image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ದೀಘಾ ಜಗನ್ನಾಥ ದೇವಾಲಯದ 'ಧಾಮ' ಹೆಸರು ಕೈಬಿಡಲು ಸಿಎಂ ಸುವೇಂದು ಅಧಿಕಾರಿ ನಿರ್ಧಾರ: ಒಡಿಶಾ ಸಿಎಂ ಪತ್ರಕ್ಕೆ ಮನ್ನಣೆ

ದೀಘಾ ಜಗನ್ನಾಥ ದೇವಾಲಯದ 'ಧಾಮ' ಹೆಸರು ಕೈಬಿಡಲು ಸಿಎಂ ಸುವೇಂದು ಅಧಿಕಾರಿ ನಿರ್ಧಾರ: ಒಡಿಶಾ ಸಿಎಂ ಪತ್ರಕ್ಕೆ ಮನ್ನಣೆ

ಕೋಲ್ಕತಾ : ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದ ದೀಘಾದಲ್ಲಿ ನೂತನವಾಗಿ ನಿರ್ಮಿಸಲಾದ ಜಗನ್ನಾಥ ದೇವಾಲಯದ ಹೆಸರಿನಿಂದ 'ಧಾಮ' ಎಂಬ ಪದವನ್ನು ಕೈಬಿಡಲು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅಧಿಕೃತವಾಗಿ ಆದೇಶಿಸಿದ್ದಾರೆ. ಇದರೊಂದಿಗೆ ಕಳೆದ ಕೆಲವು ಸಮಯದಿಂದ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ನಡುವೆ ಧಾರ್ಮಿಕ ಭಾವನೆಗಳ ವಿಚಾರವಾಗಿ ಉಂಟಾಗಿದ್ದ ವಿವಾದಕ್ಕೆ ಸುಖದ ಅಂತ್ಯ ಸಿಕ್ಕಂತಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು 250 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಜಗನ್ನಾಥ ದೇವಾಲಯ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸಿ, 2025ರ ಏಪ್ರಿಲ್‌ನಲ್ಲಿ ಉದ್ಘಾಟಿಸಿತ್ತು. ಅಲ್ಲದೆ, ಇದಕ್ಕೆ 'ದೀಘಾ ಜಗನ್ನಾಥ ಧಾಮ' ಎಂದು ನಾಮಕರಣ ಮಾಡಲಾಗಿತ್ತು. ಆದರೆ, ಹಿಂದೂ ಧರ್ಮದ ಪವಿತ್ರ ನಾಲ್ಕು ಧಾಮಗಳಲ್ಲಿ (ಚಾರ್ ಧಾಮ್) ಒಡಿಶಾದ ಪುರಿ ಜಗನ್ನಾಥ ಕ್ಷೇತ್ರವು ಒಂದಾಗಿದ್ದು, 'ಜಗನ್ನಾಥ ಧಾಮ' ಎಂಬ ಹೆಸರು ಕೇವಲ ಪುರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಒಡಿಶಾ ಸರ್ಕಾರ ಹಾಗೂ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಕುರಿತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಅವರು ಈ ಹಿಂದೆಯೇ ಪತ್ರ ಬರೆದು, ದೀಘಾ ದೇವಾಲಯಕ್ಕೆ 'ಧಾಮ' ಎಂದು ಕರೆಯುವುದರಿಂದ ಭಕ್ತರಲ್ಲಿ ಗೊಂದಲ ಉಂಟಾಗುತ್ತದೆ ಮತ್ತು ಇದು ಸನಾತನ ಸಂಸ್ಕೃತಿಗೆ ಧಕ್ಕೆ ತರುತ್ತದೆ ಎಂದು ಹೆಸರು ಬದಲಾಯಿಸುವಂತೆ ಕೋರಿದ್ದರು. ಆದರೆ, ಅಂದಿನ ಸಿಎಂ ಮಮತಾ ಬ್ಯಾನರ್ಜಿ ಈ ಮನವಿಯನ್ನು ತಿರಸ್ಕರಿಸಿದ್ದರು. ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಆಡಳಿತ ಬದಲಾವಣೆಯಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸುವೇಂದು ಅಧಿಕಾರಿ ಅವರಿಗೆ ಒಡಿಶಾ ಸಿಎಂ ಮೋಹನ್ ಚರಣ್ ಮಾಂಝಿ ಮತ್ತು ಪುರಿ ಸಂಸದ ಸಂಬಿತ್ ಪಾತ್ರ ಅವರು ಮತ್ತೊಮ್ಮೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದರು. ಒಡಿಶಾದ ಜನರ ಭಾವನೆಗಳು ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಗೌರವಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಹಿಂದಿನ ಸರ್ಕಾರದ ನಿರ್ಧಾರವನ್ನು ಬದಲಾಯಿಸಿದ್ದಾರೆ. ದೇವಾಲಯದ ಹೆಸರಿನಿಂದ 'ಧಾಮ' ಪದವನ್ನು ತೆಗೆದುಹಾಕಲಾಗುತ್ತಿದ್ದು, ಇನ್ಮುಂದೆ ಈ ಸಂಕೀರ್ಣವನ್ನು 'ಶ್ರೀ ಶ್ರೀ ಜಗನ್ನಾಥ ಸಾಂಸ್ಕೃತಿಕ ಕೇಂದ್ರ' ಮತ್ತು ಅದರೊಳಗಿನ ಆಲಯವನ್ನು 'ಶ್ರೀ ಶ್ರೀ ಜಗನ್ನಾಥ ದೇವ ಮಂದಿರ' ಎಂದು ಮರುನಾಮಕರಣ ಮಾಡಲು ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರದ ಈ ಸೌಹಾರ್ದಯುತ ನಿರ್ಧಾರವನ್ನು ಒಡಿಶಾ ಮುಖ್ಯಮಂತ್ರಿ ಹಾಗೂ ಪುರಿ ಜಗನ್ನಾಥ ದೇವಾಲಯದ ಅರ್ಚಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Category
ಕರಾವಳಿ ತರಂಗಿಣಿ