ಕೇರಳಮ್ : ಕೆಎಸ್‌ಆರ್‌ಟಿಸಿ (ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ) ಬಸ್‌ನಲ್ಲಿ ಮುಂಗಡವಾಗಿ ಟಿಕೆಟ್ ಬುಕ್ ಮಾಡಿ, ನಿಗದಿತ ಸಮಯಕ್ಕಿಂತ ಮೊದಲೇ ಬಸ್ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರೂ ಮಹಿಳಾ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಸಂಸ್ಥೆಗೆ ಗ್ರಾಹಕರ ನ್ಯಾಯಾಲಯ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಸೇವಾ ನ್ಯೂನತೆಗಾಗಿ ಕೆಎಸ್‌ಆರ್‌ಟಿಸಿಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಗ್ರಾಹಕರ ಆಯೋಗವು ಸಂತ್ರಸ್ತ ಮಹಿಳೆಗೆ ಭಾರಿ ಮೊತ್ತದ ಪರಿಹಾರ ನೀಡುವಂತೆ ಆದೇಶಿಸಿದೆ. 2024ರ ಆಗಸ್ಟ್ 24ರಂದು ಕೇರಳದ ಮಹಿಳೆಯೊಬ್ಬರು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ತಿರುವಲ್ಲಾದಿಂದ ಎರ್ನಾಕುಲಂಗೆ ತೆರಳಲು 146 ರೂಪಾಯಿ ಪಾವತಿಸಿ ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಿದ್ದರು. ಆಸ್ಪತ್ರೆಯಲ್ಲೂ 500 ರೂಪಾಯಿ ನೀಡಿ ಅಪಾಯಿಂಟ್‌ಮೆಂಟ್ ಪಡೆದುಕೊಂಡಿದ್ದ ಅವರು, ಚಿಕಿತ್ಸೆಗೆ ಹೋಗಲೆಂದೇ ಕಚೇರಿಗೂ ರಜೆ ಹಾಕಿದ್ದರು. ಬೆಳಿಗ್ಗೆ 8 ಗಂಟೆಗೆ ಬಸ್ ತಿರುವಲ್ಲಾ ನಿಲ್ದಾಣಕ್ಕೆ ಬರಲಿದೆ ಎಂದು ಮೊಬೈಲ್‌ಗೆ ಬಂದಿದ್ದ ಸಂದೇಶದ ಆಧಾರದ ಮೇಲೆ ಮಹಿಳೆ ಅರ್ಧ ಗಂಟೆ ಮುಂಚಿತವಾಗಿ, ಅಂದರೆ 7.30ಕ್ಕೇ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದರು. ಆದರೆ, 8.10 ಆದರೂ ಬಸ್ ಬಾರದಿದ್ದಾಗ ಆತಂಕಗೊಂಡ ಅವರು ಬಸ್ ನಿರ್ವಾಹಕನಿಗೆ (ಕಂಡಕ್ಟರ್) ಕರೆ ಮಾಡಿದ್ದಾರೆ. ಈ ವೇಳೆ ನಿರ್ವಾಹಕನು ಅತ್ಯಂತ ಬೇಜವಾಬ್ದಾರಿಯಿಂದ, "ಬಸ್ ಈಗಾಗಲೇ ತಿರುವಲ್ಲಾ ದಾಟಿ ಕೊಟ್ಟಾಯಂ ತಲುಪಿದೆ, ನೀವು ಬೇರೆ ಯಾವುದಾದರೂ ಬಸ್ ಹಿಡಿದು ಹೋಗಿ" ಎಂದು ಉಡಾಫೆಯ ಉತ್ತರ ನೀಡಿದ್ದಾನೆ.
ಇದರಿಂದ ತೀವ್ರ ಅಸಮಾಧಾನಗೊಂಡ ಮಹಿಳೆ ತನಗಾದ ಮಾನಸಿಕ ಹಾಗೂ ಆರ್ಥಿಕ ನಷ್ಟದ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಬಸ್ ಹತ್ತಿಸಿಕೊಳ್ಳದ ಕಾರಣ ತಮಗೆ ಟಿಕೆಟ್ ಹಣ ನಷ್ಟವಾಗಿದ್ದಲ್ಲದೆ, ಆಸ್ಪತ್ರೆಗೆ ಪಾವತಿಸಿದ್ದ ಹಣವೂ ವ್ಯರ್ಥವಾಯಿತು ಮತ್ತು ಮತ್ತೊಂದು ದಿನ ರಜೆ ಹಾಕಿ ಆಸ್ಪತ್ರೆಗೆ ಅಲೆಯುವಂತಾಯಿತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ವಿಚಾರಣೆ ವೇಳೆ ಕೆಎಸ್‌ಆರ್‌ಟಿಸಿ ಸಂಸ್ಥೆಯು ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಯತ್ನಿಸಿತು. ಕಂಡಕ್ಟರ್ ಬಳಿ ಮುಂಗಡ ಬುಕಿಂಗ್ ಚಾರ್ಟ್ ಇತ್ತು ಎಂದು ವಾದಿಸಿದ್ದಲ್ಲದೆ, ಅಂದು ಕರ್ತವ್ಯದಲ್ಲಿದ್ದ ನಿರ್ವಾಹಕನನ್ನು ಈ ಪ್ರಕರಣದಲ್ಲಿ ನೇರ ಆರೋಪಿಯನ್ನಾಗಿ ಮಾಡಿಲ್ಲ ಎಂಬ ತಾಂತ್ರಿಕ ಕಾರಣಗಳನ್ನು ಮುನ್ನೆಲೆಗೆ ತಂದಿತು. ಆದರೆ, ಈ ವಾದಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಗ್ರಾಹಕರ ಆಯೋಗವು ಸಾರಿಗೆ ನಿಗಮದ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿತು. ನಿರ್ದಿಷ್ಟ ಸಮಯಕ್ಕೆ ಬಸ್ ಬರುತ್ತದೆ ಎಂದು ಸಂದೇಶ ಕಳುಹಿಸಿ, ಬಳಿಕ ಅದನ್ನು ಪಾಲಿಸದೆ ಇರುವುದು ಗ್ರಾಹಕರಿಗೆ ಮಾಡಿದ ವಂಚನೆ ಮತ್ತು ತಪ್ಪು ನಿರೂಪಣೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಅಂತಿಮವಾಗಿ ಮಹಿಳೆಯ ಹೋರಾಟಕ್ಕೆ ಬಿಗ್ ಜಯ ಸಿಕ್ಕಿದ್ದು, ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಮಹಿಳೆಗೆ ಬಸ್ ಟಿಕೆಟ್ ದರ 146 ರೂಪಾಯಿಯನ್ನು ಮರುಪಾವತಿಸುವುದರ ಜೊತೆಗೆ, ದೂರು ಸಲ್ಲಿಸಿದ ದಿನಾಂಕದಿಂದ ವಾರ್ಷಿಕ ಶೇಕಡಾ 9ರಷ್ಟು ಬಡ್ಡಿ ನೀಡಬೇಕು ಎಂದು ಆದೇಶಿಸಿದೆ. ಅಷ್ಟೇ ಅಲ್ಲದೆ, ಮಹಿಳೆ ಅನುಭವಿಸಿದ ಮಾನಸಿಕ ಯಾತನೆಗೆ 25,000 ರೂಪಾಯಿ ದಂಡ ಹಾಗೂ ನ್ಯಾಯಾಲಯದ ವೆಚ್ಚದ ರೂಪದಲ್ಲಿ 10,000 ರೂಪಾಯಿಯನ್ನು ಸೇರಿದಂತೆ ಒಟ್ಟು ಭಾರಿ ಮೊತ್ತದ ಪರಿಹಾರವನ್ನು ಪಾವತಿಸುವಂತೆ ಕೆಎಸ್‌ಆರ್‌ಟಿಸಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಇದು ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಬೇಜವಾಬ್ದಾರಿತನಕ್ಕೆ ಗ್ರಾಹಕ ನ್ಯಾಯಾಲಯ ನೀಡಿದ ತಕ್ಕ ಪಾಠವಾಗಿದೆ.