ನವದೆಹಲಿ : ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಾ ದೇಶ ತೊರೆದು ವಿದೇಶದಲ್ಲಿ ನೆಲೆಸಿರುವ ಐಪಿಎಲ್ (IPL) ಜನಕ ಲಲಿತ್ ಮೋದಿ ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಐಪಿಎಲ್ ಮತ್ತು ಭೂಗತ ಜಗತ್ತಿನ ನಡುವಿನ ಸಂಬಂಧದ ಬಗ್ಗೆ ಕೆಲವು ಸ್ಫೋಟಕ ಹಾಗೂ ಆಘಾತಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಮ್ಯಾಚ್ ಫಿಕ್ಸಿಂಗ್ ವಿರುದ್ಧ ತಾವು ತಳೆದ ಅಚಲ ನಿಲುವುಗಳಿಂದಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ 'ಡಿ ಕಂಪನಿ'ಯಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಎದುರಾಗಿದ್ದ ಪ್ರಾಣ ಬೆದರಿಕೆಗಳ ಬಗ್ಗೆ ಲಲಿತ್ ಮೋದಿ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ದಾವೂದ್ ಇಬ್ರಾಹಿಂ ಮತ್ತು ಆತನ ಗ್ಯಾಂಗ್‌ನಿಂದ ಬಂದ ಕೊಲೆ ಬೆದರಿಕೆಗಳಿಂದಾಗಿಯೇ ತಾವು ಕ್ರಿಕೆಟ್‌ನಿಂದ ದೂರವಾಗಬೇಕಾಯಿತು ಎಂದು ಮೋದಿ ಹೇಳಿದ್ದಾರೆ. ಆ ದಿನಗಳಲ್ಲಿ ದಾವೂದ್ ಇಬ್ರಾಹಿಂ ಕ್ರಿಕೆಟ್ ಬೆಟ್ಟಿಂಗ್ ನಿಯಂತ್ರಿಸುತ್ತಿದ್ದ ಒಬ್ಬ ಕುಖ್ಯಾತ ಬುಕ್ಕಿಯಾಗಿದ್ದ. ಆಗ ಸುಮಾರು 2 ಬಿಲಿಯನ್ ಡಾಲರ್ ಇದ್ದ ಭೂಗತ ಬೆಟ್ಟಿಂಗ್ ವ್ಯವಹಾರ, ಇಂದು ಪ್ರತಿ ಪಂದ್ಯಕ್ಕೆ 4 ಬಿಲಿಯನ್ ಡಾಲರ್ ತಲುಪಿದೆ. ಈಗ ಯಾರೂ ಇಡೀ ಪಂದ್ಯವನ್ನು ಫಿಕ್ಸ್ ಮಾಡಲು ಹೋಗುವುದಿಲ್ಲ, ಬದಲಿಗೆ ಪ್ರತಿ ಚೆಂಡು ಅಥವಾ ಓವರ್‌ಗಳನ್ನು ಫಿಕ್ಸಿಂಗ್ (ಸ್ಪಾಟ್ ಫಿಕ್ಸಿಂಗ್) ಮಾಡಲಾಗುತ್ತದೆ. ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ತಾವು ಮ್ಯಾಚ್ ಫಿಕ್ಸಿಂಗ್ ವಿರುದ್ಧ ಕಠಿಣ ನಿಲುವು ಹೊಂದಿದ್ದರಿಂದ ದಾವೂದ್‌ನ ಶತಕೋಟಿ ಡಾಲರ್ ಅಕ್ರಮ ಬೆಟ್ಟಿಂಗ್ ಸಾಮ್ರಾಜ್ಯಕ್ಕೆ ಭಾರಿ ಹೊಡೆತ ಬಿದ್ದಿತ್ತು ಎಂದು ಅವರು ವಿವರಿಸಿದ್ದಾರೆ.
ತಾವು ಬೆಟ್ಟಿಂಗ್ ವಿರೋಧಿಸಿದ್ದಕ್ಕಾಗಿ ಎರಡನೇ ಆವೃತ್ತಿಯ ಐಪಿಎಲ್ ಅನ್ನು ನಡೆಸಲು ಬಿಡುವುದಿಲ್ಲ ಎಂದು ದಾವೂದ್ ಗ್ಯಾಂಗ್ ಬೆದರಿಕೆ ಹಾಕಿತ್ತು. ಈ ಕಾರಣದಿಂದ ಮುಂಬೈ ಪೊಲೀಸರು ತಮಗೆ ಝಡ್-ಭದ್ರತೆಯನ್ನು ನೀಡಿದ್ದರು. ಮುಂಬೈನಲ್ಲಿರುವ ತಮ್ಮ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ಅಷ್ಟೇ ಅಲ್ಲದೆ, ಕೇಪ್ ಟೌನ್, ಜೋಹಾನ್ಸ್‌ಬರ್ಗ್ ಮತ್ತು ಮಾಂಟೆನೆಗ್ರೊದಲ್ಲಿಯೂ ತಮ್ಮ ಮೇಲೆ ಕೊಲೆ ದಾಳಿಗಳು ನಡೆದಿದ್ದವು. ಬೆದರಿಕೆಗಳು ಅಲ್ಲಿಗೆ ನಿಲ್ಲದೆ, ಲಂಡನ್‌ನಲ್ಲಿ ತಮ್ಮ ಮಗನನ್ನು ಸಹ ಅಪಹರಿಸಲಾಗಿತ್ತು. ಐಪಿಎಲ್ ಪಂದ್ಯಾವಳಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿದಾಗ ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದವರಿಗೆ ಭಾರಿ ನಷ್ಟ ಉಂಟಾಗಿತ್ತು. ಹೀಗಾಗಿ ಅವರು ತಮ್ಮನ್ನು ನಷ್ಟ ಭರಿಸುವಂತೆ ಒತ್ತಾಯಿಸಿದ್ದರು, ಆದರೆ ತಾವು ಅದಕ್ಕೆ ಒಪ್ಪಿರಲಿಲ್ಲ ಎಂದು ಈವರೆಗೆ ಯಾರಿಗೂ ಹೇಳದ ರಹಸ್ಯವನ್ನು ಮೋದಿ ಬಿಚ್ಚಿಟ್ಟಿದ್ದಾರೆ. 2012ರಲ್ಲಿ ದೇಶ ತೊರೆದು ಲಂಡನ್‌ನಲ್ಲಿ ವಾಸಿಸುತ್ತಿದ್ದಾಗ ನಡೆದ ಮತ್ತೊಂದು ರೋಮಾಂಚನಕಾರಿ ಘಟನೆಯನ್ನು ಲಲಿತ್ ಮೋದಿ ನೆನಪಿಸಿಕೊಂಡಿದ್ದಾರೆ. ಪ್ರತೀ ಐಪಿಎಲ್ ಪಂದ್ಯದಲ್ಲೂ ಕಾಣಿಸಿಕೊಳ್ಳುವ ಲಂಡನ್ ಮೂಲದ ವ್ಯಕ್ತಿಯೊಬ್ಬ ಬೆಳಗಿನ ಜಾವ 3:30 ಕ್ಕೆ ಕರೆ ಮಾಡಿ, ತಕ್ಷಣವೇ 'ಬಾಬಾ' ಎಂಬುವವರನ್ನು ಭೇಟಿಯಾಗುವಂತೆ ತಿಳಿಸಿದ್ದ. ಅದರಂತೆ ಬಾಬಾ ಮನೆಗೆ ಹೋದಾಗ, ಆತ ತಮಗೆ ಐಪಿಎಲ್ ತಂಡವನ್ನು ಖರೀದಿಸಲು ಸಹಾಯ ಮಾಡುವಂತೆ ಕೇಳಿದ್ದ. ಅದಕ್ಕೆ ಲಲಿತ್ ಮೋದಿ, ತಾವು ಭಾರತದಲ್ಲಿ ಇಲ್ಲದಿರುವುದನ್ನು ಮತ್ತು ತಮಗೂ ದಾವೂದ್ ಇಬ್ರಾಹಿಂಗೂ ಇರುವ ಸಮಸ್ಯೆಯನ್ನು ವಿವರಿಸಿದ್ದರು.
ಆಗ ಆ ವ್ಯಕ್ತಿ, ಆ ಸಮಸ್ಯೆಯನ್ನು ಒಂದು ನಿಮಿಷದಲ್ಲಿ ಪರಿಹರಿಸುವುದಾಗಿ ಹೇಳಿ, ಮನೆಯ ಟೆರೇಸ್‌ಗೆ ಹೋಗಿ ಸ್ಯಾಟಲೈಟ್ ಫೋನ್ ಮೂಲಕ ನೇರವಾಗಿ ದಾವೂದ್‌ಗೆ ಕರೆ ಮಾಡಿದ್ದ. ಇದನ್ನು ನೋಡಿ ತಮಗೆ ಪ್ಯಾಂಟ್‌ನಲ್ಲೇ ಮೂತ್ರ ಬಂದಂತಾಗಿತ್ತು ಎಂದು ಲಲಿತ್ ಮೋದಿ ಒಪ್ಪಿಕೊಂಡಿದ್ದಾರೆ. ಆ ವ್ಯಕ್ತಿ ದಾವೂದ್ ಜೊತೆ ಮಾತನಾಡಿ ಫೋನನ್ನು ಲಲಿತ್ ಮೋದಿಗೆ ನೀಡಲು ಬಂದಾಗ, ಮೋದಿ ಮಾತನಾಡಲು ನಿರಾಕರಿಸಿದ್ದರು. ತಕ್ಷಣ ಆತ ಲೌಡ್ ಸ್ಫೀಕರ್ ಆನ್ ಮಾಡಿದಾಗ, ಆ ಕಡೆಯಿಂದ ಮಾತನಾಡಿದ ದಾವೂದ್, "ನೀವು ನಮ್ಮ ಸ್ನೇಹಿತ, ಹಿಂದೆ ನಡೆದ ಎಲ್ಲವನ್ನೂ ಮರೆತುಬಿಡಿ, ಮುಂದೆ ಎಲ್ಲವೂ ಸರಿಯಾಗುತ್ತದೆ" ಎಂದು ಹೇಳಿ ಫೋನ್ ಕಟ್ ಮಾಡಿದ್ದ. ಮನೆಗೆ ಬಂದ ತಕ್ಷಣ ಈ ವಿಷಯವನ್ನು ತಮ್ಮ ಮಡದಿ ಹಾಗೂ ಪೊಲೀಸರಿಗೆ ತಿಳಿಸಿದ್ದು, ಇದೆಲ್ಲವೂ ಪೊಲೀಸ್ ರೆಕಾರ್ಡ್‌ನಲ್ಲಿ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ. ಇದಾದ ಬಳಿಕ ದಾವೂದ್ ಇಬ್ರಾಹಿಂ ಸಂದರ್ಶನವೊಂದರಲ್ಲಿ ಲಲಿತ್ ಮೋದಿ ಜೊತೆಗಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದರೂ, ವಾಸ್ತವದಲ್ಲಿ ಯಾವುದೇ ಸಮಸ್ಯೆಗಳು ಬಗೆಹರಿದಿರಲಿಲ್ಲ. ಈ ನಿರಂತರ ಸಂಘರ್ಷ ಮತ್ತು ಪ್ರಾಣಭಯದ ಕಾರಣದಿಂದಲೇ ಅಂತಿಮವಾಗಿ ತಾವು ಕ್ರಿಕೆಟ್ ಪ್ರಪಂಚದಿಂದ ಸಂಪೂರ್ಣವಾಗಿ ದೂರ ಸರಿಯಲು ನಿರ್ಧರಿಸಿದ್ದಾಗಿ ಲಲಿತ್ ಮೋದಿ ಸ್ಪಷ್ಟಪಡಿಸಿದ್ದಾರೆ.