image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ತಪ್ಪಿಸಲು ಟಿವಿಕೆಗೆ ಮೈತ್ರಿ ಪಕ್ಷಗಳ ಬೆಂಬಲ: ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಸ್ಪಷ್ಟನೆ

ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ತಪ್ಪಿಸಲು ಟಿವಿಕೆಗೆ ಮೈತ್ರಿ ಪಕ್ಷಗಳ ಬೆಂಬಲ: ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಸ್ಪಷ್ಟನೆ

ಚೆನ್ನೈ : ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವುದನ್ನು ತಪ್ಪಿಸುವ ಏಕೈಕ ಉದ್ದೇಶದಿಂದಾಗಿ ನಮ್ಮ ಮೈತ್ರಿ ಪಕ್ಷಗಳು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ರಚಿಸಲು ಬೆಂಬಲ ನೀಡಲು ನಾವು ಅವಕಾಶ ಮಾಡಿಕೊಟ್ಟೆವು ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ. ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾದ ಎಐಎಡಿಎಂಕೆ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದ ಅವರು ಈ ಮಹತ್ವದ ರಾಜಕೀಯ ಬೆಳವಣಿಗೆಯ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ನಮ್ಮ ಮೈತ್ರಿ ಪಕ್ಷವು ತಮ್ಮ ಮುಂದಿನ ಯೋಜನೆಯನ್ನು ತಿಳಿಸಿತು. ಆ ಸಂದರ್ಭದಲ್ಲಿ ನಾವು, "ನೀವು (ಕಾಂಗ್ರೆಸ್) ಹೋಗಬೇಕೆಂದಿದ್ದರೆ ಹೋಗಬಹುದು, ಇದು ನಿಮ್ಮ ವೈಯಕ್ತಿಕ ಆಯ್ಕೆ ಮತ್ತು ಪ್ರಜಾಪ್ರಭುತ್ವದ ಹಕ್ಕು. ನಾವು ನಿಮ್ಮನ್ನು ತಡೆಯುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದೆವು ಎಂದು ಸ್ಟಾಲಿನ್ ಹೇಳಿದ್ದಾರೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬಂದರೆ, ಅದು ಪರೋಕ್ಷವಾಗಿ ತಮಿಳುನಾಡಿನಲ್ಲಿ ಬಿಜೆಪಿ ಆಳ್ವಿಕೆಗೆ ದಾರಿ ಮಾಡಿಕೊಡಬಹುದು ಎಂಬ ಆತಂಕ ನಮಗಿತ್ತು. ಈ ಏಕೈಕ ಕಾರಣಕ್ಕಾಗಿ ನಾವು ಮೈತ್ರಿ ಪಕ್ಷಕ್ಕೆ ಈ ನಿರ್ಧಾರ ತೆಗೆದುಕೊಳ್ಳಲು ಸಮ್ಮತಿಸಿದೆವು. ಇಂದು ರಾಜ್ಯದಲ್ಲಿ ಟಿವಿಕೆ ಸರ್ಕಾರ ಅಧಿಕಾರದಲ್ಲಿದೆ ಎಂದರೆ, ಅದು ಕೇವಲ ನಮ್ಮ ಮೈತ್ರಿಯ ಭಾಗವಾಗಿದ್ದ ಪಕ್ಷಗಳ ಬೆಂಬಲದಿಂದ ಮಾತ್ರ ಸಾಧ್ಯವಾಗಿದೆ. ಡಿಎಂಕೆ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂಬ ಮೂಲ ಉದ್ದೇಶದಿಂದಲೇ ಆ ಪಕ್ಷಗಳು ಚುನಾವಣಾ ಪೂರ್ವದಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದವು ಎಂದು ಅವರು ನೆನಪಿಸಿಕೊಂಡರು. ಈ ನಿರ್ಧಾರದ ಕುರಿತು ಮೈತ್ರಿ ಪಕ್ಷದ ನಾಯಕರು ಕೂಡ ಹಲವು ವೇದಿಕೆಗಳಲ್ಲಿ ಡಿಎಂಕೆ ಅಧ್ಯಕ್ಷರ ಗಮನಕ್ಕೆ ತಂದೇ ಟಿವಿಕೆ ಸರ್ಕಾರ ರಚನೆಗೆ ಬೆಂಬಲ ನೀಡಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ ಎಂದರು.

ರಾಜಕಾರಣದಲ್ಲಿ ಯಶಸ್ಸು ಮತ್ತು ವೈಫಲ್ಯ ಎಂಬುದು ಸಹಜ ಪ್ರಕ್ರಿಯೆ. ಗೆಲುವು ಸಿಕ್ಕಾಗ ನಾವು ಬೀಗಲಿಲ್ಲ, ಇಂದು ಸೋತಿದ್ದೇವೆ ಎಂದು ಕುಗ್ಗುವ ಪ್ರಶ್ನೆಯೇ ಇಲ್ಲ. ನಾವು ಅಧಿಕಾರ ರಚಿಸುವ ಅವಕಾಶವನ್ನು ಕಳೆದುಕೊಂಡಿರಬಹುದು. ಆದರೆ, ಸಮರ್ಥ ವಿರೋಧ ಪಕ್ಷದ ಸ್ಥಾನದಲ್ಲಿದ್ದುಕೊಂಡು ಜನರಿಗಾಗಿ ನಮ್ಮ ಸೇವೆಯನ್ನು ನಿರಂತರವಾಗಿ ಮುಂದುವರೆಸಲಿದ್ದೇವೆ ಎಂದು ಸ್ಟಾಲಿನ್ ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಸರ್ಕಾರ ರಚನೆಗೆ ಅಲ್ಪ ಬಹುಮತದ ಹಿನ್ನಡೆ ಅನುಭವಿಸಿತ್ತು. ಆ ಸಮಯದಲ್ಲಿ ಡಿಎಂಕೆಯ ಚುನಾವಣಾ ಪೂರ್ವ ಒಕ್ಕೂಟದಲ್ಲಿದ್ದ ಕಾಂಗ್ರೆಸ್ ಪಕ್ಷವು ಮೈತ್ರಿಯಿಂದ ಹೊರಬಂದು ವಿಜಯ್ ಸರ್ಕಾರ ರಚನೆಗೆ ಬೆಂಬಲ ನೀಡಿತು. ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳ ಪೈಕಿ ಟಿವಿಕೆ 108 ಸ್ಥಾನಗಳನ್ನು ಗೆದ್ದುಕೊಂಡಿತ್ತಾದರೂ, ಮ್ಯಾಜಿಕ್ ನಂಬರ್ 118 ತಲುಪಲು ವಿಫಲವಾಗಿತ್ತು. ಈ ವೇಳೆ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟದ ಮಿತ್ರಪಕ್ಷಗಳಾಗಿದ್ದ ಕಾಂಗ್ರೆಸ್ (5), ಸಿಪಿಐ-ಎಂ (2), ಸಿಪಿಐ (2), ವಿಸಿಕೆ (2) ಮತ್ತು ಐಯುಎಂಎಲ್ (2) ಪಕ್ಷಗಳು ವಿಜಯ್‌ ಸರ್ಕಾರಕ್ಕೆ ಆಸರೆಯಾದವು. ಇದರಿಂದಾಗಿ ಟಿವಿಕೆ ಸುಲಭವಾಗಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಲು ಸಾಧ್ಯವಾಯಿತು.

Category
ಕರಾವಳಿ ತರಂಗಿಣಿ