image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಜೂನ್ 6 ರಂದು ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯಿಂದ ಬೃಹತ್ ಧರಣಿ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಜೂನ್ 6 ರಂದು ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯಿಂದ ಬೃಹತ್ ಧರಣಿ

ನವದೆಹಲಿ : ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡಿಂಗ್ ಟಾಪಿಕ್ ಆಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ವಿರೋಧಿಸಿ ಬರುವ ಶನಿವಾರ (ಜೂನ್ 6) ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಧರಣಿಯ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಲಾಗುವುದು ಎಂದು ತಿಳಿದುಬಂದಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕಾಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ ಅಭಿಜೀತ್ ದಿಪ್ಕೆ ಅವರೂ ಸಹ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದ ರಾಜಧಾನಿಯಲ್ಲಿ ದೊಡ್ಡ ಮಟ್ಟದ ಧರಣಿ ಪ್ರದರ್ಶನ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ, ಕಾಕ್ರೋಚ್ ಪಕ್ಷದ ಬೆಂಬಲಿಗ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. ‘ಅಮಿತ್ ಕುಮಾರ್ ಸಿಂಧಿ’ ಎಂಬ ಎಕ್ಸ್ (ಟ್ವಿಟರ್) ಖಾತೆಯಿಂದ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ, "ಜೂನ್ 6 ರಂದು ನಾವು ಬೃಹತ್ ಧರಣಿ ನಡೆಸಲಿದ್ದೇವೆ. ಈ ಪ್ರತಿಭಟನೆಗೆ ಅಭಿಜೀತ್ ದಿಪ್ಕೆ ಅವರು ಬರುತ್ತಿದ್ದು, ಅವರನ್ನು ವಿಮಾನ ನಿಲ್ದಾಣದಲ್ಲಿಯೇ ತಡೆಯುವ ಯೋಜನೆ ನಡೆಯುತ್ತಿದೆ. ಆದ್ದರಿಂದ ಪ್ರತಿಭಟನೆಗೆ ಬರುವ ಸಾರ್ವಜನಿಕರು ಮತ್ತು ಬೆಂಬಲಿಗರು ತಮ್ಮ ಕೈಯಲ್ಲಿ ದೊಣ್ಣೆ ಹಾಗೂ ಪೆಪ್ಪರ್ ಸ್ಪ್ರೇಯನ್ನು ತೆಗೆದುಕೊಂಡು ಬನ್ನಿ. ನಾವು ಭಾರತವನ್ನು ನೇಪಾಳವನ್ನಾಗಿ ಪರಿವರ್ತಿಸಬೇಕು ಮತ್ತು ವಿಮಾನ ನಿಲ್ದಾಣವನ್ನು ಧ್ವಂಸಗೊಳಿಸಬೇಕು," ಎಂದು ಆತ ಕರೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮತ್ತೊಂದೆಡೆ, ಕಾಕ್ರೋಚ್ ಜನತಾ ಪಾರ್ಟಿಯು ತನ್ನ ಸಾಂಸ್ಥಿಕ ಬೆಳವಣಿಗೆಯ ಭಾಗವಾಗಿ ಬುಧವಾರ (ಜೂನ್ 3) ಮೂವರು ಪ್ರಮುಖ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳನ್ನು (Influencers) ಪಕ್ಷದ ಅಧಿಕೃತ ವಕ್ತಾರರನ್ನಾಗಿ ನೇಮಕ ಮಾಡಿದೆ. ಈ ಕುರಿತು ಮಾಹಿತಿ ನೀಡಿರುವ ಪಕ್ಷದ ಸ್ಥಾಪಕ ಅಭಿಜೀತ್ ದೀಪ್ಕೆ, ತನಿಖಾ ಪತ್ರಕರ್ತ ಸೌರವ್ ದಾಸ್, ಲೇಖಕಿ ವಿಜೇತಾ ದಹಿಯಾ ಹಾಗೂ ಐಐಟಿ ಕಾನ್ಪುರ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಹಳೆಯ ವಿದ್ಯಾರ್ಥಿ ಅಶುತೋಷ್ ರಂಕಾ ಅವರನ್ನು ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಿದ್ದಾರೆ. ಮುಂಬರುವ ಜೂನ್ 6 ರ ದೆಹಲಿ ಪ್ರತಿಭಟನೆಯ ಸಿದ್ಧತೆಗಳ ನಡುವೆಯೇ ಪಕ್ಷದ ಈ ವಿಸ್ತರಣೆ ಮತ್ತು ವೈರಲ್ ವಿಡಿಯೋ ಜಂಟಿಯಾಗಿ ದೇಶಾದ್ಯಂತ ಸಂಚಲನ ಸೃಷ್ಟಿಸಿವೆ.

Category
ಕರಾವಳಿ ತರಂಗಿಣಿ