ನವದೆಹಲಿ : ಜಾಗತಿಕ ಬಿಕ್ಕಟ್ಟಿನ ನಡುವೆ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆ ಹುಟ್ಟುಹಾಕಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ (EAC-PM) ಸದಸ್ಯೆ ಡಾ. ಶಮಿಕಾ ರವಿ ಮತ್ತು ಆರ್ಥಿಕ ತಜ್ಞೆ ಸಂಜು ವರ್ಮಾ ಅವರ ವಿಶ್ಲೇಷಣೆಗಳು ಈ ಕುಸಿತದ ಹಿಂದಿರುವ ಆರ್ಥಿಕ ತರ್ಕವನ್ನು ಬೇರೆದೇ ಕೋನದಲ್ಲಿ ಪರಿಚಯಿಸಿವೆ. "ರೂಪಾಯಿ 100ರ ಗಡಿ ಮುಟ್ಟಿದರೆ ಏನಂತೆ? ಅದು ಕೇವಲ ಒಂದು ಸಂಖ್ಯೆ ಅಷ್ಟೇ" ಎನ್ನುವ ಇವರ ವಾದದ ಹಿಂದಿನ ಅಸಲಿ ಆರ್ಥಿಕ ಚಿತ್ರಣ ಇಲ್ಲಿದೆ.
ಡಾ. ಶಮಿಕಾ ರವಿ ಅವರ ಪ್ರಕಾರ, ವಿನಿಮಯ ದರ ಎಂಬುದು ಆರ್ಥಿಕತೆಯ 'ಪ್ರೆಶರ್ ಕುಕ್ಕರ್ ವಾಲ್ವ್' ಇದ್ದಂತೆ. ಜಾಗತಿಕ ಮಾರುಕಟ್ಟೆಯಲ್ಲಿ ಸಪ್ಲೈ ಶಾಕ್ ಅಥವಾ ಪೂರೈಕೆ ಬಿಕ್ಕಟ್ಟು ಎದುರಾದಾಗ ಸೃಷ್ಟಿಯಾಗುವ ಒತ್ತಡವನ್ನು ಹೊರಹಾಕಲು ರೂಪಾಯಿ ಮೌಲ್ಯದ ಮುಕ್ತ ಏರಿಳಿತ ಸಹಕಾರಿಯಾಗುತ್ತದೆ. ರಿಸರ್ವ್ ಬ್ಯಾಂಕ್ (RBI) ಅಥವಾ ಸರ್ಕಾರವು ಬಲವಂತವಾಗಿ ರೂಪಾಯಿ ಮೌಲ್ಯವನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ ಹಿಡಿದಿಟ್ಟುಕೊಳ್ಳಲು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿದರೆ, ಅದು ದೇಶೀಯವಾಗಿ ಭಾರಿ ಹಣದುಬ್ಬರ ಮತ್ತು ಆರ್ಥಿಕ ಗೊಂದಲಗಳಿಗೆ ಕಾರಣವಾಗಬಹುದು. ಪ್ರಸ್ತುತ ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಸ್ಟ್ರೈಟ್ ಆಫ್ ಹಾರ್ಮುಜ್ ಜಲಮಾರ್ಗ ಬ್ಲಾಕ್ ಆಗಿ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಭಾರತವು ತನ್ನ 88% ಕಚ್ಚಾ ತೈಲ ಮತ್ತು ಅರ್ಧದಷ್ಟು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಈ ಬಾಹ್ಯ ಬಿಕ್ಕಟ್ಟು ರೂಪಾಯಿಯ ಮೇಲೆ ಒತ್ತಡ ಹೇರುತ್ತಿದೆಯೇ ಹೊರತು, ಇದು ದೇಶೀಯ ಆರ್ಥಿಕ ವೈಫಲ್ಯವಲ್ಲ ಎನ್ನುವುದು ಅವರ ಸ್ಪಷ್ಟನೆ. ಯುಎಇ ಜೊತೆಗಿನ ಇಂಧನ ಒಪ್ಪಂದಗಳು ದೀರ್ಘಾವಧಿಯಲ್ಲಿ ವಿದೇಶಿ ವಿನಿಮಯ ನಿಧಿಯನ್ನು (Forex Reserves) ಮತ್ತೆ ತುಂಬಿಸಲು ನೆರವಾಗಲಿವೆ.
ಮತ್ತೊಂದೆಡೆ, ಆರ್ಥಿಕ ತಜ್ಞೆ ಸಂಜು ವರ್ಮಾ ಅವರು ರೂಪಾಯಿ ಕುಸಿತದಿಂದ ಭಾರತದ ರಫ್ತು ವಲಯಕ್ಕೆ ಸಿಗಲಿರುವ ಬೂಸ್ಟ್ ಅನ್ನು ಎತ್ತಿ ತೋರಿಸಿದ್ದಾರೆ. ರೂಪಾಯಿ ಮೌಲ್ಯ ಕ್ರಮೇಣ ಕುಸಿಯುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಸರಕುಗಳು ಅಗ್ಗವಾಗುತ್ತವೆ. ಇದು ದೇಶದ ಉತ್ಪಾದನಾ ಕ್ಷೇತ್ರ (Manufacturing), ಮಾಹಿತಿ ತಂತ್ರಜ್ಞಾನ (IT), ಫಾರ್ಮಾಸ್ಯುಟಿಕಲ್ಸ್ ಮತ್ತು ಕೃಷಿ ರಫ್ತುದಾರರಿಗೆ ಭಾರಿ ಲಾಭ ತಂದುಕೊಡಲಿದೆ. ಇದರೊಂದಿಗೆ ವಿದೇಶಿ ಪ್ರವಾಸಿಗರಿಗೆ ಭಾರತದಲ್ಲಿ ಪ್ರಯಾಣಿಸುವುದು ಅಗ್ಗವಾಗುವುದರಿಂದ ಪ್ರವಾಸೋದ್ಯಮವೂ (Tourism) ವೇಗವಾಗಿ ಬೆಳೆಯಲಿದೆ.
ಭಾರತದ ಆರ್ಥಿಕ ಅಡಿಪಾಯ ಪ್ರಸ್ತುತ ಅತ್ಯಂತ ಸದೃಢವಾಗಿದೆ. ದೇಶದ ಹಣಕಾಸಿನ ಕೊರತೆ (Fiscal Deficit) 4.4% ನಷ್ಟಿದ್ದರೆ, ಚಾಲ್ತಿ ಖಾತೆ ಕೊರತೆ (CAD) 1% ಕ್ಕಿಂತ ಕಡಿಮೆ ಇದೆ ಮತ್ತು ಚಿಲ್ಲರೆ ಹಣದುಬ್ಬರ (Retail Inflation) 4% ಕ್ಕಿಂತ ಕೆಳಗಿದೆ. ಈ ಬಲಿಷ್ಠ ಮ್ಯಾಕ್ರೋ-ಎಕನಾಮಿಕ್ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ, ಜಾಗತಿಕ ಬಿಕ್ಕಟ್ಟುಗಳನ್ನು ಎದುರಿಸಲು ಪ್ರಧಾನಿ ಮೋದಿ ಅವರು ಜವಾಬ್ದಾರಿಯುತ ಜೀವನಶೈಲಿ ಮತ್ತು ಮಿತವ್ಯಯದ ಮಂತ್ರವನ್ನು ನೀಡಿದ್ದಾರೆ. ಹೀಗಾಗಿ, ರೂಪಾಯಿ ಮೌಲ್ಯ 100ರ ಗಡಿ ತಲುಪಿದರೂ ಪ್ಯಾನಿಕ್ ಆಗುವ ಅಗತ್ಯವಿಲ್ಲ ಮತ್ತು ಭಾರತದ ಆರ್ಥಿಕ ಬೆಳವಣಿಗೆಯ ವೇಗ ನಿರಂತರವಾಗಿ ಮುಂದುವರಿಯಲಿದೆ ಎನ್ನುವುದು ಈ ತಜ್ಞರ ಜಂಟಿ ವಿಶ್ಲೇಷಣೆಯ ಸಾರವಾಗಿದೆ.