image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

15ರ ಹರೆಯದ ವೈಭವ್ ಸೂರ್ಯವಂಶಿಗಾಗಿ ನಿಯಮ ಬದಲಿಸಿದ ಬಿಸಿಸಿಐ: ಪೋಷಕರ ವಿದೇಶಿ ಪ್ರವಾಸದ ಸಂಪೂರ್ಣ ಖರ್ಚು ಭರಿಸಲು ಮಹತ್ವದ ನಿರ್ಧಾರ

15ರ ಹರೆಯದ ವೈಭವ್ ಸೂರ್ಯವಂಶಿಗಾಗಿ ನಿಯಮ ಬದಲಿಸಿದ ಬಿಸಿಸಿಐ: ಪೋಷಕರ ವಿದೇಶಿ ಪ್ರವಾಸದ ಸಂಪೂರ್ಣ ಖರ್ಚು ಭರಿಸಲು ಮಹತ್ವದ ನಿರ್ಧಾರ

ಮುಂಬೈ : ಟೀಂ ಇಂಡಿಯಾಗೆ ಆಯ್ಕೆಯಾಗಿರುವ 15 ವರ್ಷದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ನೆರವಾಗಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಸೀನಿಯರ್ ತಂಡಕ್ಕೆ ಆಯ್ಕೆಯಾಗಿರುವ ಈ ಬಾಲಕನಿಗೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸುಲಭವಾಗಲಿ ಎಂಬ ಕಾರಣಕ್ಕೆ ಆತನ ಪೋಷಕರನ್ನು ಸಹ ತಂಡದೊಂದಿಗೆ ವಿದೇಶಕ್ಕೆ ಕಳುಹಿಸಿಕೊಡಲು ಬಿಸಿಸಿಐ ಮುಂದಾಗಿದೆ. ಪೋಷಕರ ಈ ಸಂಪೂರ್ಣ ಪ್ರವಾಸದ ಖರ್ಚು ವೆಚ್ಚಗಳನ್ನು ಕ್ರಿಕೆಟ್ ಮಂಡಳಿಯೇ ಭರಿಸಲಿದೆ.

ಕೇವಲ 15 ವರ್ಷದ ಪ್ರಾಯದಲ್ಲೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೂಲಕ ವೈಭವ್ ಸೂರ್ಯವಂಶಿ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಿರಿಯ ಆಟಗಾರರನ್ನೊಳಗೊಂಡ ಸೀನಿಯರ್ ತಂಡದೊಂದಿಗೆ ಮೊದಲ ಬಾರಿಗೆ ವಿದೇಶಿ ಪ್ರವಾಸ ಕೈಗೊಳ್ಳುತ್ತಿರುವುದರಿಂದ, ಅವರ ಜೊತೆಗೆ ಪೋಷಕರು ಇರುವುದು ಅತ್ಯಗತ್ಯ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ವಯಸ್ಕ ಆಟಗಾರರ ನಡುವೆ ಈ ಬಾಲಕನಿಗೆ ಯಾವುದೇ ರೀತಿಯ ಅಸುರಕ್ಷಿತ ಭಾವನೆ ಮೂಡದಂತೆ ಮತ್ತು ಹೊಸ ಪರಿಸರದಲ್ಲಿ ಆತ ಧೃತಿಗೆಡದಂತೆ ನೋಡಿಕೊಳ್ಳುವುದು ಮಂಡಳಿಯ ಜವಾಬ್ದಾರಿಯಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ ಸೆಕ್ರಟರಿ ದೇವಜಿತ್ ಸೈಕಿಯಾ, "ವೈಭವ್ ಇನ್ನೂ ಚಿಕ್ಕ ಹುಡುಗ. ಹಿರಿಯ ಆಟಗಾರರ ಜೊತೆ ವಿದೇಶಕ್ಕೆ ಪ್ರಯಾಣಿಸುವಾಗ ಆತನಿಗೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಆತ ಅಪರಿಚಿತ ಜಾಗದಲ್ಲಿ ಏಕಾಂಗಿತನ ಅನುಭವಿಸಬಾರದು ಮತ್ತು ಸಂಪೂರ್ಣವಾಗಿ ತನ್ನ ಆಟದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲು ಸಾಧ್ಯವಾಗಬೇಕು ಎನ್ನುವ ಉದ್ದೇಶದಿಂದ ಪೋಷಕರನ್ನು ಜೊತೆಗೆ ಕಳುಹಿಸಲು ನಿರ್ಧರಿಸಲಾಗಿದೆ. ಅವರ ಎಲ್ಲಾ ಪ್ರಯಾಣ ಹಾಗೂ ವಾಸ್ತವ್ಯದ ವೆಚ್ಚವನ್ನು ಬಿಸಿಸಿಐ ಭರಿಸಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ, ದಿಗ್ಗಜ ಬೌಲರ್‌ಗಳ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಹಲವು ದಾಖಲೆಗಳನ್ನು ಬರೆದಿದ್ದರು. ತಮ್ಮ ಅಪ್ರತಿಮ ಪ್ರದರ್ಶನದ ಮೂಲಕ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದ ವೈಭವ್, ಇದೀಗ ಟೀಂ ಇಂಡಿಯಾ ಪರ ಅಬ್ಬರಿಸಲು ಸಜ್ಜಾಗಿದ್ದಾರೆ. ಸದ್ಯ ಭಾರತ 'ಎ' ತಂಡದೊಂದಿಗೆ ಶ್ರೀಲಂಕಾ ಪ್ರವಾಸದಲ್ಲಿರುವ ವೈಭವ್, ಅಲ್ಲಿಂದ ನೇರವಾಗಿ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಪ್ರವಾಸಕ್ಕಾಗಿ ಸೀನಿಯರ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

Category
ಕರಾವಳಿ ತರಂಗಿಣಿ