image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಿಜೆಪಿಗೆ ಗುಡ್‌ಬೈ ಹೇಳಿ ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾದ ‘ಸಿಂಗಂ’ ಅಣ್ಣಾಮಲೈ

ಬಿಜೆಪಿಗೆ ಗುಡ್‌ಬೈ ಹೇಳಿ ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾದ ‘ಸಿಂಗಂ’ ಅಣ್ಣಾಮಲೈ

ಚೆನ್ನೈ : ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ತಮ್ಮ ರಾಜಕೀಯ ಭವಿಷ್ಯದ ಕುರಿತು ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ. ತಮಿಳುನಾಡಿನಲ್ಲಿ ಕಮಲ ಪಾಳಯವನ್ನು ಅಧಿಕಾರಕ್ಕೆ ತರಬೇಕೆಂಬ ಕನಸು ಕಂಡಿದ್ದ ಅವರು, ಈಗ ಆ ಪಕ್ಷಕ್ಕೆ ರಾಜೀನಾಮೆ ನೀಡಿ ಹೊಸ ಪ್ರಾದೇಶಿಕ ಪಕ್ಷವನ್ನು ಕಟ್ಟಲು ನಿರ್ಧರಿಸಿದ್ದಾರೆ. ಜೂನ್ 5ರ ಶುಕ್ರವಾರದಂದು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿ, ತಮಿಳುನಾಡು ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳಿಗೆ ನಾಂದಿ ಹಾಡಿದ್ದಾರೆ.

ಯುವಕರು ಮತ್ತು ಸಮಾಜದ ಎಲ್ಲಾ ವರ್ಗದ ಜನರನ್ನು ಒಳಗೊಂಡ ಹೊಸ ರಾಜಕೀಯ ಪಕ್ಷವನ್ನು ತಾವು ಸ್ಥಾಪಿಸುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಕಳೆದ 18 ತಿಂಗಳುಗಳಿಂದ ಬಿಜೆಪಿಯಲ್ಲಿ ಅತ್ಯಂತ ತಾಳ್ಮೆಯಿಂದ ಕೆಲಸ ಮಾಡಿದ್ದಾಗಿ ತಿಳಿಸಿರುವ ಅವರು, ತಮಿಳುನಾಡು ವಿಧಾನಸಭಾ ಚುನಾವಣೆ ಮುಕ್ತಾಯದ ನಂತರ ಗೌರವಯುತವಾಗಿ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಸದ್ಯ ತಮಿಳುನಾಡಿನ ರಾಜಕೀಯ ವ್ಯವಸ್ಥೆಗೆ ಹೊಸದೊಂದು ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ ಎನ್ನುವುದು ಅವರ ಅಭಿಮತವಾಗಿದೆ.

ಜನಸಾಮಾನ್ಯರ ಹಿತಕ್ಕಾಗಿಯೇ ಶ್ರಮಿಸುವ 'ಕಾಮನ್‌ಮನ್' ಪಾಲಿಟಿಕ್ಸ್ ಅನ್ನು ತರಲಿಚ್ಛಿಸಿರುವ ಅಣ್ಣಾಮಲೈ, ತಮಿಳುನಾಡಿಗೆ ಸದ್ಯ ಶುದ್ಧ ಮತ್ತು ದಕ್ಷ ನಾಯಕರ ಅಗತ್ಯವಿದೆ ಎಂದಿದ್ದಾರೆ. ಕೇವಲ ಒಬ್ಬ ಮುಖ್ಯಮಂತ್ರಿಯಿಂದಾಗಲಿ ಅಥವಾ ಒಂದು ನಿರ್ದಿಷ್ಟ ಕುಟುಂಬದಿಂದಾಗಲಿ ತಮಿಳುನಾಡಿನ ಸಮಗ್ರ ಬದಲಾವಣೆ ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದಿರುವ ಅವರು, ತಮಿಳು ರಾಜಕೀಯದಲ್ಲಿ ಬೆಳೆದುಬಂದಿರುವ 'ನಿರಂತರ ನಾಯಕರು' ಎಂಬ ಸಾಂಪ್ರದಾಯಿಕ ಪದ್ಧತಿಗೆ ತಿಲಾಂಜಲಿ ಹಾಡಬೇಕಿದೆ ಎಂದು ಕರೆ ನೀಡಿದ್ದಾರೆ. ಇವರ ಹೊಸ ಪಕ್ಷವು ಪ್ರಮುಖವಾಗಿ ತಮಿಳು ತತ್ವಶಾಸ್ತ್ರ ಹಾಗೂ ಸಿದ್ಧಾಂತಗಳ ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ನವದೆಹಲಿಗೆ ತೆರಳಿದ್ದ ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಸುದೀರ್ಘ 5 ಪುಟಗಳ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದರು. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಆರ್‌ಎಸ್‌ಎಸ್ ಸೇರಿದಂತೆ ಪ್ರಮುಖ ನಾಯಕರು ನಡೆಸಿದ ಸಂಧಾನ ಯತ್ನಗಳು ಸಫಲವಾಗಲಿಲ್ಲ. ಅಂತಿಮವಾಗಿ ಅವರ ಬೇಡಿಕೆ ಹಾಗೂ ನಿಲುವಿಗೆ ಒಪ್ಪಿದ ಬಿಜೆಪಿ ಹೈಕಮಾಂಡ್, ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಇದಕ್ಕೂ ಮುನ್ನ ಅವರನ್ನು ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಚಿಂತನೆ ನಡೆಸಿತ್ತಾದರೂ, ಅವರು ಪಕ್ಷ ತೊರೆಯುವ ಸುಳಿವು ಸಿಕ್ಕಿದ್ದರಿಂದ ಆ ಲೆಕ್ಕಾಚಾರ ಕೈಬಿಡಲಾಗಿದೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ ಖ್ಯಾತ ನಟ ವಿಜಯ 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಸ್ಥಾಪಿಸಿ ಕೇವಲ ಎರಡು ವರ್ಷಗಳಲ್ಲಿ ಭಾರಿ ಜನಮನ್ನಣೆ ಹಾಗೂ ರಾಜಕೀಯ ಗೆಲುವು ಸಾಧಿಸಿದ ಬೆನ್ನಲ್ಲೇ ತಮಿಳುನಾಡಿನ ರಾಜಕೀಯ ಸಮೀಕರಣಗಳು ಬದಲಾಗಿವೆ. ತಮಿಳುನಾಡಿನ ಜನತೆ ಹೊಸ ಪ್ರಾದೇಶಿಕ ಪಕ್ಷಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾರೆ, ಆದರೆ ಅಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ನೆಲೆ ಕಂಡುಕೊಳ್ಳುವುದು ಕಷ್ಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಣ್ಣಾಮಲೈ ಅವರಿಗೆ ತಮಿಳುನಾಡಿನಲ್ಲಿ ಅಪಾರ ಜನಪ್ರಿಯತೆ ಇದ್ದರೂ, ಬಿಜೆಪಿಯಲ್ಲಿದ್ದುಕೊಂಡು ಅದನ್ನು ರಾಜಕೀಯ ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಕರ್ನಾಟಕದ ಮಾಜಿ 'ಸಿಂಗಂ' ಐಪಿಎಸ್ ಅಧಿಕಾರಿ ಈಗ ಕೇಸರಿ ಪಾಳಯದಿಂದ ಹೊರಬಂದು ಸ್ವತಂತ್ರವಾಗಿ ಪ್ರಾದೇಶಿಕ ಅಸ್ತಿತ್ವ ಕಂಡುಕೊಳ್ಳಲು ಈ ಮಹತ್ವದ ನಿರ್ಧಾರ ತಳೆದಿದ್ದಾರೆ.

Category
ಕರಾವಳಿ ತರಂಗಿಣಿ