ಕೇರಳಂ : ಕಣ್ಣೂರು ಜಿಲ್ಲೆಯ ಬಾವಲಿ ನದಿಯ ದಂಡೆಯ ಮೇಲಿರುವ ಪ್ರಸಿದ್ಧ ಪುಣ್ಯಕ್ಷೇತ್ರ ಕೊಟ್ಟಿಯೂರು ಮಹಾದೇವ ದೇವಸ್ಥಾನದಲ್ಲಿ ವಾರ್ಷಿಕ ವೈಶಾಖ ಮಹೋತ್ಸವ ಆರಂಭವಾಗಿದ್ದು, ದರ್ಶನಕ್ಕೆ ತೆರಳಿರುವ ಕರ್ನಾಟಕದ ಭಕ್ತರ ಮೇಲೆ ದೇವಸ್ಥಾನದ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಅತ್ಯಂತ ಕೆಟ್ಟದಾಗಿ ಮತ್ತು ಅಮಾನವೀಯವಾಗಿ ವರ್ತಿಸುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಈ ಕ್ಷೇತ್ರದ ಹಿನ್ನೆಲೆ ಹಾಗೂ ವಿಶೇಷತೆಗಳು ಭಾರಿ ಸದ್ದು ಮಾಡಿದ್ದರಿಂದ ಪ್ರೇರಿತರಾಗಿ ಈ ಬಾರಿ ಕರ್ನಾಟಕದಿಂದ ಸಾವಿರಾರು ಕನ್ನಡಿಗರು ಭೇಟಿ ನೀಡುತ್ತಿದ್ದಾರೆ. ಆದರೆ ಅಲ್ಲಿ ಎದುರಾಗುತ್ತಿರುವ ಕಹಿ ಅನುಭವ ಹಾಗೂ ಸಿಬ್ಬಂದಿಯ ದರ್ಪದಿಂದ ಬೇಸತ್ತಿರುವ ಭಕ್ತರು, ದಯವಿಟ್ಟು ಯಾರೂ ಈ ದೇವಸ್ಥಾನಕ್ಕೆ ಬರಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರದಲ್ಲಿ ಸದ್ಯ 27 ದಿನಗಳ ಕಾಲ ನಡೆಯುವ ವೈಶಾಖ ಮಹೋತ್ಸವಕ್ಕೆ ಲಕ್ಷಾಂತರ ಜನರು ಲಗ್ಗೆ ಇಡುತ್ತಿದ್ದಾರೆ. ಕರ್ನಾಟಕದ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋಗಳ ಪ್ರಕಾರ, ದೇವಸ್ಥಾನದಲ್ಲಿ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲದೆ ಭಾರೀ ಅವ್ಯವಸ್ಥೆ ಸೃಷ್ಟಿಯಾಗಿದ್ದು, ಭಕ್ತರ ತೀವ್ರ ಶೋಷಣೆ ನಡೆಯುತ್ತಿದೆ. ವಿಶೇಷ ದರ್ಶನಕ್ಕಾಗಿ ಬರೋಬ್ಬರಿ 1,000 ರೂಪಾಯಿ ಕೊಟ್ಟು ಟಿಕೆಟ್ ಪಡೆದರೂ ಭಕ್ತರು ಕನಿಷ್ಠ 3 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಸಾಮಾನ್ಯ ಅಥವಾ ಉಚಿತ ದರ್ಶನ ಪಡೆಯಲು ಬರುವ ಭಕ್ತರು ಬಿಸಿಲಿನಲ್ಲಿ ಬರೋಬ್ಬರಿ 7 ರಿಂದ 8 ಗಂಟೆಗಳ ಕಾಲ ಕಾಯುವಂತಾಗಿದೆ ಎಂದು ಭಕ್ತರು ಅಳಲು ತೋಡಿಕೊಂಡಿದ್ದಾರೆ.
ಇದಕ್ಕಿಂತಲೂ ಗಂಭೀರವಾದ ವಿಷಯವೆಂದರೆ, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿ ಕನ್ನಡಿಗರೊಂದಿಗೆ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕ್ಯೂ ಲೈನ್‌ಗಳಲ್ಲಿ ಮಹಿಳೆಯರನ್ನು ಜೋರಾಗಿ ತಳ್ಳುವುದು ಹಾಗೂ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಸುಸ್ತಾಗಿರುವ ಭಕ್ತರ ಮೇಲೆ ಕಾಲಿನಿಂದ ನೀರು ಎರಚಿ ವಿಕೃತಿ ಮೆರೆಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ದೇವಸ್ಥಾನದ ಪರಿಸರದಲ್ಲಿ ಎಲ್ಲಿ ನೋಡಿದರೂ ನೂಕುನುಗ್ಗಲು ಏರ್ಪಟ್ಟಿದ್ದು, ಸರಿಯಾದ ಪಾರ್ಕಿಂಗ್, ಕುಡಿಯುವ ನೀರು ಅಥವಾ ಶೌಚಾಲಯದ ವ್ಯವಸ್ಥೆಯೂ ಇಲ್ಲದೆ ಭಕ್ತರು ಪರದಾಡುವಂತಾಗಿದೆ. "ಇಲ್ಲಿ ವ್ಯವಸ್ಥೆಯೂ ಇಲ್ಲ, ಮಾನವೀಯತೆಯೂ ಇಲ್ಲ, ಕನ್ನಡಿಗರಿಗೆ ಹಾಗೂ ಮಹಿಳಾ ಭಕ್ತರಿಗೆ ಯಾವುದೇ ಸೇಫ್ಟಿ ಇಲ್ಲ" ಎಂದು ಭಕ್ತರು ಕಣ್ಣೀರು ಹಾಕುತ್ತಿದ್ದು, ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.