image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ತಮಿಳುನಾಡಿನಲ್ಲಿ ಸಿಎಂ ವಿಜಯ್ ಭರ್ಜರಿ ಆ್ಯಕ್ಷನ್: ಅಕ್ರಮ ದಂಧೆಗೆ ಕಡಕ್ ಬ್ರೇಕ್

ತಮಿಳುನಾಡಿನಲ್ಲಿ ಸಿಎಂ ವಿಜಯ್ ಭರ್ಜರಿ ಆ್ಯಕ್ಷನ್: ಅಕ್ರಮ ದಂಧೆಗೆ ಕಡಕ್ ಬ್ರೇಕ್

ಚೆನ್ನೈ : ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ನಟ ಹಾಗೂ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಭರ್ಜರಿ ಆ್ಯಕ್ಷನ್ ಆರಂಭಿಸಿದ್ದಾರೆ. ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲೇ ಸರ್ಕಾರಿ ಸ್ವಾಮ್ಯದ ಮದ್ಯದ ಮಳಿಗೆಗಳಾದ 'ಟಾಸ್ಮಾಕ್' (TASMAC) ಮೇಲೆ ತೀವ್ರ ನಿಗಾ ಇಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮದ್ಯ ಮಾರಾಟದಿಂದ ಬರುವ ಪ್ರತಿಯೊಂದು ರೂಪಾಯಿಯೂ ನೇರವಾಗಿ ಸರ್ಕಾರದ ಖಜಾನೆಗೇ ಸೇರಬೇಕು, ಎಲ್ಲೂ ಲೀಕೇಜ್ ಆಗಬಾರದು ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಟಾಸ್ಮಾಕ್ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟದ ಜಾಲದಲ್ಲಿ ರಾಜಕೀಯ ಪಕ್ಷಗಳ ಹೆಸರಿನಲ್ಲಿ ಅನಧಿಕೃತವಾಗಿ ಭಾರಿ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ, ಪ್ರತಿ ತಿಂಗಳು ಸುಮಾರು 102 ಕೋಟಿ ರೂಪಾಯಿ ಹಣ 'ಪಾರ್ಟಿ ಫಂಡ್' ಹೆಸರಿನಲ್ಲಿ ಬೇರೆ ಕಡೆಗೆ ಡೈವರ್ಟ್ ಆಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ವಿಜಯ್ ಅವರಿಗೆ ಸಿಕ್ಕಿದೆ. ಕಳೆದ 5 ವರ್ಷಗಳ ಡಿಎಂಕೆ ಸರ್ಕಾರದ ಅವಧಿಯಲ್ಲಿ ಬರೋಬ್ಬರಿ 1,600 ಕೋಟಿ ರೂಪಾಯಿ ಸರ್ಕಾರಿ ಹಣ ಈ ರೀತಿ ದುರ್ಬಳಕೆಯಾಗಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಸದ್ಯ 4,048 ಅಧಿಕೃತ ಮದ್ಯದ ಅಂಗಡಿಗಳಿದ್ದು, ಇವುಗಳ ಮೂಲಕ ನಡೆಯುತ್ತಿದ್ದ ಅನಧಿಕೃತ ನಗದು ವಸೂಲಿ ದಂಧೆಯನ್ನು ತಕ್ಷಣವೇ ಧ್ವಂಸಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಟಾಸ್ಮಾಕ್ ಪೂರೈಕೆ ಜಾಲದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಬೇರೂರಿದ್ದ ಈ ಅಕ್ರಮ ವ್ಯವಸ್ಥೆಯಲ್ಲಿ ಸಾಮಾನ್ಯ ಮದ್ಯದ ಪ್ರತಿ ಬಾಕ್ಸ್‌ಗೆ 90 ರೂ., ಬಿಯರ್ ಬಾಕ್ಸ್‌ಗೆ 40 ರೂ. ಹಾಗೂ ವೈನ್ ಬಾಕ್ಸ್‌ಗೆ 20 ರೂ. ನಂತೆ ವಸೂಲಿ ಮಾಡಲಾಗುತ್ತಿತ್ತು. ರಾಜ್ಯದ ಸುಮಾರು 88 ಲಕ್ಷ ಗ್ರಾಹಕರಿಂದ ಈ ರೀತಿ ಹಣ ಲೂಟಿ ಮಾಡಲಾಗುತ್ತಿತ್ತು ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.

ವಿಜಯ್ ಅವರ ಈ ಮಹತ್ವದ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ ಜವಾಬ್ದಾರಿ ಈಗ ಹೊಸ ಅಬಕಾರಿ ಸಚಿವ ಕೆ. ವಿಘ್ನೇಶ್ ಹೆಗಲಿಗೆ ಬಿದ್ದಿದೆ. 37 ವರ್ಷದ ವಿಘ್ನೇಶ್ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದವರಾಗಿದ್ದು, ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಇವರ ಪೋಷಕರು ಹಿಂದೆ ಚಹಾ ಅಂಗಡಿ ನಡೆಸುತ್ತಿದ್ದರು. ಬಳಿಕ ಕೇಬಲ್ ವ್ಯವಹಾರ ನಡೆಸಿ, ನಂತರ ರಾಜಕೀಯಕ್ಕೆ ಬಂದ ವಿಘ್ನೇಶ್ ಅವರಿಗೆ ಸಿಎಂ ವಿಜಯ್ ಅತ್ಯಂತ ಪ್ರಮುಖ ಖಾತೆಯ ಜವಾಬ್ದಾರಿ ನೀಡಿ ಭ್ರಷ್ಟಾಚಾರ ಮುಕ್ತ ಆಡಳಿತದ ಟಾಸ್ಕ್ ಕೊಟ್ಟಿದ್ದಾರೆ.

ಇದೇ ವೇಳೆ ಟಾಸ್ಮಾಕ್ ಮಳಿಗೆಗಳಲ್ಲಿ ಜಾರಿಯಲ್ಲಿದ್ದ '10 ರೂಪಾಯಿ ಖಾಲಿ ಬಾಟಲಿ ಠೇವಣಿ ಯೋಜನೆ'ಯಲ್ಲೂ ಕೋಟ್ಯಂತರ ರೂಪಾಯಿ ಲೂಟಿಯಾಗುತ್ತಿರುವುದು ಪತ್ತೆಯಾಗಿದೆ. ಗ್ರಾಹಕರು ಮದ್ಯ ಖರೀದಿಸುವಾಗ ಪ್ರತಿ ಬಾಟಲಿಗೆ 10 ರೂ. ಹೆಚ್ಚುವರಿ ಠೇವಣಿ ನೀಡಿ, ಬಾಟಲಿ ಮರಳಿ ಕೊಟ್ಟಾಗ ಅದನ್ನು ವಾಪಸ್ ಪಡೆಯಬೇಕಿತ್ತು. ರಾಜ್ಯದಲ್ಲಿ ತಿಂಗಳಿಗೆ ಸುಮಾರು 1 ಕೋಟಿ ಬಾಟಲಿಗಳು ಮಾರಾಟವಾಗುತ್ತವೆ. ಆದರೆ, ಇದರಲ್ಲಿ ಕೇವಲ ಶೇ. 60ರಷ್ಟು ಬಾಟಲಿಗಳು ಮಾತ್ರ ಮರಳಿ ವ್ಯವಸ್ಥೆಗೆ ಬರುತ್ತಿದ್ದವು. ಉಳಿದ ಶೇ. 40ರಷ್ಟು ಬಾಟಲಿಗಳ ಹಣದ ಲೆಕ್ಕವೇ ಸಿಗುತ್ತಿರಲಿಲ್ಲ. ಈ ಒಂದು ಸಣ್ಣ ದಂಧೆಯಿಂದಲೇ ತಿಂಗಳಿಗೆ 300 ಕೋಟಿ ರೂ. ಅಕ್ರಮ ವ್ಯವಹಾರ ನಡೆಯುತ್ತಿತ್ತು ಎನ್ನಲಾಗಿದೆ. ಹೀಗಾಗಿ ಈ ಲೀಕೇಜ್ ತಡೆಯಲು ಸಿಎಂ ವಿಜಯ್ ಡಿಜಿಟಲ್ ರಿಫಂಡ್ ವ್ಯವಸ್ಥೆ ತರಲು ಮುಂದಾಗಿದ್ದು, ಜೂನ್ ಅಂತ್ಯದೊಳಗೆ ಇದನ್ನು ಹೊರಗುತ್ತಿಗೆ ಏಜೆನ್ಸಿಗಳಿಗೆ ವಹಿಸಲು ನಿರ್ಧರಿಸಿದ್ದಾರೆ.

Category
ಕರಾವಳಿ ತರಂಗಿಣಿ