವ್ರ ವಾಗ್ದಾಳಿ: ಟಿಎಂಸಿ ಬಂಡಾಯ ಸಂಸದರು ಬಿಜೆಪಿ, ಆರ್‌ಎಸ್‌ಎಸ್ ಕೈಗೊಂಬೆಗಳು ಎಂದು ಆಕ್ರೋಶ

ಓವೈಸಿ ತೀವ್ರ ವಾಗ್ದಾಳಿ: ಟಿಎಂಸಿ ಬಂಡಾಯ ಸಂಸದರು ಬಿಜೆಪಿ, ಆರ್‌ಎಸ್‌ಎಸ್ ಕೈಗೊಂಬೆಗಳು ಎಂದು ಆಕ್ರೋಶ

ಲಕನೌ : ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದೊಳಗಿನ ಬಂಡಾಯದ ಕಿಡಿ ಈಗ ಉತ್ತರ ಪ್ರದೇಶದ ಚುನಾವಣಾ ರಂಗಕ್ಕೂ ವ್ಯಾಪಿಸಿದೆ. ಟಿಎಂಸಿ ರೆಬೆಲ್ ಸಂಸದರು ದೆಹಲಿಯಲ್ಲಿ ಎನ್‌ಡಿಎ ಕೂಟಕ್ಕೆ ಬೆಂಬಲ ಘೋಷಿಸಿರುವುದನ್ನು ತೀವ್ರವಾಗಿ ಖಂಡಿಸಿರುವ AIMIM ಅಧ್ಯಕ್ಷ ಅಸದುದ್ದೀನ್ ಓವೈಸಿ, ಬಂಡಾಯಗಾರರ ವಿರುದ್ಧ ಅತ್ಯಂತ ತೀಕ್ಷ್ಣ ಪದಗಳಿಂದ ವಾಗ್ದಾಳಿ ನಡೆಸಿದ್ದಾರೆ. ಯಾರು ಚುನಾವಣೆ ಮುನ್ನ ನೆನಪಿನಲ್ಲಿ ಮದೀನಾ, ಕಣ್ಣಿನಲ್ಲಿ ಕಾಬಾ ಎನ್ನುತ್ತಿದ್ದರೋ, ಅವರೆಲ್ಲರೂ ಈಗ ಬಿಜೆಪಿ ನಾಯಕರ ಜೊತೆ ಕುಳಿತು ಆರಾಮವಾಗಿ ಚಹಾ ಕುಡಿಯುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಓವೈಸಿ, ಟಿಎಂಸಿ ಬಂಡಾಯಗಾರರ ಜೊತೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧವೂ ಭೀಕರ ದಾಳಿ ನಡೆಸಿದ್ದಾರೆ. ಟಿಎಂಸಿ ರೆಬೆಲ್ಸ್ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ ಓವೈಸಿ, ನೀವು ನಾಚಿಕೆಯ ಎಲ್ಲಾ ಗೆರೆಗಳನ್ನು ದಾಟಿದ್ದೀರಿ. ಬಂಗಾಳಕ್ಕೆ ಹೋದಾಗ ಇವರದೇ ನಾಯಕರೊಬ್ಬರು ಬಂಗಾಳವನ್ನು ಕಾಬಾ ಭೂಮಿ ಮಾಡಲು ಬಿಡುವುದಿಲ್ಲ ಎಂದಿದ್ದರು. ಆದರೆ, ನೆನಪಿನಲ್ಲಿ ಮದೀನಾ, ಕಣ್ಣಿನಲ್ಲಿ ಕಾಬಾ ಎಂದು ಜಪಿಸುತ್ತಿದ್ದ ಇದೇ ನಾಯಕರು ಇಂದು ದೆಹಲಿಯಲ್ಲಿ ಬಾಬಾ ಜೊತೆ ಮುಖಾಮುಖಿ ಕುಳಿತು ಚಹಾ ಕುಡಿಯುತ್ತಿದ್ದಾರೆ. ಅಲ್ಲಿ ಕುಳಿತು ಅವರು ಯಾರನ್ನು ಬೈಯುತ್ತಿದ್ದಾರೆ ಗೊತ್ತಾ, ಇದೇ ಓವೈಸಿಯನ್ನು ಎಂದು ಗುಡುಗಿದ್ದಾರೆ. ಈ ಎಲ್ಲಾ ನಾಯಕರು ಬಿಜೆಪಿ ಮತ್ತು RSSನ ಕೈಗೊಂಬೆಗಳು ಎಂಬುದು ನನಗೆ ಮೊದಲೇ ಗೊತ್ತಿತ್ತು. ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಇವರೆಲ್ಲರೂ ತಲೆಬಾಗಿ ಬಿಜೆಪಿಗೆ ಶರಣಾಗಿದ್ದಾರೆ. ನಾನು ಉತ್ತರ ಪ್ರದೇಶ ಹಾಗೂ ಬಹ್ರೈಚ್‌ನ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡುತ್ತೇನೆ, ನಮ್ಮ ಮಜ್ಲಿಸ್ ಪಕ್ಷವನ್ನು ಬೆಂಬಲಿಸಿ. ನಿಮ್ಮ ಪ್ರೀತಿ ಮತ್ತು ನಮ್ಮ ಧರ್ಮದ ನಂಬಿಕೆಯನ್ನು ನಾವು ಎಂದಿಗೂ ವ್ಯಾಪಾರ ಮಾಡುವುದಿಲ್ಲ, ಅದಕ್ಕಾಗಿ ಸಾಯಲೂ ಸಿದ್ಧ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಮಾವೇಶದಲ್ಲಿ ಸಮಾಜವಾದಿ ಪಕ್ಷದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡ ಓವೈಸಿ, ದೇಶದಲ್ಲಿ ಯಾವುದೇ ರಾಜಕೀಯ ಬಿಕ್ಕಟ್ಟು ಉಂಟಾದರೂ ಮುಸ್ಲಿಂ ನಾಯಕರ ಮೇಲೆ ಗೂಬೆ ಕೂರಿಸಲಾಗುತ್ತದೆ. ಆದರೆ ಬೇರೆಯವರು ತಪ್ಪು ಮಾಡಿದಾಗ ಯಾರೂ ಪ್ರಶ್ನಿಸುವುದಿಲ್ಲ. ಅಖಿಲೇಶ್ ಅವರೇ, ನಿಮ್ಮ ಪರಮ ಆಪ್ತರಾಗಿದ್ದ ಟಿಎಂಸಿ ಸಂಸದರು ಇಂದು ಪಕ್ಷ ಬಿಟ್ಟು ಬಿಜೆಪಿಗೆ ಜೈ ಎನ್ನುತ್ತಿದ್ದಾರಲ್ಲ, ಅವರ ವಿರುದ್ಧ ನೀವೇಕೆ ಒಂದು ಮಾತನ್ನೂ ಆಡುತ್ತಿಲ್ಲ, ಅವರಿಗೆ ಯಾರೂ ಏನೂ ಹೇಳುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಆದರೆ, ಅಸದುದ್ದೀನ್ ಓವೈಸಿ ನಿಮ್ಮ ಹಕ್ಕುಗಳಿಗಾಗಿ, ಮುಸ್ಲಿಂ ಸಮುದಾಯದ ರಾಜಕೀಯ ನಾಯಕತ್ವಕ್ಕಾಗಿ ಧ್ವನಿ ಎತ್ತಿ ಮುಂದೆ ಬಂದಾಗ ಮಾತ್ರ ಇವರೆಲ್ಲರಿಗೂ ತಮ್ಮ ಅಸ್ತಿತ್ವಕ್ಕೆ ಸಂಚಕಾರ ಬಂದಂತೆ ಭೀತಿ ಶುರುವಾಗುತ್ತದೆ. ಇನ್ನು ಮುಂದೆ ಅವರು ಹೆದರಲೇಬೇಕು, ಏಕೆಂದರೆ ದೇಶದ ಮುಸ್ಲಿಂ ಯುವಕರು ಈಗ ಜಾಗೃತರಾಗಿದ್ದಾರೆ ಎಂದು ಓವೈಸಿ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ