image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಟಿಎಂಸಿಯಲ್ಲಿ ಭಾರಿ ಬಿರುಕು: ವದಂತಿ ತಳ್ಳಿಹಾಕಿದ ಮಮತಾ ಬ್ಯಾನರ್ಜಿ ಪಕ್ಷ

ಟಿಎಂಸಿಯಲ್ಲಿ ಭಾರಿ ಬಿರುಕು: ವದಂತಿ ತಳ್ಳಿಹಾಕಿದ ಮಮತಾ ಬ್ಯಾನರ್ಜಿ ಪಕ್ಷ

ಕೋಲ್ಕತ್ತ : ತೃಣಮೂಲ ಕಾಂಗ್ರೆಸ್‌ನಲ್ಲಿ (TMC) ಭಾರಿ ಬಿರುಕು ಉಂಟಾಗಿದ್ದು, 20 ಸಂಸದರು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ ನೀಡಲಿದ್ದಾರೆ ಎಂಬ ವರದಿಗಳನ್ನು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ವರದಿಗಳು ಕೇವಲ ವದಂತಿಗಳಾಗಿದ್ದು, ವೈರಲ್ ಆಗಿರುವ ಸಂಸದರ ಪಟ್ಟಿ ನಕಲಿ (Fake) ಎಂದು ಟಿಎಂಸಿ ನಾಯಕರು ಹೇಳಿದ್ದಾರೆ. ಅಲ್ಲದೆ, ರಾಜಕೀಯ ವಿರೋಧಿಗಳು ಮತ್ತು ಬಿಜೆಪಿ ಇದರ ಹಿಂದೆ ಇದ್ದು, ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 20ಕ್ಕೂ ಹೆಚ್ಚು ಟಿಎಂಸಿ ಸಂಸದರು ಈಗಾಗಲೇ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಟಿಎಂಸಿ ಈ ಸ್ಪಷ್ಟನೆ ನೀಡಿದೆ.

ಟಿಎಂಸಿ ಹಿರಿಯ ನಾಯಕ ಕೀರ್ತಿ ಆಜಾದ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ವೈರಲ್ ಆಗಿರುವ ಸಂಸದರ ಪಟ್ಟಿ ಸಂಪೂರ್ಣ ನಕಲಿಯಾಗಿದ್ದು, ಬಿಜೆಪಿ ಇದನ್ನು ಎಲ್ಲೆಡೆ ಹರಡುತ್ತಿದೆ. ಈ ಪಟ್ಟಿಯಲ್ಲಿ ಹೆಸರಿಸಲಾದ ನಾಯಕರಲ್ಲಿ ಕನಿಷ್ಠ ಆರು ಸಂಸದರು ತಾವು ಯಾವುದೇ ಪತ್ರ ಅಥವಾ ದಾಖಲೆಗೆ ಸಹಿ ಮಾಡಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಬಿಜೆಪಿಯ ಆಪರೇಷನ್ ಕಮಲ ಇಲ್ಲಿ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವ ಅಮಿತ್ ಷಾ ತಂತ್ರಗಾರಿಕೆ ಬಂಗಾಳದಲ್ಲಿ ನಡೆದಿಲ್ಲ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಪ್ರಭಾವಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಬಂಡಾಯದ ವರದಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆಯಲಾಗಿದೆ ಎಂದು ಸುದ್ದಿ ಹಬ್ಬಿ 24 ಗಂಟೆಗಳೇ ಕಳೆದಿದ್ದರೂ ಆ ಪತ್ರ ಯಾಕೆ ಇನ್ನು ಸಾರ್ವಜನಿಕವಾಗಿ ಹೊರಬಂದಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಇಂತಹ ಯಾವುದೇ ಪತ್ರ ತಮಗೆ ತಲುಪಿಲ್ಲ ಎಂದು ಸ್ಪೀಕರ್ ಕಚೇರಿಯೇ ಸ್ಪಷ್ಟಪಡಿಸಿದೆ ಎಂದು ತಿಳಿಸಿದ್ದಾರೆ.

ಕೆಲವು ಟಿಎಂಸಿ ನಾಯಕರು ಬಿಜೆಪಿಯ ಹಿರಿಯ ನಾಯಕ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿದ್ದಾರೆ ಎಂಬ ವರದಿಯನ್ನು ಪ್ರಶ್ನಿಸಿದ ಬ್ಯಾನರ್ಜಿ, ಈ ರಹಸ್ಯ ಸಭೆಯನ್ನು ಆಯೋಜಿಸಿದವರು ಯಾರು ಹಾಗೂ ಇದಕ್ಕೆ ಮಧ್ಯಸ್ಥಿಕೆ ವಹಿಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ. ಪಕ್ಷ ಬಿಡಲು ಯತ್ನಿಸುತ್ತಿರುವವರು ಮಮತಾ ಬ್ಯಾನರ್ಜಿ ಅವರನ್ನು ತಮ್ಮ ನಾಯಕರೆಂದು ಪರಿಗಣಿಸುತ್ತಿಲ್ಲ, ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈಜೋಡಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿ ಟಿಎಂಸಿಯಿಂದ ಬೇರ್ಪಡಲು ಯತ್ನಿಸುವ ಯಾವುದೇ ಗುಂಪು ಕಾನೂನು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಕಲ್ಯಾಣ್ ಬ್ಯಾನರ್ಜಿ ಎಚ್ಚರಿಸಿದ್ದಾರೆ. ಸಂಸದ ಸ್ಥಾನದಿಂದ ಅನರ್ಹಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಇವರು ಕೊನೆಗೆ ಅಧಿಕೃತವಾಗಿ ಬಿಜೆಪಿಯನ್ನೇ ಸೇರಬೇಕಾಗುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಇದೇ ವೇಳೆ ಬಂಡಾಯದ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಕಾಕೋಲಿ घोष್ ದಸ್ತಿದಾರ್ ವಿರುದ್ಧ ಕಿಡಿಕಾರಿದ ಬ್ಯಾನರ್ಜಿ, ಚುನಾವಣಾ ಪ್ರಚಾರದ ಸಮಯದಲ್ಲಿ ಇದೇ ಕಾಕೋಲಿ ದಸ್ತಿದಾರ್ ಮಮತಾ ಬ್ಯಾನರ್ಜಿ ಅವರನ್ನು ಹೊಗಳುವುದರಲ್ಲಿ ಮುಂದಿದ್ದರು. ಸಿಕ್ಕ ಸಿಕ್ಕ ವೇದಿಕೆಯಲ್ಲೆಲ್ಲಾ ದೀದಿಯನ್ನು ಕೊಂಡಾಡುತ್ತಿದ್ದ ನಾಯಕರು, ಈಗ ಟಿಎಂಸಿಯಲ್ಲಿದ್ದರೆ ಕ್ಷೇತ್ರ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೆಪ ಹೇಳುತ್ತಿದ್ದಾರೆ. ಅವರಿಗೆ ಬಿಜೆಪಿ ಸೇರಲು ಇಷ್ಟವಿದ್ದರೆ ನೇರವಾಗಿ ಹೋಗಲಿ, ಬಿಜೆಪಿಯಿಂದ ಟಿಕೆಟ್ ಪಡೆದು ಮತ್ತೆ ಚುನಾವಣೆ ಎದುರಿಸಲಿ. ಇವರೆಲ್ಲರೂ ಪಕ್ಷಕ್ಕೆ ದ್ರೋಹ ಬಗೆದ ನಯವಂಚಕರು ಎಂದು ಕಿಡಿಕಾರಿದ್ದಾರೆ.

Category
ಕರಾವಳಿ ತರಂಗಿಣಿ